ಮಂಗಳೂರಿನಲ್ಲಿ ರಸ್ತೆ ಅಪಘಾತ : ಹಾಫಿಲ್ ತೌಸೀಫ್ ಅಹ್ಮದ್ ಮೃತ್ಯು

Update: 2019-11-20 15:43 GMT

ಮಂಗಳೂರು, ನ.20: ನಗರದ ಪಂಪ್‌ವೆಲ್ ಸಮೀಪದ ರಾ.ಹೆ. 66ರ ಉಜ್ಜೋಡಿಯಲ್ಲಿ ಬುಧವಾರ ಸಂಜೆ ನಡೆದ ಅಪಘಾತದಲ್ಲಿ ಧಾರ್ಮಿಕ ಶಿಕ್ಷಕರೋರ್ವರು ಮೃತಪಟ್ಟ ಘಟನೆ ನಡೆದಿದೆ.

ಪಾಣೆಮಂಗಳೂರು ಸಮೀಪದ ಮೆಲ್ಕಾರ್-ರೆಂಗೇಲು ನಿವಾಸಿ ಹಾಫಿಲ್ ಮುಹಮ್ಮದ್ ತೌಸೀಫ್ ಹಿಮಮಿ (35) ಮೃತಪಟ್ಟವರು.
ಮೃತರು ಮೇಲ್ಕಾರ್‌ನ ಅಲಡ್ಕ ಹಮೀದ್ ಎಂಬವರ ಪುತ್ರ ಹಾಗೂ ಪುತ್ತೂರು ಕುಂಬ್ರ ಶೇಖಮಲೆ ಮರ್ಹೂಮ್ ಮಮ್ಮುಂಞಿ ಹಾಜಿಯವರ ಮೊಮ್ಮಗ.

ಘಟನೆ ವಿವರ: ಕೆ.ಸಿ.ರೋಡ್ ಕಡೆಯಿಂದ ಪಂಪ್‌ವೆಲ್ ತಕ್ವ ಮಸೀದಿಯಲ್ಲಿ ಧಾರ್ಮಿಕ ಶಿಕ್ಷಣ ನೀಡಲು ಹಾಫಿಲ್ ಮುಹಮ್ಮದ್ ತೌಸೀಫ್ ಹಿಮಮಿ ಅವರು ಸ್ಕೂಟರ್‌ನಲ್ಲಿ ಬರುತ್ತಿದ್ದರು. ಸ್ಕೂಟರ್ ಸಂಜೆ 4:30ರ ಸುಮಾರಿಗೆ ಉಜ್ಜೋಡಿಯನ್ನು ತಲುಪುತ್ತಿದ್ದಂತೆ ಎದುರಿನಿಂದ ಬರುತ್ತಿದ್ದ ಖಾಸಗಿ ಬಸ್ ಢಿಕ್ಕಿ ಹೊಡೆದಿದೆ. ಪರಿಣಾಮ ಸ್ಕೂಟರ್ ಸವಾರ ರಸ್ತೆಗೆಸೆಯಲ್ಪಟ್ಟಿದ್ದು, ಬಸ್‌ನ ಚಕ್ರ ಅವರ ದೇಹದ ಮೇಲೆ ಹರಿದು ಹೋಗಿದೆ. ತೀವ್ರ ಸ್ವರೂಪದ ರಕ್ತಗಾಯಗಳಾಗಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಖಾಸಗಿ ಬಸ್ ಚಾಲಕ ಸುನೀಲ್‌ ಕುಮಾರ್ ಎಂಬಾತನ ನಿರ್ಲಕ್ಷತನದಿಂದ ಈ ಅವಘಡ ಸಂಭವಿಸಿದೆ ಎಂದು ಆರೋಪಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿ, ಗುತ್ತಿಗೆದಾರರು ಹಾಗೂ ಬಸ್ ಚಾಲಕನ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಿ ದೂರು ನೀಡಲಾಗಿದೆ.

ಈ ಬಗ್ಗೆ ಮಂಗಳೂರು ನಗರ ದಕ್ಷಿಣ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತರ ದಫನ ಕಾರ್ಯವು ನ. 21ರಂದು ಬೆಳಗ್ಗೆ 8 ಗಂಟೆಗೆ ಪಾಣೆಮಂಗಳೂರು ಆಲಡ್ಕ ಜುಮಾ ಮಸೀದಿಯ ವಠಾರದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News