ಉಡುಪಿ : ಆನ್‌ಲೈನ್ ಬಹುಮಾನದ ಆಸೆ; ಯುವಕನಿಗೆ 8 ಲಕ್ಷ ರೂ. ವಂಚನೆ

Update: 2019-11-20 17:39 GMT
ಚಿತ್ರ : fusioncu.com

ಉಡುಪಿ, ನ. 20: ಆನ್‌ಲೈನ್ ಶಾಪಿಂಗ್ ಮಾಡಿದ್ದರಿಂದ ನೀವು ಮೂರನೇ ಸ್ಥಾನದೊಂದಿಗೆ ವಿಜೇತರಾಗಿದ್ದು ನಿಮಗೆ ಟಿವಿಎಸ್ ಜುಪಿಟರ್ ಲಭಿಸಿದೆ ಎಂದು ಅಪರಿಚಿತ ಮಾಡಿದ ಕರೆಯನ್ನು ನಂಬಿ ಬ್ರಹ್ಮಾವರ ಚಾಂತಾರಿನ ಯುವಕ ಬಹುಮಾನದ ಆಸೆಯಿಂದ 8 ಲಕ್ಷ ರೂ. ಕಳೆದುಕೊಂಡ ಘಟನೆ ವರದಿಯಾಗಿದೆ.

ಚಾಂತಾರು ದೇವುಬೈಲಿನ ನಿತ್ಯಾನಂದ ಶೆಟ್ಟಿ ಎಂಬವರ ಪುತ್ರ ನಿಷ್ಮಿತ್ ಶೆಟ್ಟಿ (28)  ವಂಚನೆಗೊಳಗಾದ ಯುವಕ. ಈತನಿಗೆ ಅರಿಚಿತನೊಬ್ಬ ಕರೆ ಮಾಡಿ ನೀವು ಆನ್‌ಲೈನ್ ಶಾಪಿಂಗ್ ಮಾಡಿರುವುದರಿಂದ ಲಕ್ಕಿಡ್ರಾದಲ್ಲಿ ಮೂರನೇ ಸ್ಥಾನ ಪಡೆದಿದ್ದೀರಿ. ಇದಕ್ಕಾಗಿ ಟಿವಿಎಸ್ ಜುಪಿಟರ್ ಸಿಕ್ಕಿದೆ. ಇದನ್ನು ಪಡೆಯಲು ರಿಜಿಸ್ಟ್ರೇಶನ್ ಚಾರ್ಜ್ ಆಗಿ 2,499 ರೂ. ಹಣ ಪಾವತಿಸಿ ಎಂದು ಹೇಳಿ ಕರೆ ಬಂದಿತ್ತು.

ಇದನ್ನು ನಂಬಿದ ನಿಷ್ಮಿತ್ ಆರೋಪಿ ನೀಡಿದ ಪೇಟಿಎಂ ಖಾತೆಗೆ ಹಣ ಜಮಾ ಮಾಡಿದ್ದರು. ಆದರೆ, ನಂತರದ ದಿನಗಳಲ್ಲಿ ಆರೋಪಿಗಳು ಇತರ ಮೊಬೈಲ್ ನಂಬರ್‌ಗಳಿಂದ ನಿಷ್ಮಿತ್  ರಿಗೆ ಕರೆ ಮಾಡಿ, ನೀವು ಎರಡನೇ ಸ್ಥಾನದಲ್ಲಿರುವ ಹುಂಡೈ ಐ10 ವಿಜೇತರಾಗಿದ್ದೀರಿ ಹಾಗೂ ಮತ್ತೊಮ್ಮೆ ಮೊದಲ ಸ್ಥಾನ ವಿಜೇತರಾಗಿ ನಿಮಗೆ ಮಾರುತಿ ಬಲ್ನೋ ಕಾರು ಸಿಗುತ್ತದೆ ಎಂದು ನಂಬಿಸಿ ರಿಜಿಸ್ಟ್ರೇಶನ್ ಚಾರ್ಜ್ ಹಾಗೂ ಇತರ ಚಾರ್ಜ್ ಎಂದು ಅವರಿಂದ ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ಒಟ್ಟು 7,93,053 ರೂ.ಹಣವನ್ನು ಜಮಾ ಮಾಡಿಸಿಕೊಂಡಿದ್ದರು.

ಆದರೆ ಮುಂದೆ ವಿಜೇತ ಕಾರು, ಬೈಕ್ ಗಳನ್ನು ನೀಡದೇ, ಕಟ್ಟಿದ ಹಣವನ್ನು ನೀಡದೇ ವಂಚಿಸಿರುವುದಾಗಿ, ಅಲ್ಲದೇ ಪೇಟಿಎಂ ಬ್ಯಾಂಕ್ ಹಾಗೂ ಪೇಟಿಎಂ ಕಸ್ಟಮರ್ ಕೇರ್ ಸಂಸ್ಥೆ ಸಹ ಆರೋಪಿಗಳ ಈ ಕೃತ್ಯಕ್ಕೆ ಸಹಕಾರ ನೀಡಿರುವುದಾಗಿ ನಿಷ್ಮಿತ್ ಶೆಟ್ಟಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಇದೀಗ ಈ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News