ನಕಲಿ ಆನ್‍ಲೈನ್ ಅರ್ಜಿಯಿಂದ ಲಕ್ಷಾಂತರ ರೂ. ವಂಚನೆ: ಮಾಜಿ ಸೈನಿಕನಿಂದ ದೂರು

Update: 2019-11-18 16:43 GMT

ಪುತ್ತೂರು: ಗ್ಯಾಸ್ ಪಂಪ್ ಸಂಸ್ಥೆ ನಿರ್ಮಾಣಕ್ಕಾಗಿ ಆನ್‍ಲೈನ್ ಖಾತೆಗೆ ಲಕ್ಷಾಂತರ ರೂ. ರವಾನೆ ಮಾಡಿ, ಹಣ ಕಳೆದುಕೊಂಡ ಮಾಜಿ ಸೈನಿಕರೊಬ್ಬರು ತನಗೆ ವಂಚನೆಯಾಗಿರುವ ಬಗ್ಗೆ ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದಾರೆ. 

ಪುತ್ತೂರು ತಾಲೂಕಿನ ನರಿಮೊಗರು ನಿವಾಸಿ ಮಾಜಿ ಸೈನಿಕ ಗಣೇಶ್ ಎಂಬವರು ವಂಚನೆಗೆ ಒಳಗಾದ ವ್ಯಕ್ತಿ. ಗಣೇಶ್ ಅವರು ಗ್ಯಾಸ್ ಪಂಪ್ ಸಂಸ್ಥೆ ಪ್ರಾರಂಭಿಸಲು ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ ಸಂಸ್ಥೆಗೆ ಇಂಟರ್‍ನೆಟ್ ಮೂಲಕ ಸಂಪರ್ಕಿಸಿ ಮಾಹಿತಿ ಪಡೆದು ಆನ್‍ಲೈನ್ ಅರ್ಜಿ ಭರ್ತಿ ಮಾಡಿ ತನ್ನೆಲ್ಲಾ ದಾಖಲೆಗಳನ್ನು ಸಲ್ಲಿಕೆ ಮಾಡಿದ್ದರು. ಬಳಿಕ ಅತ್ತ ಕಡೆಯಿಂದ ಕೇಳಿದಂತೆ ತನ್ನ ವಾಟ್ಸಪ್ ಸಂಖ್ಯೆ, ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ ಎಲ್ಲವನ್ನೂ ನೀಡಿದ್ದರು. ಆ ಬಳಿಕ ಅತ್ತ ಕಡೆಯಿಂದ ಬಂದ ಕೇಳಿಕೆಯಂತೆ ನ.11ರಂದು ಅರ್ಜಿ ನೋಂದಾವಣೆಗೆಂದು ರೂ. 30 ಸಾವಿರ ಸಲ್ಲಿಸಿದ್ದರು.

ನ.12ರಂದು ಅರ್ಜಿ ವೆರಿಫಿಕೇಶ್ ಆಗಿದೆ ಎಂದು ಮಾಹಿತಿ ಬಂದಿತ್ತು ಹಾಗೂ ರೂ.3.75 ಲಕ್ಷ ಪಾವತಿಸುವಂತೆ ಸೂಚಿಸಿದ ಕಾರಣ ಅದನ್ನು ಪಾವತಿಸಿದ್ದರು.  ಅದೇ ದಿನ ಡೀಲರ್‍ಶಿಫ್‍ಗಾಗಿ ರೂ. 1,65,100, ಸೆಕ್ಯೂರಿಟಿಗಾಗಿ ರೂ. 4 ಲಕ್ಷ ಮತ್ತು ಇನ್ಸೂರೆನ್ಸ್‍ಗಾಗಿ ರೂ.3,95,500 ಪಾವತಿಸಲು ತಿಳಿಸಲಾಗಿದ್ದು, ಇದರಂತೆ ಎಲ್ಲಾ ಹಣವನ್ನೂ ಪಾವತಿಸಿದ್ದರು. 

ನ.16ರಂದು ಸ್ಥಳ ಪರಿಶೀಲನೆಗೆ ಬರುವುದಾಗಿ ಅತ್ತ ಕಡೆಯಿಂದ ಮೆಸೇಜ್ ಬಂದಿತ್ತು. ಸ್ಥಳ ತನಿಖೆಗೆ ಯಾರೂ ಬಂದಿರಲಿಲ್ಲ. ತಾನು ಮಾಹಿತಿ, ದಾಖಲೆ ಹಾಗೂ ಹಣವನ್ನು ನೀಡಿರುವುದು ನಕಲಿ ಆನ್‍ಲೈನ್ ಖಾತೆ ಎಂದು ಗಣೇಶ್ ಅವರಿಗೆ ಆ ಬಳಿಕ ಗೊತ್ತಾಗಿತ್ತು. ಆದರೆ ಅಷ್ಟೊತ್ತಿಗಾಗಲೇ ಗಣೇಶ್ ಅವರು ಲಕ್ಷಾಂತರ ರೂಪಾಯಿ ಕಳೆದುಕೊಂಡಾಗಿತ್ತು. ಇದೀಗ ತಾನು ಮೋಸ ಹೋಗಿರುವ ಕುರಿತಯು ಗಣೇಶ್ ಅವರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News