ಉಡುಪಿ : 2000 ಮಂದಿ ಸಹಕಾರಿಗಳ ಆಕರ್ಷಕ ಮೆರವಣಿಗೆ

Update: 2019-11-18 16:37 GMT

ಉಡುಪಿ, ನ.18: 66ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಇಂದು ನಗರದ ಶ್ರೀಮತಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಹಾಗೂ ಇತರ ಸಹಕಾರಿ ಸಂಘಸಂಸ್ಥೆಗಳ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ಕಾರ್ಯ ಕ್ರಮದಲ್ಲಿ ಹಮ್ಮಿಕೊಂಡ ಕರ್ಷಕ ಬೃಹತ್ ಮೆರವಣಿಗೆಗೆ ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರಕುಮಾರ್ ಜೋಡುಕಟ್ಟೆಯಲ್ಲಿ ಚಾಲನೆ ನೀಡಿದರು.

ಮೆರವಣಿಗೆಯಲ್ಲಿ ಸಹಕಾರಿ ಸಂಸ್ಥೆಗಳ ಸಿಬಂದಿಗಳು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ನವೋದಯ ಸ್ವಸಹಾಯ ಸಂಘಗಳ ಸದಸ್ಯರು ಸೇರಿದಂತೆ 2,000ಕ್ಕೂ ಅಧಿಕ ಮಂದಿ ಉತ್ಸಾಹದಿಂದ ಭಾಗವಹಿಸಿದರು. ಸಹಕಾರಿ ಸಂಘ, ಮೀನುಗಾರರ ಸಹಕಾರಿ ಸಂಘ, ದ.ಕ. ಹಾಲು ಉತ್ಪಾದಕರ ಸಹಕಾರಿ ಸಂಘದ ವಿವಿಧ ಟ್ಯಾಬ್ಲೋಗಳೊಂದಿಗೆ ಉಡುಪಿ ಸಂಸ್ಕೃತಿ ಬಿಂಬಿಸುವ ಶ್ರೀಕೃಷ್ಣನ ದೇವರ ಮೂರ್ತಿ ಇರುವ ಟ್ಯಾಬ್ಲೋ ಹಾಗೂ ಸಹಕಾರಿ ರಥ ಮೆರವಣಿಗೆಗೆ ಎಲ್ಲರನ್ನು ಆಕರ್ಷಿಸಿದವು.

ಮೆರಣಿಗೆಯಲ್ಲಿ ಕೀಲು ಕುದರೆ, ನಾಸಿಕ್ ಬ್ಯಾಂಡ್, ಚೆಂಡೆ, ಜಾಗಟೆ, ಯಕ್ಷಗಾನ, ಕೊಂಬು, ಜೋಕರ್, ಕೋಳಿ ನೃತ್ಯ, ತಟ್ಟಿರಾಯನ ಕುಣಿತ, ಬಡಗುಬೆಟ್ಟು ಕೋ-ಆಪರೇಟಿವ್ ಸೊಸೈಟಿಯ ಸಿಬಂದಿಗಳ ಜಾಗಟೆ ಧ್ವನಿ ಯೊಂದಿಗೆ ಸುಮಾರು 200 ಪೂರ್ಣ ಕುಂಭ ಕಲಶದೊಂದಿಗೆ ಸಮಾರಂಭದ ಗಣ್ಯ ಅತಿಥಿಗಳನ್ನು ರಥದ ಮೂಲಕ ಮೆರವಣಿಗೆಯಲ್ಲಿ ಪುರಭವನದಿಂದ ಜೋಡುಕಟ್ಟೆ, ಮಿಷನ್ ಆಸ್ಪತ್ರೆ ಮಾರ್ಗವಾಗಿ ಸಭಾಂಗಣಕ್ಕೆ ಕರೆ ತರಲಾಯಿತು.

ಮೆರವಣಿಗೆಯಲ್ಲಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ, ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಅಶೋಕ್ ಕುಮಾರ್ ಶೆಟ್ಟಿ, ಬೆಳಪು ದೇವಿಪ್ರಸಾದ್ ಶೆಟ್ಟಿ, ಶ್ರೀಧರ ಬಿಎಸ್, ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಹರೀಶ್ ಕಿಣಿ, ಸಹಕಾರಿ ಸಂಘಗಳ ಉಪನಿಬಂಧಕಿ ಚಂದ್ರಪ್ರತಿಮಾ, ಅವಿಭಜಿತ ದ.ಕ. ಜಿಲ್ಲೆ ಮೀನುಮಾರಾಟ ಸಹಕಾರಿ ಸಂಘದ ಅಧ್ಯಕ್ಷ ಯಶಪಾಲ್ ಸುವರ್ಣ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News