ಉಡುಪಿ ಜನತೆ ಯೋಗವ್ರತಸ್ಥರಾಗಿ: ರಾಮದೇವ್ ಆಶಯ

Update: 2019-11-20 14:16 GMT

ಉಡುಪಿ, ನ. 20: ಉಡುಪಿಯ ಜನತೆ ನಿತ್ಯ ಯೋಗ, ಪ್ರಾಣಾಯಾಮ ಮಾಡುವ ಮೂಲಕ ಯೋಗವ್ರತಸ್ಥರಾಗಿ ಎಂದು ಯೋಗಗುರು ಬಾಬಾ ರಾಮದೇವ್ ಅವರು ಉಡುಪಿಯಲ್ಲಿ ತಮ್ಮ ಐದು ದಿನಗಳ ಯೋಗಶಿಬಿರದ ಮುಕ್ತಾಯದ ವೇಳೆ ಹಾರೈಸಿದರು.

ಕಳೆದ ಐದು ದಿನಗಳಿಂದ ಮುಂಜಾನೆ ಐದು ಗಂಟೆಯಿಂದ 7:30ರವರೆಗೆ ಉಡುಪಿ ಶ್ರೀಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ ಯೋಗ ಶಿಬಿರ ನಡೆಸಿಕೊಟ್ಟ ಬಾಬಾ ರಾಮದೇವ್ ಅವರು ಯೋಗದ ಮೂಲಕ ಸ್ಮಾರ್ಟ್ ಉಡುಪಿ ಪ್ರಸ್ತಾಪವನ್ನೂ ಮುಂದಿಟ್ಟರು.
ಕಳೆದ ಶನಿವಾರ ಪ್ರಾರಂಭಗೊಂಡ ಬಾಬಾ ರಾಮದೇವ್ ಇವರ ಶಿಬಿರದಲ್ಲಿ ಉಡುಪಿ ಜಿಲ್ಲೆ ಮಾತ್ರವಲ್ಲದೇ ಪಕ್ಕದ ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಯೋಗಾಸಕ್ತರು ಸೇರಿದಂತೆ ಸಾವಿರಾರು ಮಂದಿ ಯುವಕರು, ಯುವತಿಯರು, ಮಕ್ಕಳು, ಮಹಿಳೆಯರು, ಹಿರಿಯರೆನ್ನದೇ ಸಮಾಜದ ಎಲ್ಲಾ ವರ್ಗಗಳ ಜನರೂ ಉತ್ಸಾಹದಿಂದ ಪಾಲ್ಗೊಂಡರು.

ಎಂದಿನಂತೆ ಕೊನೆಯ ದಿನವಾದ ಇಂದೂ ಸಹ ಯೋಗಾಭ್ಯಾಸ, ಯೋಗಾಸನಗಳ ನಡುನಡುವೆ ಹಾಸ್ಯ ಚಟಾಕಿಗಳನ್ನು ಹಾರಿಸುತ್ತಾ ಮಾತನಾಡಿದ ರಾಮದೇವ್, ಸ್ವದೇಶೀ ಉತ್ಪನ್ನಗಳನ್ನೇ ಬಳಸುವ ಮೂಲಕ ಸ್ವದೇಶಿ ವ್ರತಸ್ಥರಾಗಿ ಎಂದೂ ಕರೆ ಕೊಟ್ಟರು.

ಯಾವುದೇ ವಸ್ತುವನ್ನು ಖರೀದಿಸುವಾಗ ಅದು ಭಾರತದಲ್ಲಿ ತಯಾರಾದದ್ದೆ, ವಿದೇಶಗಳಲ್ಲಿ ತಯಾರಾದದ್ದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ವಿದೇಶೀ ಉತ್ಪನ್ನಗಳನ್ನು ಹೊರಗಟ್ಟಬೇಕಾಗಿದೆ. ಇದರಿಂದ ದೇಶದ ಆರ್ಥಿಕ ಅಭಿವೃದ್ಧಿಗೂ ಸಹಕಾರಿ ಎಂದು ರಾಮ್‌ದೇವ್ ಅಭಿಪ್ರಾಯಪಟ್ಟರು.

ಸಸ್ಯಾಹಾರವೇ ಸಂಪೂರ್ಣ ನಿರ್ದೋಷ ಆಹಾರ ಪದ್ಧತಿಯಾಗಿದೆ. ಎಲ್ಲ ಜೀವಿಗಳಿಗೂ ಬದುಕುವ ಹಕ್ಕು ಇದೆ. ಆದ್ದರಿಂದ ಪ್ರಾಣಿಗಳನ್ನು ಆಹಾರವಾಗಿ ಸ್ವೀಕರಿಸುವುದು ಸರಿಯಲ್ಲ. ನಾನು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಸೇರಿದಂತೆ ಎಲ್ಲರಿಗೂ ವೇದ ಕಲಿಸುತ್ತಿದ್ದೇನೆ. ನಾನು ಯಾವುದೇ ಜಾತಿ ತಾರತಮ್ಯ ಮಾಡುತ್ತಿಲ್ಲ. ಎಲ್ಲರಿಗೂ ಯೋಗಾಭ್ಯಾಸ ಅತ್ಯವಶ್ಯ ಎಂದು ರಾಮ್‌ದೇವ್ ಹೇಳಿದರು.

