ಬಿಸಿಯೂಟಕ್ಕೆ ಅಕ್ಕಿಯ ಬದಲು ಗೋಧಿ ಬಳಕೆ ಅವೈಜ್ಞಾನಿಕ : ಯುಟಿ ಖಾದರ್ ಆರೋಪ

Update: 2019-11-20 15:52 GMT

ಮಂಗಳೂರು, ನ. 20: ಶಾಲಾ ಮಕ್ಕಳ ಬಿಸಿಯೂಟಕ್ಕೆ ಅಕ್ಕಿಯ ಬದಲು ಗೋಧಿ ನೀಡಲು ರಾಜ್ಯ ಸರಕಾರ ಮುಂದಾಗಿರುವುದು ಅವೈಜ್ಞಾನಿಕ ಕ್ರಮವಾಗಿದೆ ಎಂದು ಆರೋಪಿಸಿರುವ ಮಾಜಿ ಸಚಿವ, ಶಾಸಕ ಯು.ಟಿ. ಖಾದರ್, ಇದರಿಂದ ಸರಕಾರಿ ಶಾಲೆ ಗಳಲ್ಲಿ ಕಲಿಯುವ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು ಶಾಲೆಗಳಿಗೆ ಅಕ್ಕಿಯ ಬದಲಿಗೆ (ನಿಗದಿತ ಪ್ರಮಾಣದಲ್ಲಿ) ಗೋಧಿ ಪೂರೈಸುವಂತೆ ರಾಜ್ಯ ಸರಕಾರ ಏಕಾಏಕಿ ಆದೇಶ ಹೊರಡಿಸಿದ್ದು ಖಂಡನೀಯ. ಶಾಲೆಯ ಮಕ್ಕಳ ಪೋಷಕರು ಮತ್ತು ಶಿಕ್ಷಕರ ಅಭಿಪ್ರಾಯ ಕೇಳದೆ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ. ಸರಕಾರ ತಕ್ಷಣ ಈ ಆದೇಶವನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

ಗೋಧಿ ಹುಡಿ ನೀಡುವುದಾದರೆ ಚಪಾತಿಯನ್ನಾದರೂ ಮಾಡಬಹುದು. ಆದರೆ ಗೋಧಿ ನೀಡುವುದರಿಂದ ಏನು ಪ್ರಯೋಜನ? ಗೋಧಿ ದಾಸ್ತಾನಿರಿಸಿದರೆ ಕೆಡುವ ಅಪಾಯವೂ ಇದೆ. ಇದರಿಂದ ಮಕ್ಕಳ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರಬಹುದು. ಕರಾವಳಿಯಲ್ಲಿ ಗೋಧಿಗಿಂತ ಅಕ್ಕಿಯೇ ಪ್ರಧಾನ ಆಹಾರ ಧಾನ್ಯವಾಗಿರುವಾಗ ಗೋಧಿ ನೀಡಿದರೆ ಏನೂ ಪ್ರಯೋಜನವಿಲ್ಲ. ಹಿಂದಿನ ಸರಕಾರ ಮಾಡಿದ ಯೋಜನೆಗಳನ್ನು ಮುಂದುವರಿಸಲು ರಾಜ್ಯ ಸರಕಾರಕ್ಕೆ ಇಚ್ಛಾಶಕ್ತಿಯ ಕೊರತೆ ಇದೆ ಎಂದು ಖಾದರ್ ಹೇಳಿದರು.

ಸಂಘಟನೆಗಳ ಕೇಸ್ ಹಿಂಪಡೆದಿಲ್ಲ: ಹಿಂದಿನ ಸರಕಾರ ಪಿಎಫ್‌ಐ ಸಂಘಟನೆಯ ಕೇಸುಗಳನ್ನು ಹಿಂಪಡೆದದ್ದೇ ಶಾಸಕ ತನ್ವೀರ್ ಸೇಠ್ ಮೇಲೆ ಹಲ್ಲೆಗೆ ಕಾರಣ ಎಂಬ ಸಿಎಂ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಖಾದರ್, ಯಡಿಯೂರಪ್ಪ ಈ ವಿಷಯದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್ ಅವಧಿಯಲ್ಲಿ ಯಾವುದೇ ಸಂಘಟನೆಗಳ ಮೇಲಿನ ಕೇಸು ವಾಪಸ್ ಪಡೆದಿಲ್ಲ. ಕೆಲವೆಡೆ ನಡೆದ ಗುಂಪು ಗಲಭೆಗಳ ಸಂದರ್ಭ ಅದರಲ್ಲಿ ಭಾಗಿಯಾಗದೆ ನಿಂತು ನೋಡುತ್ತಿದ್ದವರ ಮೇಲೂ ಪೊಲೀಸರು ಕೇಸು ದಾಖಲಿಸಿದ್ದರು. ಅಂತಹವರ ಮೇಲಿನ ಕೇಸುಗಳನ್ನು ಮಾತ್ರ ವಾಪಸ್ ಪಡೆಯಲಾಗಿದೆ. ಯಡಿಯೂರಪ್ಪ ಹೇಳಿದ್ದು ನಿಜವಾಗಿದ್ದರೆ ಕಾಂಗ್ರೆಸ್ ಸರಕಾರ ಇದ್ದಾಗ ಇಂತಹ ಪ್ರಕರಣ ಏಕೆ ನಡೆದಿಲ್ಲ ? ಸಿಎಂ ರಾಜಕೀಯ ಮಾಡುವುದು ಬಿಟ್ಟು ದಿಟ್ಟ ಕ್ರಮ ಕೈಗೊಂಡು ಇಂತಹ ಪ್ರಕರಣಗಳು ಪುನಾರವರ್ತನೆಯಾಗದಂತೆ ನೋಡಿಕೊಳ್ಳಲಿ ಎಂದು ಸಲಹೆ ನೀಡಿದರು.

