ವಿಶ್ವ ಕೊಂಕಣಿ ಸಾಹಿತ್ಯ ಮತ್ತು ಸಮಾಜ ಸೇವಾ ಪುರಸ್ಕಾರ ಪ್ರದಾನ

Update: 2019-11-21 13:26 GMT

ಮಂಗಳೂರು, ನ.21: ಮಣಿಪಾಲ ಗ್ಲೋಬಲ್ ಎಜುಕೇಶನ್ ಸಂಸ್ಥೆಯ ಅಧ್ಯಕ್ಷ ಟಿ.ವಿ ಮೋಹನ್ ದಾಸ ಪೈ ಪ್ರಾಯೋಜಕತ್ವದ ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದ ವತಿಯಿಂದ 2019ರ ಸಾಲಿನ ಏಳು ಸಾಧಕರಿಗೆ ವಿಶ್ವ ಕೊಂಕಣಿ ಸಾಹಿತ್ಯ ಮತ್ತು ಸಮಾಜ ಸೇವಾ ಪುರಸ್ಕಾರವನ್ನು ನ.23ರಂದು ಪ್ರದಾನ ಮಾಡಲಾಗುತ್ತದೆ.

ನಗರದ ಟಿ.ವಿ.ರಮಣ್ ಪೈ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಕೊಂಕಣಿ ಲೇಖಕ ದೇವದಾಸ್ ಕದಮ್‌ರ ಜಾಣಮಯ ಕಾದಂಬರಿಗೆ ಶ್ರೀಮತಿ ವಿಮಲಾ ವಿ.ಪೈ ವಿಶ್ವ ಕೊಂಕಣಿ ಅತ್ಯುತ್ತಮ ಪುಸ್ತಕ ಪುರಸ್ಕಾರ, ಆಕಾಶವಾಣಿ ಕೇಂದ್ರದ ನಿವೃತ್ತ ಉದ್ಘೊಷಕಿ ಶಕುಂತಲಾ ಕಿಣಿ ಅವರ ಥೋಡೇ ಏಕಾಂತ್ ಕವಿತಾ ಸಂಗ್ರಹಕ್ಕೆ ವಿಮಲಾ ವಿ.ಪೈ ಅತ್ಯುತ್ತಮ ಕವಿತಾ ಕೃತಿ ಪುರಸ್ಕಾರ, ಸಾಹಿತಿ, ಸಂಶೋಧಕ ರೋಕಿ ವಿ.ಮೀರಾಂದರಿಗೆ ಶ್ರೀಮತಿ ವಿಮಲಾ ವಿ.ಪೈ ವಿಶ್ವ ಕೊಂಕಣಿ ಜೀವನ ಸಿದ್ಧಿ ಪುರಸ್ಕಾರ, ಅಂತರ್‌ರಾಷ್ಟ್ರೀಯ ಯೋಗ ಸಾಧಕ ಮೈಸೂರಿನ ಕೆ.ರಾಘವೇಂದ್ರ ಪೈಯವರಿಗೆ ಬಸ್ತಿ ವಾಮನ ಶೆಣೈ ಸೇವಾ ಪ್ರಶಸ್ತಿ, ಕೊಂಕಣಿ ಮಹಿಳಾ ವಿಭಾಗದಲ್ಲಿ ಸಮಾಜ ಸೇವಾ ಕಾರ್ಯಕರ್ತೆ ಮೀರಾ ಶ್ರೀನಿವಾಸ ಶ್ಯಾನ್ ಭಾಗ್‌ರಿಗೆ ಬಸ್ತಿ ವಾಮನ ಶೆಣೈ ವಿಶ್ವ ಕೊಂಕಣಿ ಸಮಾಜ ಸೇವಾ ಪುರಸ್ಕಾರ ಪ್ರದಾನ ಮಾಡಲಾಗುತ್ತದೆ.

ಇದಲ್ಲದೆ ಮಣಿಪಾಲ ಗ್ಲೋಬಲ್ ಎಜುಕೇಶನ್ ಸರ್ವಿಸ್‌ನ ಮುಖ್ಯಸ್ಥ ಟಿ.ವಿ.ಮೋಹನ್ ದಾಸ್ ಪೈಯವರ ತಾಯಿಯ ಹೆಸರಿನಲ್ಲಿ ಈ ವರ್ಷ ವಿಶೇಷವಾಗಿ ಶ್ರೀಮತಿ ವಿಮಲಾ ವಿ ಪೈ ವಿಶ್ವ ಕೊಂಕಣಿ ವಿಶೇಷ ಪುರಸ್ಕಾರ ಘೋಷಿಸಿದ್ದಾರೆ. ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕಲಾವಿದರಾಗಿ ಹಲವು ವರ್ಷಗಳಿಂದ ಸಂಗೀತ ಕಲಾಕ್ಷೇತ್ರದಲ್ಲಿ ಮಾಡಿದ ಸೇವೆಗಾಗಿ ವಸಂತಿ ಆರ್.ನಾಯಕ್ ಮತ್ತು ಗೋವಾ ಸ್ವಾತಂತ್ರ ಚಳವಳಿಯ ಕಾಲದಿಂದಲೂ ನಿರಂತರವಾಗಿ ಲೇಖನಗಳನ್ನು ಬರೆದು ಖ್ಯಾತರಾದ ಸುಹಾಸ ಯಶವಂತ ದಲಾಲ್‌ರಿಗೆ ಶ್ರೀಮತಿ ವಿಮಲಾ ವಿ.ಪೈ ಕೊಂಕಣಿ ವಿಶೇಷ ಪುರಸ್ಕಾರ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News