250ನೇ ಅಧಿವೇಶನ ಆರಂಭ: ಪ್ರಜಾಪ್ರಭುತ್ವದಲ್ಲಿ ರಾಜ್ಯಸಭೆಯ ಪಾತ್ರಕ್ಕೆ ಮೋದಿ ಪ್ರಶಂಸೆ

Update: 2019-11-18 17:04 GMT

ಹೊಸದಿಲ್ಲಿ, ನ.18: ರಾಜ್ಯಸಭೆಯು ಭಾರತೀಯ ಪ್ರಜಾಪ್ರಭುತ್ವದಲ್ಲಿ ನಿಗಾ ಮತ್ತು ಸಮತೋಲನವನ್ನು ಒದಗಿಸುವ ಸಂಸ್ಥೆಯಾಗಿದೆ ಎಂದು ಸಂಸತ್ತಿನ ಚಳಿಗಾಲದ ಮೊದಲ ದಿನವಾದ ಸೋಮವಾರ ಹೇಳಿದ ಪ್ರಧಾನಿ ನರೇಂದ್ರ ಮೋದಿ ಅವರು,ಆದರೆ ನಿಗಾಕ್ಕೂ ಅಡಚಣೆಗೂ ವ್ಯತ್ಯಾಸವಿದೆ ಎಂದು ಹಿಂದಿನ ಅಧಿವೇಶನಗಳಲ್ಲಿಯ ವ್ಯತ್ಯಯಗಳನ್ನು ಪ್ರಸ್ತಾಪಿಸಿ ಹೇಳಿದರು.

ಇದೇ ವೇಳೆ ಅತ್ತ ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕರು ನ್ಯಾಷನಲ್ ಕಾನ್‌ಫರೆನ್ಸ್ ನಾಯಕ ಹಾಗೂ ಶ್ರೀನಗರದ ಸಂಸದ ಫಾರೂಕ್ ಅಬ್ದುಲ್ಲಾರ ಬಂಧನಕ್ಕಾಗಿ ಕೇಂದ್ರವನ್ನು ಟೀಕಿಸಿದರು.

ರಾಜ್ಯಸಭೆಯ 250ನೇ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಮೋದಿ,ರಾಜ್ಯಸಭೆಯು ಎರಡನೇ ಸದನವಾಗಿರಬಹುದು,ಆದರೆ ಅದು ಅಧೀನ ಸದನವಲ್ಲ ಎಂಬ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೇಳಿಕೆಯನ್ನು ನೆನಪಿಸಿಕೊಂಡರು. ಇಂದು ತಾನೂ ವಾಜಪೇಯಿಯವರ ಭಾವನೆಯನ್ನು ಪ್ರತಿಧ್ವನಿಸುತ್ತಿದ್ದೇನೆ ಎಂದ ಅವರು,ರಾಜ್ಯಸಭೆಯು ರಾಷ್ಟ್ರೀಯ ಪ್ರಗತಿಗಾಗಿ ಮಿಡಿಯುವ ಪೂರಕ ಸದನವಾಗಬೇಕಿದೆ ಎಂದರು.

ಎನ್‌ಸಿಪಿ ಮತ್ತು ಬಿಜೆಡಿ ಪಕ್ಷಗಳನ್ನು ಪ್ರಶಂಸಿಸಿದ ಮೋದಿ,ಈ ಪಕ್ಷಗಳು ಎಂದೂ ಸದನದ ಬಾವಿಗೆ ನುಗ್ಗದೆ ಸಂಸದೀಯ ನಿಯಮಗಳನ್ನು ಪಾಲಿಸುತ್ತಿವೆ,ಆದರೂ ತಮ್ಮ ಅಭಿಪ್ರಾಯಗಳನ್ನು ಪರಿಣಾಮಕಾರಿಯಾಗಿ ಮಂಡಿಸುತ್ತಿವೆ ಎಂದು ಹೇಳಿದರು.

ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರಂತಹ ದಿಗ್ಗಜರು ರಾಜ್ಯಸಭೆಯ ಮೂಲಕ ರಾಷ್ಟ್ರದ ಪ್ರಗತಿಗೆ ಹೆಚ್ಚಿನ ಕೊಡುಗೆ ಸಲ್ಲಿಸಿದ್ದನ್ನು ಯಾರೂ ಮರೆಯುವಂತಿಲ್ಲ ಎಂದರು.