ಶಾಸಕ ತನ್ವೀರ್ ಸೇಠ್ ಮೇಲಿನ ಸಮಾಜದ್ರೋಹಿ ಶಕ್ತಿಗಳ ಮಾರಣಾಂತಿಕ ಹಲ್ಲೆಯನ್ನು ಕೇಂದ್ರ ಮತ್ತು ರಾಜ್ಯ ಸರಕಾರ ಗಳೆರಡೂ ಗಂಭೀರವಾಗಿ ಪರಿಗಣಿಸಬೇಕು. ಜನಪ್ರತಿನಿಧಿಗಳಿಗೇ ಹೀಗಾದರೆ ಇನ್ನು ಜನಸಾಮಾನ್ಯರ ರಕ್ಷಣೆ ಹೇಗೆ ಸಾಧ್ಯ? ಕೃತ್ಯದ ಬಗ್ಗೆ ಸಮಗ್ರ ತನಿಖೆ ನಡೆಸಿ ಅದರ ಹಿಂದಿನ ಶಕ್ತಿಗಳನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಬೇಕು ಎಂದು ಖಾದರ್ ಆಗ್ರಹಿಸಿದರು.

ಪುತ್ತೂರಿನಲ್ಲಿ ನಡೆದ ಜೋಡಿ ಕೊಲೆ ಪ್ರಕರಣದ ಆರೋಪಿಯನ್ನು ಜಿಲ್ಲಾ ಪೊಲೀಸರು ಶೀಘ್ರ ಪತ್ತೆಹಚ್ಚಿದ್ದು ಶ್ಲಾಘನೀಯ. ಈ ರೀತಿಯ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಸ್ಥಳೀಯ ಜನಪ್ರತಿನಿಧಿಗಳು, ಸಾಮಾಜಿಕ ಕಾರ್ಯಕರ್ತರು, ಪೊಲೀಸರು ಚರ್ಚಿಸಿ ಇಂತಹ ಅಪರಾಧ ಚಟುವಟಿಕೆಗಳನ್ನು ಮಟ್ಟ ಹಾಕಲು ಶ್ರಮಿಸಬೇಕು ಎಂದು ಖಾದರ್ ಸಲಹೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಸಂತೋಷ್ ಕುಮಾರ್ ಶೆಟ್ಟಿ ಅಸೈಗೋಳಿ, ಶಾಹುಲ್ ಹಮೀದ್ ಕೆ.ಕೆ., ಈಶ್ವರ ಉಳ್ಳಾಲ್, ಎನ್.ಎಸ್. ಕರೀಂ, ಸುದರ್ಶನ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಅನರ್ಹರಿಗೆ ಈ ಬಾರಿ ತಕ್ಕ ಪಾಠ

ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯುವ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಅನರ್ಹ ಶಾಸಕರು ಸ್ಪರ್ಧೆಗಿಳಿದಿದ್ದಾರೆ. ಸುಪ್ರೀಂ ಕೋರ್ಟೇ ಇವರನ್ನು ಅನರ್ಹರು ಎಂದು ತೀರ್ಮಾನಿಸಿ ಈ ಬಾರಿ ಜನತಾ ನ್ಯಾಯಾಲಯಕ್ಕೆ ಬಿಟ್ಟಿದೆ. ಮತ ಹಾಕಿದ ಜನರಿಗೇ ವಂಚನೆ ಮಾಡಿದ ಅನರ್ಹರಿಗೆ ಮತದಾರರು ಪಾಠ ಕಲಿಸಲಿದ್ದಾರೆ. ಈ ಚುನಾವಣೆಯಲ್ಲಿ ಮತದಾರರು ಸ್ವಾಭಿಮಾನದ ಮತ ಚಲಾಯಿಸಲಿದ್ದು, ಮತದಾರರ ಗೌರವ ಉಳಿಸುವ ಕೆಲಸ ಮಾಡಲಿದ್ದಾರೆ ಎಂದು ಶಾಸಕ ಯು.ಟಿ. ಖಾದರ್ ಹೇಳಿದರು.

ಪಕ್ಷ ದ್ರೋಹಿಗಳ ವಿರುದ್ಧ ಕ್ರಮ

ಕಳೆದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿರಬಹುದು. ಮುಂದಿನ ದಿನಗಳಲ್ಲಿ ಪಕ್ಷ ಸಂಘಟಿತಗೊಳ್ಳಲಿದೆ. ಈ ಚುನಾವಣೆಯಲ್ಲಿ ಪಕ್ಷದಲ್ಲಿದ್ದು ದ್ರೋಹ ಮಾಡಿದವರನ್ನು ಪತ್ತೆ ಹಚ್ಚಲು ಸಮಿತಿ ರಚಿಸಲಾಗಿದ್ದು, ಅಂತಹವರ ಪಟ್ಟಿಯನ್ನು ಜಿಲ್ಲಾ ಮತ್ತು ರಾಜ್ಯ ಕಾಂಗ್ರೆಸ್‌ಗೆ ಸಲ್ಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಖಾದರ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News