ಲಂಕಾ: ಪ್ರಧಾನಿಯಾಗಿ ಅಣ್ಣ ಮಹಿಂದ ರಾಜಪಕ್ಸರನ್ನು ನೇಮಿಸಿದ ಗೊಟಬಯ

Update: 2019-11-20 17:15 GMT
ಫೋಟೊ:  Dinuka Liyanawatte/Reuters

ಕೊಲಂಬೊ, ನ. 20: ಶ್ರೀಲಂಕಾದ ನೂತನ ಅಧ್ಯಕ್ಷ ಗೊಟಬಯ ರಾಜಪಕ್ಸ ದೇಶದ ಪ್ರಧಾನಿಯಾಗಿ ತನ್ನ ಅಣ್ಣ ಹಾಗೂ ಮಾಜಿ ಅಧ್ಯಕ್ಷ ಮಹಿಂದ ರಾಜಪಕ್ಸರನ್ನು ನೇಮಿಸಿದ್ದಾರೆ ಎಂದು ವಕ್ತಾರರೊಬ್ಬರು ಬುಧವಾರ ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ದಶಕದ ಹಿಂದೆ ಈ ಇಬ್ಬರು ಸಹೋದರರು ಸೇರಿ ಎಲ್ಟಿಟಿಇ ಬಂಡುಕೋರರನ್ನು ನಿರ್ದಯವಾಗಿ ಹತ್ತಿಕ್ಕುವ ಮೂಲಕ ದಶಕಗಳ ಅವಧಿಯ ಬಂಡಾಯವನ್ನು ಕೊನೆಗೊಳಿಸಿದ್ದರು. ಅಂದು ಮಹಿಂದ ರಾಜಪಕ್ಸ ಅಧ್ಯಕ್ಷರಾಗಿದ್ದರೆ, ಗೊಟಬಯ ರಾಜಪಕ್ಸ ರಕ್ಷಣಾ ಕಾರ್ಯದರ್ಶಿಯಾಗಿದ್ದರು. ಎಲ್ಟಿಟಿಇ ವಿರುದ್ಧದ ಸಮರದ ಕೊನೆಯ ಘಟ್ಟಗಳಲ್ಲಿ ಅವರ ನಿಯಂತ್ರಣದ ಸೇನಾ ಪಡೆಗಳು ತಮಿಳು ನಾಗರಿಕ ಸಾಮೂಹಿಕ ನರಮೇಧ ನಡೆಸಿವೆ ಎಂದು ಆರೋಪಿಸಲಾಗಿದೆ.

ಶ್ರೀಲಂಕಾದ ಸೇನೆಯು ಯುದ್ಧಾಪರಾಧಗಳನ್ನು ನಡೆಸಿದೆ ಹಾಗೂ ಮಾನವಹಕ್ಕುಗಳನ್ನು ಉಲ್ಲಂಘಿಸಿದೆ ಎಂದು ಅಮೆರಿಕ ಆರೋಪಿಸಿದೆ.

ಇದಕ್ಕೂ ಮುನ್ನ ಗೊಟಬಯ ಶ್ರೀಲಂಕಾ ಸೇನೆಯಲ್ಲಿ ಅಧಿಕಾರಿಯಾಗಿದ್ದರು. ಹಾಲಿ ಪ್ರಧಾನಿ ರನಿಲ್ ವಿಕ್ರಮೆಸಿಂಘೆ ರಾಜೀನಾಮೆ ನೀಡಿದ ಕೂಡಲೇ ಮಹಿಂದ ರಾಜಪಕ್ಸ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಸರಕಾರಿ ವಕ್ತಾರ ವಿಜಯಾನಂದ ಹೆರಾತ್ ತಿಳಿಸಿದರು.

ರಾಜೀನಾಮೆ ಘೋಷಿಸಿದ ಪ್ರಧಾನಿ ವಿಕ್ರಮೆಸಿಂಘೆ

ನಾನು ರಾಜೀನಾಮೆ ನೀಡುವುದಾಗಿ ಅಧ್ಯಕ್ಷೀಯ ಚುನಾವಣೆಯಲ್ಲಿ ತನ್ನ ಪಕ್ಷ ಸೋಲನುಭವಿಸಿದ ನಾಲ್ಕು ದಿನಗಳ ಬಳಿಕ, ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮೆಸಿಂಘೆ ಬುಧವಾರ ಘೋಷಿಸಿದ್ದಾರೆ.

ನಾನು ಗುರುವಾರ ಅಧಿಕಾರದಿಂದ ಇಳಿಯುವುದಾಗಿ ನೂತನ ಅಧ್ಯಕ್ಷ ಗೊಟಬಯ ರಾಜಪಕ್ಸಗೆ ತಿಳಿಸಿದ್ದೇನೆ ಹಾಗೂ ಆ ಮೂಲಕ ನೂತನ ಅಲ್ಪಮತ ಸರಕಾರವೊಂದರ ರಚನೆಗೆ ಅವಕಾಶ ನೀಡುತ್ತಿದ್ದೇನೆ ಎಂದು ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ವಿಕ್ರಮೆಸಿಂಘೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News