ಕೆಲವರು ಕಾಫಿ, ಟೀ, ವೈನ್, ಬಿಯರ್ ಕುಡಿಯುತ್ತಾರೆ. ಇದರಲ್ಲಿ ನಿಕೋಟಿನ್, ಕೆಫಿನ್, ಮಾರ್ಫಿನ್‌ನಂಥ ಉತ್ತೇಜಕಾಂಶಗಳಿವೆ. ನಾನು ಯೋಗದ ಮೂಲಕವೇ ಇಂಡೋರ್ಫಿನ್ ಉತ್ತೇಜಕವನ್ನು ಅನುಭವಿಸುತ್ತೇನೆ. ಯೋಗದಿಂದ ನಿರಾಶೆ, ಒತ್ತಡ, ದುಃಖ ಕಡಿಮೆಯಾಗುತ್ತದೆ ಎಂದರು.

ಸಸ್ಯಾಹಾರ ಕ್ರಮ ಪರಿಪೂರ್ಣವಾದುದು. ಎಲ್ಲ ಜೀವಿಗಳಿಗೂ ಬದುಕುವ ಹಕ್ಕಿರುವುದರಿಂದ ಗೋಹತ್ಯೆಯನ್ನಂತೂ ಸಂಪೂರ್ಣ ನಿಷೇಧಿಸಬೇಕು. ಜನಸಂಖ್ಯೆ ನಿಯಂತ್ರಣದ ಕಾನೂನು ಜಾರಿಗೊಳಿಸಬೇಕು. ಹಾಗೆಯೇ ಒಂದು ದೇಶ, ಒಂದು ಸಂವಿಧಾನ ವೆಂಬಂತೆ ಸಮಾನ ನಾಗರಿಕ ಸಂಹಿತೆ ಜಾರಿ ಯಾಗಬೇಕು ಎಂಬ ಹೇಳಿಕೆಯನ್ನು ಪುನರುಚ್ಛರಿಸಿದರು.

ಬಾಬಾ ರಾಮ್‌ದೇವ್ ಅವರನ್ನು ಶ್ರೀಕೃಷ್ಣ ಮಠದ ವತಿಯಿಂದ ಸನ್ಮಾನಿಸಿ ಆಶೀರ್ವಚನ ನೀಡಿದ ಪರ್ಯಾಯ ಶ್ರೀಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥರು, ರಾಮ್‌ದೇವ್ ಅವರು ತುಳಸಿಯ ವಿಕಿರಣ ತಡೆಯುವ ಶಕ್ತಿಯನ್ನು ಉಲ್ಲೇಖಿಸಿದರು. ರಾಮ್‌ದೇವ್ ಅವರು ಅಭಿನವ ಪತಂಜಲಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಬಣ್ಣಿಸಿದರು.

ಬೆಂಗಳೂರಿನ ಯಾದವ ಪೀಠದ ಶ್ರೀಯಾದವಾನಂದ ಸ್ವಾಮೀಜಿ ರಾಮ್‌ದೇವ್ ಅವರನ್ನು ಅಭಿನಂದಿಸಿದರು. ಪಲಿಮಾರು ಕಿರಿಯ ಶ್ರೀವಿದ್ಯಾರಾಜೇಶ್ವರತೀರ್ಥರು ರಾಮ್‌ದೇವ್ ಅವರ ಜತೆಗೂಡಿ ಕೆಲವು ಯೋಗಾಸನಗಳನ್ನು ಮಾಡಿದರು.

ದಿನದ ಯೋಗ ಚಟುವಟಿಕೆಗಳನ್ನು ಪರ್ಯಾಯ ಶ್ರೀಪಲಿಮಾರು ಮಠದ ದಿವಾನರಾದ ವೇದವ್ಯಾಸ ತಂತ್ರಿ ಉದ್ಘಾಟಿಸಿದರು. ರಾಜ್ಯ ಆಯುರ್ವೇದ ವೈದ್ಯರ ಸಂಘಟನೆಯ ಡಾ.ಅಶೋಕಕುಮಾರ್, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲಸಾರ್, ಉದ್ಯಮಿಗಳಾದ ರಂಜನ್ ಕಲ್ಕೂರ, ತಲ್ಲೂರು ಶಿವರಾಮ ಶೆಟ್ಟಿ, ಮನೋಹರ ಶೆಟ್ಟಿ, ಶ್ರೀಕೃಷ್ಣಮಠದ ಆಡಳಿತಾಧಿ ಕಾರಿ ಪ್ರಹ್ಲಾದ ರಾವ್, ಪತಂಜಲಿ ಸಮಿತಿ ರಾಜ್ಯ ಪ್ರಭಾರಿ ಭವರ್‌ಲಾಲ್ ಆರ್ಯ, ಜಿಲ್ಲಾ ಸಂರಕ್ಷಕ ಬಾಲಾಜಿ ರಾಘವೇಂದ್ರ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.

ಕಾಲೇಜಿನ ವಿದ್ಯಾರ್ಥಿಗಳು ಅಧಿಕ ಸಂಖ್ಯೆಯಲ್ಲಿದ್ದು ಯೋಗಾಸನಗಳನ್ನು ಅಭ್ಯಾಸ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News