'ಭೂಮಿ ತಂತ್ರಾಂಶ ಬಳಸಿ ಸಹಕಾರಿ ಸಂಸ್ಥೆಗಳಲ್ಲಿ ರೈತರಿಗೆ ಸ್ಥಳದಲ್ಲೇ ಸಾಲ'

Update: 2019-11-18 16:41 GMT

ಉಡುಪಿ, ನ.18: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಲ್ಲಾ ಸಹಕಾರಿ ಸಂಸ್ಥೆಗಳಲ್ಲಿ ನಮ್ಮ ತಂತ್ರಾಂಶ(ಸಾಫ್ಟವೇರ್)ಗಳಲ್ಲಿ ಸರಕಾರದ ಭೂಮಿ ತಂತ್ರಾಂಶವನ್ನು ಅಳವಡಿಸಿ, ಸಾಲಕ್ಕಾಗಿ ಬರುವ ರೈತನೊಬ್ಬನ ಸಂಪೂರ್ಣ ವಿವರಗಳನ್ನು ಪಡೆದು ಸ್ಥಳದಲ್ಲೇ ಸಾಲವನ್ನು ನೀಡುವ ಯೋಜನೆಯನ್ನು ಅನುಷ್ಠಾನಗೊಳಿಸಲಿದ್ದೇವೆ ಎಂದು ಮಂಗಳೂರು ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದ್ದಾರೆ.

ಬೆಂಗಳೂರು ರಾಜ್ಯ ಸಹಕಾರ ಮಹಾಮಂಡಳಿ, ಬೆಂಗಳೂರು ರಾಜ್ಯ ಸಹಕಾರ ಮಾರಾಟ ಮಹಾಮಂಡಳ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್, ದ.ಕ. ಹಾಲು ಉತ್ಪಾದಕರ ಒಕ್ಕೂಟ, ದ.ಕ. ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಮಹಾಮಂಡಳ, ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಹಾಗೂ ವಿವಿಸಂಘಗಳಸಂಸ್ಥೆಗಳಆಶ್ರಯದಲ್ಲಿಅಮ್ಮಣ್ಣಿರಾಮಣ್ಣಶೆಟ್ಟಿಸಾವನದಲ್ಲಿಸೋಮವಾರನಡೆದ66ನೇಅಖಿಲಾರತ ಸಹಕಾರ ಸಪ್ತಾಹದ ರಾಜ್ಯಮಟ್ಟದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡು ತಿದ್ದರು.

ನಮ್ಮ ಸಹಕಾರಿ ಸಂಸ್ಥೆಗಳಲ್ಲಿ ಸರಕಾರದ ಎಲ್ಲಾ ಯೋಜನೆಗಳನ್ನು ನಾವು ಜಾರಿ ಗೊಳಿಸುತ್ತೇವೆ. ಆದರೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ತಮ್ಮ ಇಲಾಖಾ ಹಣವನ್ನು ಸಹಕಾರಿ ಸಂಸ್ಥೆಗಳಲ್ಲಿ ಠೇವಣಿ ಇಡಲು ಹಿಂದೇಟು ಹಾಕುತಿದ್ದು, ಕೇವಲ ರಾಷ್ಟ್ರೀಕೃತ ಬ್ಯಾಂಕುಗಳಲ್ಲೇ ದುಡ್ಡನ್ನು ಇರಿಸುತ್ತಿವೆ. ಇದೀಗ ಸಹಕಾರ ಸಚಿವ ಬಸವರಾಜ ಬೊಮ್ಮಾಯಿ ಅವರು ಸಹಕಾರಿ ಬ್ಯಾಂಕುಗಳಲ್ಲೂ ಸರಕಾರದ ದುಡ್ಡನ್ನು ಇಡುವ ಘೋಷಣೆ ಮಾಡಿದ್ದು, ಅವರನ್ನು ಅಭಿನಂದಿಸುತ್ತೇವೆ ಎಂದರು.

ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ತಲುಪಲು ಸಾಧ್ಯವಾಗುವುದು ಸಹಕಾರಿ ಸಂಸ್ಥೆಗಳಿಂದ ಮಾತ್ರ ಸಾಧ್ಯ, ವಾಣಿಜ್ಯ ಬ್ಯಾಂಕುಗಳಿಂದ ಇದು ಸಾಧ್ಯವಿಲ್ಲ. ಜನರ ನಾಡಿಮಿಡಿತವನ್ನು ಅರಿತು ನಾವು ಕೆಲಸ ಮಾಡುತ್ತೇವೆ. ಜಿಲ್ಲೆಯಲ್ಲಿ 176 ಸಹಕಾರಿ ಸಂಸ್ಥೆಗಳಿದ್ದು, ಎಲ್ಲವುಗಳಿಗೂ ಸ್ವಂತ ಕಟ್ಟಡವಿದೆ. ಆದರೆ ರಾ.ಬ್ಯಾಂಕುಗಳು ಬಾಡಿಗೆ ಕಟ್ಟಡದಲ್ಲೇ ಕಾರ್ಯನಿರ್ವಹಿಸುತ್ತವೆ ಎಂದವರು ನುಡಿದರು.

