ಹಾಂಕಾಂಗ್‌ನಲ್ಲಿ ಮಾನವಹಕ್ಕುಗಳನ್ನು ಬೆಂಬಲಿಸಿ ಅಮೆರಿಕ ಸೆನೆಟ್ ನಿರ್ಣಯ

Update: 2019-11-20 15:10 GMT

ವಾಶಿಂಗ್ಟನ್, ನ. 20: ಹಾಂಕಾಂಗ್‌ನಲ್ಲಿ ‘‘ಮಾನವಹಕ್ಕುಗಳು ಮತ್ತು ಪ್ರಜಾಸತ್ತೆಯನ್ನು ಬೆಂಬಲಿಸುವ’’ ಹಾಗೂ ಆ ನಗರಕ್ಕೆ ನೀಡಿರುವ ವಿಶೇಷ ಆರ್ಥಿಕ ಸ್ಥಾನಮಾನವನ್ನು ಹಿಂದಕ್ಕೆ ಪಡೆಯುವುದಾಗಿ ಎಚ್ಚರಿಸುವ ಮಸೂದೆಯೊಂದನ್ನು ಅಮೆರಿಕದ ಸೆನೆಟ್ ಮಂಗಳವಾರ ಅವಿರೋಧವಾಗಿ ಅಂಗೀಕರಿಸಿದೆ.

ಹಾಂಕಾಂಗ್‌ನಲ್ಲಿ ಸುಮಾರು 6 ತಿಂಗಳುಗಳಿಂದ ನಡೆಯುತ್ತಿರುವ ಪ್ರಜಾಪ್ರಭುತ್ವಪರ ಧರಣಿಗಳನ್ನು ಹತ್ತಿಕ್ಕಲು ಭದ್ರತಾ ಪಡೆಗಳು ಬಳಸುತ್ತಿರುವ ಅಶ್ರುವಾಯು ಶೆಲ್‌ಗಳು, ರಬ್ಬರ್ ಗುಂಡುಗಳು ಮತ್ತು ಇತರ ಉಪಕರಣಗಳ ಮಾರಾಟವನ್ನು ನಿಷೇಧಿಸುವ ನಿರ್ಧಾರಕ್ಕೂ ಅಮೆರಿಕದ ಸಂಸದರು ಬೆಂಬಲ ವ್ಯಕ್ತಪಡಿಸಿದ್ದಾರೆ.

ಈ ನಡುವೆ, ಹಾಂಕಾಂಗ್‌ನ ಪಾಲಿಟೆಕ್ನಿಕ್ ವಿಶ್ವವಿದ್ಯಾನಿಲಯದಲ್ಲಿ ಪೊಲೀಸರಿಂದ ಮುತ್ತಿಗೆಗೆ ಒಳಗಾಗಿರುವ ನೂರಾರು ಪ್ರತಿಭಟನಕಾರರು ಅಲ್ಲಿಂದ ತೆರಳಿದ್ದಾರೆ. ಕೆಲವರು ಪೊಲೀಸರಿಗೆ ಶರಣಾದರೆ, ಹಲವರು ಸಾಹಸಿಕ ರೀತಿಯಲ್ಲಿ ತಪ್ಪಿಸಿಕೊಂಡಿದ್ದಾರೆ.

ಅಮೆರಿಕದ ಸೆನೆಟ್ ಅಂಗೀಕರಿಸಿರುವ ಹಾಂಕಾಂಗ್ ಮಾನವಹಕ್ಕುಗಳು ಮತ್ತು ಪ್ರಜಾಪ್ರಭುತ್ವ ಕಾಯ್ದೆಯ ಪ್ರಕಾರ, ಅಮೆರಿಕವು ಹಾಂಕಾಂಗ್‌ಗೆ ನೀಡಿರುವ ಪರಮಾಪ್ತ ವ್ಯಾಪಾರ ಸ್ಥಾನಮಾನವನ್ನು ಅಮೆರಿಕ ಅಧ್ಯಕ್ಷರು ಪ್ರತಿ ವರ್ಷ ಪರಿಶೀಲಿಸಬೇಕಾಗುತ್ತದೆ.

ಅದೇ ವೇಳೆ, ಹಾಂಕಾಂಗ್‌ನಲ್ಲಿ ಮಾನವಹಕ್ಕುಗಳನ್ನು ಉಲ್ಲಂಘಿಸುವ ಹಾಂಕಾಂಗ್ ಮತ್ತು ಚೀನಿ ಅಧಿಕಾರಿಗಳ ವಿರುದ್ಧ ದಿಗ್ಬಂಧನಗಳನ್ನು ವಿಧಿಸಲು ಕೂಡ ಸೆನೆಟ್ ಅಂಗೀಕರಿಸಿದ ಕಾಯ್ದೆ ಅಮೆರಿಕ ಅಧ್ಯಕ್ಷರಿಗೆ ಅಧಿಕಾರ ನೀಡುತ್ತದೆ.

