ಸ್ಟೈಲಿಂಗ್‍ ಅಟ್ ದಿ ಟಾಪ್: ಕನ್ನಡಕ್ಕೆ ಅನುವಾದಿತ ಪುಸ್ತಕ ಬಿಡುಗಡೆ

Update: 2019-11-20 18:25 GMT

ಬೆಳ್ತಂಗಡಿ: ರಕ್ತಗತವಾಗಿ ಬಂದ ಪಾರಂಪರಿಕ ಕುಲಕಸುಬನ್ನು ಅಭಿವೃದ್ಧಿ ಪಡಿಸಿ ಉಳಿಸಿ, ಬೆಳೆಸಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.

ಅವರು ಬುಧವಾರ ಧರ್ಮಸ್ಥಳದಲ್ಲಿ ಬಾಲಿವುಡ್‍ನ ಪ್ರಸಿದ್ಧ ಕೇಶ ವಿನ್ಯಾಸಕರಾದ ಮುಂಬೈನ ಶಿವರಾಮ ಭಂಡಾರಿ ಅವರ ಬಗ್ಯೆ ಜಯಶ್ರೀ ಶೆಟ್ಟಿ ಇಂಗ್ಲಿಷ್‍ನಲ್ಲಿ ಬರೆದ ಕೃತಿಯನ್ನು ಡಾ.ಶಿವಾನಂದ ಬೇಕಲ್ ಕನ್ನಡಕ್ಕೆ ಅನುವಾದಿಸಿದ್ದು ಅದನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಹಿಂದೆ ಗ್ರಾಮೀಣ ಪ್ರದೇಶದಲ್ಲಿ ಬಹಳ ಕಷ್ಟದಿಂದ ಕ್ಷೌರಿಕರು ಕುಲವೃತ್ತಿಯನ್ನು ಮಾಡುತ್ತಿದ್ದರು. ಆದರೆ ಇಂದು ಕಾಲ ಬದಲಾಗಿದೆ. ಅನೇಕ ಹೊಸ ಸೌಲಭ್ಯಗಳಿವೆ. ಕರ್ಮಪ್ರಧಾನವಾದ ವೃತ್ತಿಯನ್ನು ಗೌರವದಿಂದ ಮಾಡಬೇಕು. ಶಿವರಾಮ ಭಂಡಾರಿ ಅವರ ಜೀವನ-ಸಾಧನೆ ಇಂದಿನ ಯುವಜನತೆಗೆ ಆದರ್ಶ ಹಾಗೂ ಅನುರಕಣೀಯವಾಗಿದೆ ಎಂದು ಅವರು ಹೇಳಿದರು.

ಶಿವರಾಮ ಭಂಡಾರಿ ತನ್ನ ಜೀವನದ ಸಾಧನೆಯಲ್ಲಿ ಎದುರಿಸಿದ ಸಮಸ್ಯೆಗಳನ್ನು, ಸವಾಲುಗಳನ್ನು ಎದುರಿಸಿದ ಪರಿಯನ್ನು ವಿವರಿಸಿದರು. ಮುಂಬೈಯಲ್ಲಿ 20 ಶಿವಾಸ್ ಸೆಲೂನ್‍ಗಳನ್ನು  ಹೊಂದಿರುವ ಶಿವರಾಮ ಭಂಡಾರಿ ಮೂಲತಃ ಕಾರ್ಕಳದವರು. ಕೇವಲ ನಾಲ್ಕನೆ ತರಗತಿವರೆಗೆ ಶಿಕ್ಷಣ ಪಡೆದ ಇವರು ನಿರ್ಗತಿಕರಾಗಿ, ಸಂಬಂಧಿಕರಿಂದ ತಿರಸ್ಕೃತರಾಗಿ ಮುಂಬೈಗೆ ಹೋದರು. ಕಠಿಣ ಪರಿಶ್ರಮದಿಂದ ಇಂದು ಯಶಸ್ವಿ ಕೇಶ ವಿನ್ಯಾಸಕಾರರಾಗಿ ದೇಶ-ವಿದೇಶಗಳಲ್ಲಿ ಚಿರಪರಚಿತರು.
ಮಹಾರಾಷ್ಟ್ರದ ಕನ್ನಡಿಗ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ, ಜಯಶ್ರೀ ಶೆಟ್ಟಿ, ಸುರೇಶ್ ಭಂಡಾರಿ, ಶಿವಾನಂದ ಬೇಕಲ್ ಉಪಸ್ಥಿತರಿದ್ದರು. ಡಾ. ಎಂ.ಪಿ.ಶ್ರೀನಾಥ್ ಸ್ವಾಗತಿಸಿದರು.ರಾಮಕೃಷ್ಣ ಭಟ್‍ ಚೊಕ್ಕಾಡಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News