ಜನರ ಪ್ರೀತಿ ವಿಶ್ವಾಸವನ್ನು ಸಹಕಾರಿ ಸಂಸ್ಥೆಗಳು ಗಳಿಸಿಕೊಂಡಿವೆ. ಸಮಾಜದ ಆಗುಹೋಗುಗಳಲ್ಲೂ ನಾವು ತೊಡಗಿಸಿಕೊಂಡಿದ್ದೇವೆ. ಇಂದು ವಾಣಿಜ್ಯ ಬ್ಯಾಂಕ್ ಶಾಖೆಗಳಲ್ಲಿ ಸ್ಥಳೀಯ ಭಾಷೆ ತಿಳಿಯದ ಸಿಬ್ಬಂದಿಗಳಿದ್ದರೆ, ನಮ್ಮ ಸಿಬ್ಬಂದಿಗಳು ಸ್ಥಳೀಯರೇ ಆಗಿರುತ್ತಾರೆ. ಇದು ನಮ್ಮ ಗ್ರಾಹಕರನ್ನು ಅರಿಯಲು ನಮಗೆ ಸಹಾಯವಾಗುತ್ತದೆ ಎಂದು ಡಾ.ರಾಜೇಂದ್ರಕುಮಾರ್ ತಿಳಿಸಿದರು.

ನಾವು ಸಾಲ ನೀಡುವುದು ದೊಡ್ಡ ಶ್ರೀಮಂತರಿಗಲ್ಲ, ಜನಸಾಮಾನ್ಯರಿಗೆ. ಕಳೆದ 23 ವರ್ಷಗಳಿಂದ ಕೃಷಿ ಸಾಲ ಪಡೆದ ಎಲ್ಲಾ ರೈತರು ಸಕಾಲದಲ್ಲಿ ಮರು ಪಾವತಿ ಮಾಡಿದ್ದು, ದೇಶದಲ್ಲೇ ಇದೊಂದು ದಾಖಲೆ. ಸರಕಾರದ ಎಲ್ಲಾ ಯೋಜನೆಗಳನ್ನು ಜಾರಿಗೊಳಿಸಲು ನಾವು ಸಿದ್ಧ, ಆದರೆ ನಮ್ಮ ಕಡೆಗೂ ಸ್ವಲ್ಪ ಗಮನ ನೀಡಬೇಕಾಗಿದೆ ಎಂದವರು ಮನವಿ ಮಾಡಿದರು.

ಸಹಕಾರ ವಾರಪತ್ರಿಕೆಯ ವಿಶೇಷ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದ ರಾಜ್ಯ ಸಹಕಾರ ಮಹಾಮಂಡಲ ಅಧ್ಯಕ್ಷ ಎನ್.ಗಂಗಣ್ಣ, ರಾಜ್ಯದಲ್ಲಿ 43,650 ಸಹಕಾರ ಸಂಘಗಳಿದ್ದು, 2.50 ಕೋಟಿ ಮಂದಿ ಸಹಕಾರ ಚಳುವಳಿಯಲ್ಲಿ ಭಾಗವಹಿಸಿದ್ದಾರೆ. ವಾಣಿಜ್ಯ ಬ್ಯಾಂಕ್‌ನ ಎನ್‌ಪಿಎ ಹೆಚ್ಚಾದರೆ ಕೇಂದ್ರ, ರಾಜ್ಯ ಸರ್ಕಾರಗಳು ನೆರವು ನೀಡುತ್ತವೆ. ಆದರೆ ಸಹಕಾರಿ ಬ್ಯಾಂಕ್ ನಷ್ಟದಲ್ಲಿದ್ದರೆ ಸರಕಾರಗಳ ಸಹಾಯಹಸ್ತ ಕಡಿಮೆ. ವಾಣಿಜ್ಯ ಬ್ಯಾಂಕಗಳಿಗೆ ಶೇ. 22ರಷ್ಟು ತೆರಿಗೆ ಇದ್ದರೆ ಸಹಕಾರ ಸಂಘಗಳಿಗೆ ಶೇ. 30ರಷ್ಟು ತೆರಿಗೆ ಹಾಕಲಾಗುತ್ತದೆ. ಈ ತಾರತಮ್ಯವನ್ನು ಪ್ರಶ್ನಿಸುವ ಹಾಗೂ ಇದನ್ನು ಹೋಗಲಾಡಿಸುವ ಅಗತ್ಯವಿದೆ ಎಂದರು.

