ಮೂಡುಬಿದಿರೆ : ದೇವಸ್ಥಾನದಲ್ಲಿ ಮಹಿಳೆಯ ಬ್ಯಾಗ್ ಕಳವು ಪ್ರಕರಣದ ಆರೋಪಿ ಸೆರೆ

Update: 2019-11-20 17:43 GMT
ಉಮೇಶ್ ಪೂಜಾರಿ

ಮೂಡುಬಿದಿರೆ: ಇಲ್ಲಿನ ಶ್ರೀಹನುಮಂತ ದೇವಸ್ಥಾನದಲ್ಲಿ ಮಹಿಳೆಯೋರ್ವರ ಬ್ಯಾಗ್ ಕಳವು ಮಾಡಿದ ಆರೋಪಿಯನ್ನು ಮೂಡುಬಿದಿರೆ ಪೊಲೀಸರು ಬುಧವಾರ ಬಂಧಿಸಿದ್ದು, ಆತನಿಂದ ಸುಮಾರು 37 ಸಾವಿರ ಮೌಲ್ಯದ ನಾಲ್ಕು ಮೊಬೈಲ್ ವಶಪಡಿಸಿಕೊಂಡಿದ್ದಾರೆ.

ದರೆಗುಡ್ಡೆಯ ಉಮೇಶ್ ಪೂಜಾರಿ(38) ಬಂಧಿತ ಆರೋಪಿ.

ನಿರುದ್ಯೋಗಿಯಾಗಿರುವ ಉಮೇಶ್ ಕಳೆದ ಶನಿವಾರ ಪೇಟೆಯ ಹನುಮಂತ ದೇವಸ್ಥಾನಕ್ಕೆ ಬಂದಿದ್ದ.  ಕೋಟೆಬಾಗಿಲಿನ ಮಹಿಳೆಯೊರ್ವರು ತನ್ನ ಬ್ಯಾಗನ್ನು ದೇವಳದಲ್ಲಿರಿಸಿ ಮುಂದೆ ತೆರಳಿದ್ದ ವೇಳೆಗೆ ಆರೋಪಿ ತನ್ನಲ್ಲಿದ್ದ ಬ್ಯಾಗ್‍ನೊಳಗೆ ಮಹಿಳೆಯ ಬ್ಯಾಗನ್ನು ಹಾಕಿ ಹೊರನಡೆದಿದ್ದ. ಮಹಿಳೆ ದರ್ಶನ ಪಡೆದು ಮರಳಿದಾಗ  ಬ್ಯಾಗ್ ಕಳ್ಳತನವಾದದ್ದು ಗಮನಕ್ಕೆ ಬಂದಿದೆ. ಬ್ಯಾಗಿನಲ್ಲಿ ನಗದು ಮತ್ತು ಎರಡು ಮೊಬೈಲ್‍ಗಳಿದ್ದವು . ಕಳ್ಳತನದ ಬಗ್ಗೆ ಮಹಿಳೆ ಮೂಡುಬಿದಿರೆ ಪೊಲೀಸರಿಗೆ ದೂರು ನೀಡಿದರು.

ಪೊಲೀಸ್ ಇನ್‍ಸ್ಪೆಕ್ಟರ್ ದಿನೇಶ್ ಕುಮಾರ್ ನೇತೃತ್ವದ ತಂಡ ತನಿಖೆ ಕೈಗೆತ್ತಿಗೊಂಡು, ದೇವಸ್ಥಾನದ ಒಳಗಡೆ ಇದ್ದ ಸಿಸಿ ಕೆಮರಾದ ಫೂಟೇಜ್‍ಗಳನ್ನು ಪರಿಶೀಲಿಸಿದಾಗ ಕಳ್ಳತನದ ದೃಶ್ಯಗಳು ಲಭ್ಯವಾದವು.  ಆರೋಪಿಯ ಗುರುತು ಹಚ್ಚಿದ ಪೊಲೀಸರು ಬುಧವಾರ ಅರಮನೆ ಬಾಗಿಲು ಬಳಿ ಆತನನ್ನು ಬಂಧಿಸಿ ನಾಲ್ಕು ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ಬ್ಯಾಗ್‍ನಲ್ಲಿದ್ದ ಹಣವನ್ನು ಖರ್ಚು ಮಾಡಿರುವುದಾಗಿ ಉಮೇಶ್ ಹೇಳಿದ್ದು, ಎರಡು ಮೊಬೈಲ್‍ಗಳು ಕೋಟೆಬಾಗಿಲಿನ ಮಹಿಳೆಗೆ ಸಂಬಂಧಿಸಿದ್ದಾಗಿದ್ದು ಇನ್ನೆರಡು ಮೊಬೈಲ್‍ಗಳ ಬಗ್ಗೆ ವಿಚಾರಿಸಲಾಗುತ್ತಿದೆ. ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ಕೋರ್ಟ್‍ಗೆ ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News