ಅಧ್ಯಯನ ನಡೆಸಿ ಯೋಜನೆ ಜಾರಿ: ಸಚಿವ ಕೋಟ

Update: 2019-11-21 12:21 GMT

ಮಂಗಳೂರು, ನ.21: ಮಂಗಳೂರು ಹಾಗೂ ಮಲ್ಪೆ ಕಡಲ ತೀರದಲ್ಲಿ ತೇಲುವ ಜಟ್ಟಿ ನಿರ್ಮಾಣಕ್ಕೆ ಯೋಜನೆ ಸಿದ್ಧ ಪಡಿಸಲಾಗುತ್ತಿದೆ. ಚೆನ್ನೈ ಐಐಟಿಯಿಂದ ತಾಂತ್ರಿಕ ವರದಿ ಆಧಾರದಲ್ಲಿ ಆರೂವರೆ ಕೋಟಿ ರೂ. ವೆಚ್ಚದಲ್ಲಿ ಈ ಜಟ್ಟಿ ನಿರ್ಮಾಣವಾಗಲಿದೆ ಎಂದು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಅವರು, ಇದೊಂದು ಹೊಸ ಕಲ್ಪನೆಯಾಗಿದ್ದು, ಗೋವಾದಲ್ಲಿ ಈಗಾಗಲೇ ಇಂತಹ ಜಟ್ಟಿಯನ್ನು ನಿರ್ಮಿಸಲಾಗಿದ್ದು, ಅಧಿಕಾರಿಗಳು ಈ ಬಗ್ಗೆ ಅಧ್ಯಯನ ಮಾಡಿ ಲೋಪದೋಷಗಳನ್ನು ಅರಿಯಲಾಗುವುದು ಎಂದರು.

ಮಲ್ಪೆ ಸಮುದ್ರ ಕಿನಾರೆಯಲ್ಲಿ ತ್ಯಾಜ್ಯ ನಿರ್ವಹಣಾ ಘಟಕ

ವಿನೂತನ ಕ್ರಮವಾಗಿ ಮಲ್ಪೆ ಸಮುದ್ರ ಕಿನಾರೆಯಲ್ಲಿ ತ್ಯಾಜ್ಯ ನಿರ್ವಹಣಾ ಘಟಕವನ್ನು ಸ್ಥಾಪಿಸಲು ಮೀನುಗಾರಿಕಾ ಇಲಾಖೆ ಕ್ರಮ ಕೈಗೊಂಡಿದೆ. ಯೋಜನೆಗೆ ಸಂಬಂಧಿಸ ಕೆಯುಡಬ್ಲುಡಿ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ತಾಂತ್ರಿಕ ಮಾಹಿತಿ ಪಡೆದು ಕಾಮಗಾರಿ ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಮಲ್ಪೆ ಬಂದರಿನಲ್ಲಿರುವ ಸ್ಪೀಪ್‌ವೇ ನಿರ್ವಹಣೆಯನ್ನು ಟೆಬ್ಮಾ ಶಿಪ್ ಯಾರ್ಡ್‌ನಿಂದ ಮಲ್ಪೆ ಮೀನುಗಾರರ ಸಂಘಕ್ಕೆ ನೀಡಿ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಮುಂದಿನ ಸಭೆಯಲ್ಲಿ ಚರ್ಚಿಸಿ ನಿರ್ಣಯಿಸಲು ತೀಮಾನಿಸಲಾಗಿದೆ. ಇದೇ ವೇಳೆ ಮಲ್ಪೆಯಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಜಟ್ಟಿ ವಿಸ್ತರಣೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದರು.

ರಾಜ್ಯದ 31 ಕಡೆ ಮತ್ಸದರ್ಶಿನಿ ಹೊಟೇಲ್‌ಗಳು

ಬೆಂಗಳೂರು, ಮಂಗಳೂರು ಉಡುಪಿ, ಬಳ್ಳಾರಿ, ಶಿವಮೊಗ್ಗ, ಬೆಳ್ತಂಗಡಿ, ಪುತ್ತೂರು, ಸುಳ್ಯ, ತುಮಕೂರು, ರಾಯಚೂರು, ಕಲಬುರ್ಗಿ, ಮೈಸೂರು ಸೇರಿದಂತೆ ರಾಜ್ಯದ ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಪ್ರಥಮ ಹಂತದಲ್ಲಿ 31 ಮತ್ಸದರ್ಶಿನಿ ಹೊಟೇಲ್‌ಗಳನ್ನು ತೆರೆಯಲು ನಿರ್ಧರಿಸಲಾಗಿದೆ ಎಂದು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಇದಕ್ಕಾಗಿ ಈಗಾಗಲೇ 11 ಕೋಟಿ ರೂ.ಗಳನ್ನು ಕಾಯ್ದಿರಿಸಲಾಗಿದೆ. ತಾಜಾ ಮೀನು ಹಾಗೂ ಆಲಂಕಾರಿಕ ಮೀನುಗಾರ ಮಾರಾಟಕ್ಕೂ ವ್ಯವಸ್ಥೆ ಆಗಲಿದೆ. ಮೀನು ಪ್ರಿಯರಿಗೆ ತಾಜಾ ಮೀನಿನ ಊಟ ಈ ಹೊಟೇಲ್‌ಗಳಲ್ಲಿ ಲಭ್ಯವಾಗಲಿದೆ ಎಂದು ಅವರು ಹೇಳಿದರು.

ಕರಾವಳಿ ವಲಯಗಳ ಭದ್ರತೆಗೆ ಕ್ರಮ

ಮೀನುಗಾರರ ಸಮಸ್ಯೆ ಹಾಗೂ ಆಡಳಿತಾತ್ಮಕ ಸಮಸ್ಯೆಗಳ ಜತೆ ಕರಾವಳಿ ವಲಯದ ಭದ್ರತೆಗೆ ಸಂಬಂಧಿಸಿ ಮೂರು ಜಿಲ್ಲೆಗಳ ಸಭೆಯನ್ನು ಡಿಸೆಂಬರ್ 5ರಿಂದ 10ರೊಳಗೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News