ಆರ್‌ಸಿಇಪಿ ಒಪ್ಪಂದಕ್ಕೆ ಪ್ರಧಾನಿ ಮೋದಿ ಸಹಿ ಹಾಕದೆ ಹೈನುಗಾರರ ಹಿತ ಕಾಪಾಡಿದ್ದಾರೆ. ಅದಕ್ಕೆ ಅವರಿಗೆ ಅಭಿನಂದನೆ ಸಲ್ಲಿಸುವ ಅಗತ್ಯವಿದೆ. ಮುಕ್ತ ಮಾರುಕಟ್ಟೆ ನೀತಿ ದೇಶದಲ್ಲಿ ಜಾರಿಯಾದರೆ ಹೈನುಗಾರರು ಸರಣಿ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣ ವಾಗುತ್ತಿತ್ತು. ಮುಂದೆಯೂ ಅವರು ಈ ಒಪ್ಪಂದಕ್ಕೆ ಸಹಿ ಹಾಕದಂತೆ ಒತ್ತಡ ಹೇರುವ ಅಗತ್ಯವಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಉಡುಪಿ ಶಾಸಕ ರಘುಪತಿ ಭಟ್ ಮಾತನಾಡಿ, ಸ್ಥಳೀಯ ಮಟ್ಟದಲ್ಲಿ ಸರಕಾರಿ ಇಲಾಖೆಗಳ ಹಣವನ್ನು ಠೇವಣಿಗಾಗಿ ಸಹಕಾರಿ ಸಂಸ್ಥೆ ಗಳಲ್ಲಿ ಖಾತೆ ತೆರೆಯಲು ಅನುವು ಮಾಡಿಕೊಡುವಂತೆ ಮುಂದಿನ ಅಧಿವೇಶನ ದಲ್ಲಿ ಸರಕಾರದ ಗಮನಸೆಳೆಯುವುದಾಗಿ ತಿಳಿಸಿದರು.

ಸಹಕಾರಿ ಸಂಸ್ಥೆಗಳ ಸದಸ್ಯರಿಗೆ ಹಾಗೂ ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಯಶಸ್ವಿನಿ ಯೋಜನೆಯನ್ನು ಮರು ಜಾರಿಗೊಳಿಸುವಂತೆ ಈಗಾಗಲೇ ಆರೋಗ್ಯ ಸಚಿವರಿಗೆ ಮನವಿ ಮಾಡಲಾಗಿದೆ. ಮುಂದಿನ ಬಜೆಟ್‌ನಲ್ಲಿ ಜಾರಿಗೊಳಿಸಲು ಆಗ್ರಹಿಸಲಾುವುದು ಎಂದು ಭಟ್ ನುಡಿದರು.

ಜಿಪಂ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ, ತಾಪಂ ಅಧ್ಯಕ್ಷೆ ನೀತಾ ಗುರುರಾಜ್ ಪೂಜಾರಿ, ದ.ಕ., ಉಡುಪಿ ಮೀನುಗಾರರ ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಕೆಎಂಎಫ್ ನಿರ್ದೇಶಕ ಕಾಪು ದಿವಾಕರ ಶೆಟ್ಟಿ, ರಾಜ್ಯ ಸೌಹಾರ್ದ ಸಹಕಾರಿ ನಿರ್ದೇಶಕ ಎಸ್.ಕೆ. ಮಂಜುನಾಥ್, ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಅಶೋಕ್ ಕುಮಾರ್ ಶೆಟ್ಟಿ, ಬೆಳಪು ದೇವಿಪ್ರಸಾದ್ ಶೆಟ್ಟಿ, ಶ್ರೀಧರ ಬಿಎಸ್, ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಹರೀಶ್ ಕಿಣಿ, ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ, ಸರಳಾ ಕಾಂಚನ್, ಕೃಷ್ಣರಾಜ ಸರಳಾಯ ಅಧಿಕಾರಿಗಳಾದ ಎಚ್.ಎಸ್. ಪೂರ್ಣಿಮಾ, ಅರುಣ್‌ಕುಮಾರ್, ರವೀಂದ್ರ, ನುಸ್ರತ್ ಉಪಸ್ಥಿತರಿದ್ದರು.

ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮಕ್ಕೂ ಮುನ್ನ 2 ಸಾವಿರಕ್ಕೂ ಅಧಿಕ ಸಹಕಾರಿಗಳು, ನವೋದಯ ಸ್ವ-ಸಹಾಯ ಸಂಘದ ಸದಸ್ಯರಿಂದ ಜೋಡುಕಟ್ಟೆಯಿಂದ ಸಭಾಭವನವರೆಗೆ ಸಹಕಾರಿ ಜಾಥ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News