ಲೋಕಸಭೆಯಲ್ಲಿ ಗದ್ದಲ

ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರನ್ನು ಬಂಧನದಲ್ಲಿರಿಸಿರುವ ಬಗ್ಗೆ ಕಳವಳಗಳನ್ನು ವ್ಯಕ್ತಪಡಿಸಿದ ಪ್ರತಿಪಕ್ಷ ನಾಯಕರು ಬಂಧನವು ಅಕ್ರಮವಾಗಿದೆ ಎಂದು ಬಣ್ಣಿಸಿದರು. ಅವರು ಸಂಸತ್ತಿಗೆ ಹಾಜರಾಗಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

ಅಬ್ದುಲ್ಲಾ ಅವರು ಶ್ರೀನಗರವನ್ನು ಪ್ರತಿನಿಧಿಸುತ್ತಿದ್ದಾರೆ. ತಮ್ಮ ಧ್ವನಿ ಸದನದಲ್ಲಿ ಆಲಿಸಲ್ಪಡಬೇಕು ಎನ್ನುವುದು ಅಲ್ಲಿಯ 20 ಲಕ್ಷ ಜನರ ಹಕ್ಕು ಆಗಿದೆ ಎಂದ ಎನ್‌ಸಿ ಸಂಸದ ಹಸ್ನೈನ್ ಮಸೂದಿ ಅವರು,ಅಬ್ದುಲ್ಲಾ ನ್ಯಾಯಾಂಗ ಬಂಧನದಲ್ಲಿಲ್ಲ,ಅವರನ್ನು ಮುನ್ನೆಚ್ಚರಿಕೆ ಕ್ರಮವಾಗಿ ಕಸ್ಟಡಿಯಲ್ಲಿಡಲಾಗಿದೆ ಎನ್ನುವುದಕ್ಕೆ ತನ್ನ ಬಳಿ ಆಧಾರಗಳಿವೆ ಎಂದರು.

ಕಾಶ್ಮೀರ ಕಣಿವೆಯ ಭೇಟಿಗೆ ಭಾರತೀಯ ನಾಯಕರಿಗೆ ಅನುಮತಿ ನಿರಾಕರಿಸಿ ಐರೋಪ್ಯ ಒಕ್ಕೂಟದ ಸಂಸದರಿಗೆ ಅವಕಾಶ ನೀಡಿದ್ದನ್ನು ಕಾಂಗ್ರೆಸ್ ನಾಯಕ ಆಧಿರ ರಂಜನ್ ಚೌಧರಿ ಟೀಕಿಸಿದರು. ಇತರ ಪ್ರತಿಪಕ್ಷ ಸಂಸದರೂ ಅವರೊಂದಿಗೆ ಧ್ವನಿಗೂಡಿಸಿದಾಗ ಕೋಲಾಹಲ ಸೃಷ್ಟಿಯಾಗಿತ್ತು. ರೈತರಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದ ಶಿವಸೇನೆಯ ಸದಸ್ಯರು ಸಭಾತ್ಯಾಗ ನಡೆಸಿದರು.

ಶ್ರದ್ಧಾಂಜಲಿ ಸಲ್ಲಿಕೆ

ರಾಜ್ಯಸಭೆಯು ಬೆಳಿಗ್ಗೆ ಇತ್ತೀಚಿಗೆ ನಿಧನರಾದ ಸದಸ್ಯರಾದ ಅರುಣ ಜೇಟ್ಲಿ,ರಾಮ ಜೇಠ್ಮಲಾನಿ,ಮಾಜಿ ಸದಸ್ಯರಾದ ಜಗನ್ನಾಥ ಮಿಶ್ರಾ,ಗುರುದಾಸ ದಾಸಗುಪ್ತಾ ಮತ್ತು ಸುಖದೇವ ಸಿಂಗ್ ಲಿಬ್ರಾ ಅವರಿಗೆ ಶ್ರದ್ಧಾಂಜಲಿಗಳನ್ನು ಸಲ್ಲಿಸಿತು.

ಮಾರ್ಷಲ್‌ಗಳ ಹೊಸವೇಷ

ರಾಜ್ಯಸಭೆಯ 250ನೇ ಅಧಿವೇಶನದ ಅಂಗವಾಗಿ ಮಾರ್ಷಲ್‌ಗಳು ಹೊಸ ಸಮವಸ್ತ್ರ ಪಡೆದಿದ್ದಾರೆ. ಅವರೀಗ ಸಾಂಪ್ರದಾಯಿಕ ಕುರ್ತಾ ಮತ್ತು ಪಗಡಿಯ ಬದಲು ಮಿಲಿಟರಿ ಮಾದರಿಯ ಸಮವಸ್ತ್ರ ಮತ್ತು ಕ್ಯಾಪ್‌ಗಳಲ್ಲಿ ಮಿಂಚಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News