​ರಾಜ್ಯದಲ್ಲಿ ಸಮಗ್ರ ಮೀನುಗಾರಿಕಾ ನೀತಿ ಜಾರಿ: ಸಚಿವ ಕೋಟ ಶ್ರೀನಿವಾಸ ಪೂಜಾರಿ

Update: 2019-11-21 12:18 GMT

ಮಂಗಳೂರು, ನ.21: ಕಡಲು ಹಾಗೂ ಒಳನಾಡು ಮೀನುಗಾರಿಕೆಗೆ ಸಂಬಂಧಿಸಿ ರಾಜ್ಯದಲ್ಲಿ ಸಮಗ್ರ ಮೀನುಗಾರಿಕಾ ನೀತಿಯನ್ನು ಜಾರಿಗೊಳಿಸಲು ಚಿಂತಿಸಲಾಗಿದೆ ಎಂದು ಮುಜರಾಯಿ, ಬಂದರು ಹಾಗೂ ಮೀನುಗಾರಿಕಾ ಸಚಿವರಾಗಿರುವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ತಮ್ಮ ಕೊಠಡಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.

ಮೀನು ಮರಿಗಳ ಉತ್ಪಾದನೆ, ಮೀನು ಸಾಗಾಟ, ಕಡಲ ಮೀನುಗಾರಿಕೆಗೆ ಸಂಬಂಧಿಸಿ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು, ಯಾಂತ್ರಿಕ ದೋಣಿಗಳಿಗೆ ಮೂಲಭೂತ ಸೌಕರ್ಯ, ಮೀನುಗಾರರ ಬದುಕಿನ ಭದ್ರತೆ, ಮೀನುಗಾರರಿಗೆ ಇತರ ರಾಜ್ಯಗಳ ಕಿರುಕುಳ ಸೇರಿದಂತೆ ಸಮಗ್ರ ವಿಚಾರಗಳು ಈ ಸಮಗ್ರ ನೀತಿಯ ವ್ಯಾಪ್ತಿಗೊಳಪಡಲಿದೆ. ಈಗಾಗಲೇ ಈ ಕುರಿತಾದ ಕರುಡು ಸಿದ್ಧವಾಗಿದ್ದು, ಮುಂದಿನ ಎರಡು ವಾರದಲ್ಲಿ ಕರುಡು ಪ್ರತಿಯನ್ನು ಮೀನುಗಾರರ ನಡುವೆ ಚರ್ಚಿಸಲು ಅವಕಾಶ ಕಲ್ಪಿಸಲಾಗುವುದು. ಅಗತ್ಯವಿದಲ್ಲಿ, ಈಗಿರುವ ಕರ್ನಾಟಕ ಮೀನುಗಾರಿಕೆ ನಿಯಂತ್ರಣ ಕಾಯಿದೆಗೆ ಮತ್ತು ಒಳನಾಡು ಮೀನುಗಾರಿಕಾ ನೀತಿಗೆ ತಿದ್ದುಪಡಿ ತರಲು ಅನುವಾಗುವಂತೆ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲು ಪೂರ್ವಭಾವಿ ಕ್ರಮ ಕೈಗೊಳ್ಳಲು ಸೂಚಿಸಾಗಿದೆ ಎಂದು ಸಚಿವರು ವಿವರಿಸಿದರು.

ರಾಜ್ಯದಲ್ಲಿ 50 ಕೋಟಿ ಮೀನು ಮರಿಗಳ ಬೇಡಿಕೆ ಇದೆ. ರಾಜ್ಯದ ಸರಕಾರಿ ಮೀನು ಮರಿ ಉತ್ಪಾದನಾ ಘಟಕ, ಖಾಸಗಿ ಖರೀದಿ ಮೂಲಕವೂ ಈ ಬೇಡಿಕೆಯಲ್ಲಿ ಶೇ. 55ರಷ್ಟು ಮಾತ್ರವೇ ಪೂರ್ಣಗೊಳಿಸಲು ಸಾಧ್ಯವಾಗಿದೆ. ಹಾಗಾಗಿ ರಾಜ್ಯದಲ್ಲಿ ಮೀನು ಮರಿ ಕೇಂದ್ರಗಳ ಉನ್ನತೀಕರಣಕ್ಕಾಗಿ 473 ಲಕ್ಷ ರೂ.ಗಳ ಯೋಜನೆಯನ್ನು ಸಿದ್ಧಗೊಳಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಕೋಟ ಶ್ರೀನಿವಾಸ ಪೂಜಾರಿ ನುಡಿದರು.

ನಾರಾಯಣಪುರ ಮೀನು ಉತ್ಪಾದನಾ ಕೇಂದ್ರದ ಉನ್ನತೀಕರಣಕ್ಕೆ 4 ಕೋಟಿ ರೂ. ವೆಚ್ಚದ ಯೋಜನೆ ಸಿದ್ಧಗೊಂಡಿದೆ ಎಂದು ಹೇಳಿದ ಅವರು, ಮಂಗಳೂರಿನ 3ನೆ ಹಂತದ ಜಟ್ಟಿ ನಿರ್ಮಾಣಕ್ಕೆ 22 ಕೋಟಿ ರೂ.ಗಳ ಯೊೀಜನೆ ವರದಿ ಸಿದ್ಧಗೊಂಡಿದೆ ಎಂದರು.

ಮುಂದಿನ 3 ವಾರಗಳಲ್ಲಿ ಸಚಿವ ಸಂಪುಟದಲ್ಲಿ ಇದು ಪ್ರಸ್ತಾಪಗೊಂಡು ಅನುದಾನ ದೊರೆಯಲಿದೆ ಎಂದು ಅವರು ಹೇಳಿದರು.

ಮಂಗಳೂರು- ಮಲ್ಪೆಯಲ್ಲಿ ತೇಲುವ ಜಟ್ಟಿ!

ಮಂಗಳೂರು ಹಾಗೂ ಮಲ್ಪೆ ಕಡಲ ತೀರದಲ್ಲಿ ತೇಲುವ ಜಟ್ಟಿ ನಿರ್ಮಾಣಕ್ಕೆ ಯೋಜನೆ ಸಿದ್ಧಪಡಿಸಲಾಗುತ್ತಿದೆ. ಚೆನ್ನೈ ಐಐಟಿಯಿಂದ ತಾಂತ್ರಿಕ ವರದಿದ ಆಧಾರದಲ್ಲಿ ಆರೂವರೆ ಕೋಟಿ ರೂ. ವೆಚ್ಚದಲ್ಲಿ ಈ ಜಟ್ಟಿ ನಿರ್ಮಾಣ ವಾಗಲಿದೆ. ಇದೊಂದು ಹೊಸ ಕಲ್ಪನೆಯಾಗಿದ್ದು, ಗೋವಾದಲ್ಲಿ ಈಗಾಗಲೇ ಇಂತಹ ಜಟ್ಟಿಯನ್ನು ನಿರ್ಮಿಸಲಾಗಿದ್ದು, ಅಧಿಕಾರಿಗಳು ಈ ಬಗ್ಗೆ ಅಧ್ಯಯನ ಮಾಡಿ ಲೋಪದೋಷಗಳನ್ನು ಅರಿಯಲಾಗುವುದು ಎಂದು ಸಚಿವ ಶ್ರೀನಿವಾಸ ಪೂಜಾರಿ ಹೇಳಿದರು.

ಗೋಷ್ಠಿಯಲ್ಲಿ ಮೀನುಗಾರಿಕಾ ಮುಖಂ ನಿತಿನ್ ಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News