‘‘ಬಹುಕಾಲದ ಸ್ವಾತಂತ್ರದ ಬೇಡಿಕೆಗಾಗಿ ಹೋರಾಡುತ್ತಿರುವ ಹಾಂಕಾಂಗ್‌ನ ಜನರಿಗಾಗಿ ಅಮೆರಿಕದ ಸೆನೆಟ್ ಸ್ಪಷ್ಟ ಸಂದೇಶವೊಂದನ್ನು ಕಳುಹಿಸಿದೆ: ನಾವು ನಿಮ್ಮ ದುಮ್ಮಾನಗಳನ್ನು ಆಲಿಸುತ್ತೇವೆ, ನಾವು ನಿಮ್ಮ ಪರವಾಗಿ ನಿಲ್ಲುವುದನ್ನು ಮುಂದುವರಿಸುತ್ತೇವೆ ಹಾಗೂ ಚೀನಾವು ನಿಮ್ಮ ಸ್ವಾಯತ್ತೆಯನ್ನು ದುರ್ಬಲಗೊಳಿಸುವಾಗ ನಾವು ಸುಮ್ಮನೆ ನಿಲ್ಲುವುದಿಲ್ಲ’’ ಎಂದು ರಿಪಬ್ಲಿಕನ್ ಪಕ್ಷದ ಸೆನೆಟರ್ ಮಾರ್ಕೊ ರೂಬಿಯೊ ಹೇಳಿದರು.

ಚೀನಾದಿಂದ ಕೋಪದ ಪ್ರತಿಕ್ರಿಯೆ

ಹಾಂಕಾಂಗ್‌ನ ಪ್ರಜಾಪ್ರಭುತ್ವಪರ ಪ್ರತಿಭಟನಕಾರರಿಗೆ ಬೆಂಬಲ ನೀಡುವ ಮಸೂದೆಯೊಂದನ್ನು ಅಮೆರಿಕದ ಸೆನೆಟ್ ಅಂಗೀಕರಿಸಿರುವುದಕ್ಕೆ ಚೀನಾ ಬುಧವಾರ ಕೋಪದಿಂದ ಪ್ರತಿಕ್ರಿಯಿಸಿದೆ.

ಅಮೆರಿಕದ ಉನ್ನತ ರಾಜತಾಂತ್ರಿಕರೊಬ್ಬರನ್ನು ಕರೆಸಿಕೊಂಡ ಚೀನಾದ ವಿದೇಶ ಸಚಿವಾಲಯವು, ಸೆನೆಟ್ ಅಂಗೀಕರಿಸಿರುವ ಮಸೂದೆಯು ಕಾನೂನಾಗಿ ಪರಿವರ್ತನೆಯಾದರೆ ‘ಪ್ರಬಲ’ ಪ್ರತೀಕಾರಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಎಚ್ಚರಿಸಿದೆ.

‘ಪ್ರಬಲ ಪ್ರತಿಭಟನೆ’ ಸಲ್ಲಿಸುವುದಕ್ಕಾಗಿ ಚೀನಾದ ಉಪ ವಿದೇಶ ಸಚಿವ ಮಾ ಝಾವೊಕ್ಸು, ಚೀನಾದಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಉಸ್ತುವಾರಿ ಅಧಿಕಾರಿ ವಿಲಿಯಮ್ ಕ್ಲೇನ್‌ರನ್ನು ಕರೆಸಿಕೊಂಡರು ಎಂದು ಸಚಿವಾಲಯವು ಹೇಳಿಕೆಯೊಂದರಲ್ಲಿ ತಿಳಿಸಿದೆ.

‘‘ಈ ಮಸೂದೆಯು ಕಾನೂನಾಗುವುದನ್ನು ತಡೆಯಲು ಪರಿಣಾಮಕಾರಿ ಕ್ರಮಗಳನ್ನು ಅಮೆರಿಕ ತಕ್ಷಣ ತೆಗೆದುಕೊಳ್ಳಬೇಕೆಂದು ಹಾಗೂ ಚೀನಾದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ನಡೆಸುವುದನ್ನು ನಿಲ್ಲಿಸುವಂತೆ ನಾವು ಆ ದೇಶವನ್ನು ಬಲವಾಗಿ ಒತ್ತಾಯಿಸುತ್ತೇವೆ’’ ಎಂದು ಹೇಳಿಕೆ ತಿಳಿಸಿದೆ.

‘‘ಇಲ್ಲದಿದ್ದರೆ, ಇದರ ವಿರುದ್ಧ ಚೀನಾವು ಪ್ರಬಲ ಪ್ರತೀಕಾರಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಲಿದೆ ಹಾಗೂ ಅದರ ಎಲ್ಲ ಪರಿಣಾಮಗಳನ್ನು ಅಮೆರಿಕ ಅನುಭವಿಸಬೇಕಾಗುತ್ತದೆ’’ ಎಂದು ಹೇಳಿಕೆ ಎಚ್ಚರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News