ಮಂಗಳೂರು : ಕಳವು ಪ್ರಕರಣದ ಇಬ್ಬರು ಆರೋಪಿಗಳು ಸೆರೆ

Update: 2019-11-20 16:37 GMT

ಮಂಗಳೂರು, ನ. 20: ನಗರದ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ವಾಹನ ಕಳವು ಮತ್ತು ಸರಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಸುರತ್ಕಲ್ ಪೊಲೀಸ್ ಚೊಕ್ಕಬೆಟ್ಟು ಕ್ರಾಸ್ ಸಮೀಪ ಬುಧವಾರ ಬಂಧಿಸಿದ್ದಾರೆ.

ಪಂಜಿಮೊಗರು ನಿವಾಸಿ ಅಲ್ವೀನ್ ಡಿಸೋಜ (18), ಚೊಕ್ಕಬೆಟ್ಟು ನಿವಾಸಿ ಸಲ್ಮಾನ್ (19) ಬಂಧಿತ ಆರೋಪಿಗಳು.

ಚೊಕ್ಕಬೆಟ್ಟು ಸಮೀಪದ ಪಿಎಸ್ಸೈ ಚಂದ್ರಶೇಖರಯ್ಯ ಸಿಬ್ಬಂದಿ ಜತೆ ವಾಹನ ತಪಾಸಣೆ ಮಾಡುತ್ತಿದ್ದಾಗ ಪ್ರಕರಣದ ಆರೋಪಿ ಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ನ.14ರಂದು ಆರೋಪಿ  ಸಲ್ಮಾನ್ ತನ್ನ ಸ್ನೇಹಿತರಾದ ಸುಮಂತ್ ಬರ್ಮನ್ ಮತ್ತು ಅಲ್ವಿನ್ ಡಿಸೋಜ ಅವರೊಂದಿಗೆ ಸೇರಿ ಮಂಗಳೂರು ನಗರದ ಬಿಜೈ 1ನೇ ಅಡ್ಡ ರಸ್ತೆಯಲ್ಲಿರುವ ಮನೆಯೊಂದರ ಅಂಗಳದಿಂದ ಆ್ಯಕ್ಷಿವಾ ಹೋಂಡಾ ಕಳ್ಳತನ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಮಂಗಳೂರು ನಗರ ಪೂರ್ವ (ಕದ್ರಿ) ಠಾಣಾ ವ್ಯಾಪ್ತಿಯಲ್ಲಿ ಮೂರು ದ್ವಿಚಕ್ರ ವಾಹನ, ಉರ್ವ ಠಾಣಾ ವ್ಯಾಪ್ತಿ ಎರಡು ದ್ವಿಚಕ್ರ ವಾಹನ, ಬರ್ಕೆ ಠಾಣಾ ವ್ಯಾಪ್ತಿ ಒಂದು ದ್ವಿಚಕ್ರ ವಾಹನ, ಕಾವೂರು ಠಾಣಾ ವ್ಯಾಪ್ತಿ ಸರಗಳ್ಳತನ ಪ್ರಕರಣದಲ್ಲೂ ಭಾಗಿಯಾಗಿದ್ದಾರೆ. ಅಲ್ಲದೆ, ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನು ಐವರು ಅಪ್ರಾಪ್ತರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಆರೋಪಿಗಳಿಂದ 1.50 ಲಕ್ಷ ರೂ. ಮೌಲ್ಯದ ಏಳು ದ್ವಿಚಕ್ರ ವಾಹನಗಳು, 1.15 ಲಕ್ಷ ಮೌಲ್ಯದ ಐಪ್ಯಾಡ್ ಮತ್ತು 15 ಮೊಬೈಲ್‌ಗಳು, 50 ಸಾವಿರ ರೂ. ಮೌಲ್ಯದ ಚಿನ್ನದ ಸರ ಹಾಗೂ ಬ್ರೇಸ್ಲೆಟ್‌ ವಶಕ್ಕೆ ಪಡೆಯಲಾಗಿದೆ. ಸ್ವಾಧೀನ ಪಡಿಸಿಕೊಳ್ಳಲಾದ ಸೊತ್ತಿನ ಒಟ್ಟು ಮೌಲ್ಯ 3.15 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ನಿರ್ದೇಶನದಂತೆ ಡಿಸಿಪಿಗಳಾದ ಅರುಣಾಂಶುಗಿರಿ, ಲಕ್ಷ್ಮೀಗಣೇಶ್ ಮಾರ್ಗದರ್ಶನದಲ್ಲಿ ಎಸಿಪಿ ಶ್ರೀನಿವಾಸ್‌ಗೌಡ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸುರತ್ಕಲ್ ಠಾಣಾ ನಿರೀಕ್ಷಕ ರಾಮಕೃಷ್ಣ ಮತ್ತು ಸಿಬ್ಬಂದಿ, ಕಾವೂರು ಠಾಣಾ ಪೊಲೀಸ್ ನಿರೀಕ್ಷಕ ರಾಘವ್ ಪಡೀಲ್ ಮತ್ತು ಸಿಬ್ಬಂದಿ ಭಾಗವಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News