ಮಕ್ಕಳ ಹಕ್ಕುಗಳ ಪಾಲನೆ ಎಲ್ಲರ ಜವಾಬ್ದಾರಿ: ಸಿ.ಎಂ.ಜೋಶಿ

Update: 2019-11-20 16:47 GMT

ಉಡುಪಿ, ನ.20: ಮಕ್ಕಳ ಹಕ್ಕುಗಳನ್ನು ಪಾಲನೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ದೇಶದಲ್ಲಿ ಅತೀ ಹೆಚ್ಚಿನ ಯುವಶಕ್ತಿಯಿದ್ದರೂ ನಮ್ಮಲ್ಲಿ ಸಾಕಷ್ಟು ಸವಾಲುಗಳಿವೆ. ಈ ಸಮಸ್ಯೆ ಎದುರಿಸಿ ಸದೃಢ ದೇಶ ನಿರ್ಮಾಣ ಮಾಡಬೇಕಿದೆ. ಈ ಬಗ್ಗೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಸಿ.ಎಂ.ಜೋಶಿ ಹೇಳಿದ್ದಾರೆ.

ಉಡುಪಿಯ ಚೈಲ್ಡ್‌ಲೈನ್ 1098, ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ರೋಟರಿ ಉಡುಪಿ, ರೋಟರಿ ಕ್ಲಬ್ ಉಡುಪಿ- ಮಣಿಪಾಲ ಮತ್ತು ಮಣಿಪಾಲ ಟೌನ್ ಇವರ ಸಂಯುಕ್ತ ಆಶ್ರಯದಲ್ಲಿ ಕುಕ್ಕಿಕಟ್ಟೆಯ ಶ್ರೀಕೃಷ್ಣಬಾಲನಿಕೇತನದಲ್ಲಿ ಬುಧವಾರ ನಡೆದ ಮಕ್ಕಳ ದಿನಾಚರಣೆ ಮತ್ತು ‘ಚೈಲ್ಡ್‌ಲೈನ್ ಸೇ ದೋಸ್ತಿ’ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಭಾವಹಿಸಿ ಅವರು ಮಾತನಾಡುತಿದ್ದರು.

ಬಾಲ್ಯವಿವಾಹ, ಬಾಲ ಕಾರ್ಮಿಕ ಹಾಗೂ ಮಕ್ಕಳ ಮೇಲಾಗುವ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಹಾಕಿ ಮಕ್ಕಳ ಹಕ್ಕುಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವುದರಿಂದ ಸಮಾಜದಲ್ಲಿ ಸುಭಿಕ್ಷೆ ನಿರ್ಮಾಣ ಸಾಧ್ಯವಿದೆ.ಹಿರಿಯರು ಮಕ್ಕಳ ಹಕ್ಕುಗಳಿಗೆ ತೊಂದರೆ ನೀಡದೇ, ತಪ್ಪು ದಾರಿ ತುಳಿಯದಂತೆ ನೋಡಿ ಕೊಳ್ಳುವ ಜೊತೆಗೆ ಸಮಾಜದಲ್ಲಿ ಜವಾಬ್ದಾರಿಯುತ ವ್ಯಕ್ತಿಗಳನ್ನಾಗಿ ರೂಪಿಬೇಕೆಂದು ಕಿವಿಮಾತು ಹೇಳಿದರು.

ಚೈಲ್ಡ್‌ಲೈನ್-1098ರ ಬಗ್ಗೆ ಪ್ರತಿಯೊಬ್ಬ ಮಕ್ಕಳಿಗೂ ಅರಿವು ಮೂಡಿಸ ಬೇಕು. ಯಾವುದೇ ಸಮಸ್ಯೆಗಳನ್ನು ಸಹಿಸಿಕೊಂಡು ಕುಳಿತುಕೊಳ್ಳಬಾರದು. ಅನ್ಯಾಯ, ತಪ್ಪುಗಳು ಗಮನಕ್ಕೆ ಬಂದಾಗ ಅದರ ವಿರುದ್ಧ ಹೋರಾಟ ಮಾಡುವ ಮನೋಭಾವನೆ ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಯುವ ಸಮುದಾಯ ರೂಪುಗೊಳ್ಳಬೇಕೆಂದು ಹೇಳಿದರು.

ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕಾವೇರಿ, ರೋಟರಿ ಜಿಲ್ಲಾ ಉಪ ತರಬೇತುದಾರ ಕೆ.ಎಸ್. ಸುಬ್ರಹ್ಮಣ್ಯ ಬಾಸ್ರಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶೇಷಶಯನ ಕಾರಿಂಜ, ಸದಾನಂದ ನಾಯಕ್, ದೈಹಿಕ ಶಿಕ್ಷಣಾಧಿಕಾರಿ ಮಧುಕರ್, ರೋಟರಿ ಮಾಜಿ ಅಧ್ಯಕ್ಷ ಡಾ.ಎನ್.ಉಡುಪ, ಡಾ.ಸುರೇಶ್ ಶೆಣೈ ಉಪಸ್ಥಿತರಿದ್ದರು.

ಮಕ್ಕಳ ಕಲ್ಯಾಣ ಸಮಿತಿ ಮಾಜಿ ಅಧ್ಯಕ್ಷ ಬಿ.ಕೆ.ನಾರಾಯಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಚೈಲ್ಡ್‌ಲೈನ್‌ನ ಸಿಬ್ಬಂದಿ ಜ್ಯೋತಿ ವರದಿ ವಾಚಿಸಿದರು. ರೋಟರಿ ಉಡುಪಿ ಅಧ್ಯಕ್ಷ ಜನಾರ್ದನ ಭಟ್ ವಂದಿಸಿದರು. ಚೈಲ್ಡ್‌ಲೈನ್ 1098 ನಿರ್ದೇಶಕ ರಾಮಚಂದ್ರ ಉಪಾಧ್ಯಾಯ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News