ನ.23: ಶಾದಿ ಮಹಲ್‌ನಲ್ಲಿ ‘ಅಲ್ ಕಲಮ್ ಫೆಸ್ಟ್’

Update: 2019-11-21 14:37 GMT

ಮಂಗಳೂರು, ನ.21:ನಗರದ ಅಲ್ ಕಲಮ್ ಅರಬಿಕ್ ಅಕಾಡಮಿಯ ವತಿಯಿಂದ ನ. 23ರಂದು ಬೆಳಗ್ಗೆ 10ರಿಂದ ರಾತ್ರಿ 7 ಗಂಟೆಯವರೆಗೆ ಬೋಳಾರದ ಶಾದಿಮಹಲ್‌ನಲ್ಲಿ ‘ಅಲ್ ಕಲಮ್ ಫೆಸ್ಟ್’ ನಡೆಯಲಿದೆ.

ಎಲ್ಲಾ ಧರ್ಮದ ಮಹಿಳೆಯರಿಗಾಗಿ ಮಹಿಳೆಯರೇ ನಡೆಸುವ ಈ ಫೆಸ್ಟ್‌ನಲ್ಲಿ ಆಹಾರ, ಕ್ವಿಝ್-ಆಟೋಟ ಸ್ಪರ್ಧೆಗಳಲ್ಲದೆ ಚಪ್ಪಲಿ, ಬ್ಯಾಗ್, ಆಟಿಕೆ ಸಾಮಗ್ರಿಗಳು, ಬಟ್ಟೆಬರೆಗಳ ಮಾರಾಟ ಮತ್ತು ಪ್ರದರ್ಶನ ಮತ್ತಿತರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಫೆಸ್ಟ್‌ನಿಂದ ಬರುವ ಲಾಭವನ್ನು ಅನಾಥ ಹಾಗೂ ಆರ್ಥಿಕವಾಗಿ ಹಿಂದುಳಿದ ಹೆಣ್ಮಕ್ಕಳ ಅಧ್ಯಯನ, ವಸತಿ, ಆಹಾರ ಇತ್ಯಾದಿಗಳಿಗೆ ಬಳಸಿಕೊಳ್ಳಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

2011ರಲ್ಲಿ ಪಾಂಡೇಶ್ವರ ಸಮೀಪದ ಸುಭಾಷ್‌ನಗರದಲ್ಲಿ ಸ್ಥಾಪನೆಗೊಂಡ ‘ಅಲ್ ಕಲಮ್ ಅರಬಿಕ್ ಅಕಾಡಮಿ’ಯಲ್ಲಿ ದರ್ಸ್ (ಪ್ರೌಢ) ಶಿಕ್ಷಣ ನೀಡಲಾಗುತ್ತಿತ್ತು. ಇದರ ಇನ್ನೊಂದು ಶಾಖೆಯು ವಾಸ್‌ಲೇನ್ ಸಮೀಪವಿದೆ. ಶ್ರೀಮಂತರು ತಮ್ಮ ಮಕ್ಕಳನ್ನು ಅಧಿಕ ಶುಲ್ಕ ಭರಿಸಿದ ಅರಬಿಕ್ ಶಿಕ್ಷಣ ನೀಡಿದರೂ ಅನಾಥ ಹೆಣ್ಮಕ್ಕಳಿಗೆ ಶಿಕ್ಷಣ ನೀಡುವವರು ಯಾರೂ ಇಲ್ಲವಲ್ಲ ಎಂದು ಭಾವಿಸಿ 2015ರಲ್ಲಿ ನಾವು ಅನಾಥ ಹೆಣ್ಮಕ್ಕಳಿಗೂ ಕುರಾನ್ ಹಿಫ್ಳ್ ಕಲಿಸುವ ಮಹತ್ವದ ಯೋಜನೆಗೆ ಕೈ ಹಾಕಿದೆವು. 5 ಅನಾಥ ಮಕ್ಕಳಿಂದ ಆರಂಭಗೊಂಡ ಹಿಫ್ಳ್ ತರಗತಿಯಲ್ಲಿ ಹಾಸನ, ಮಡಿಕೇರಿ, ಶಿವಮೊಗ್ಗ ಮತ್ತಿತರ ಪ್ರದೇಶದ 30 ಮಕ್ಕಳಿದ್ದಾರೆ.

ಈಗಾಗಲೆ ನಾವು ಇಬ್ಬರು ಅನಾಥ ಹೆಣ್ಮಕ್ಕಳ ಮದುವೆಯನ್ನೂ ಮಾಡಿಸಿದ್ದೇವೆ. ಮೊದಲು ನಮ್ಮ ಕುಟುಂಬದ ಮೂವರು ಸದಸ್ಯರು ಸೇರಿಕೊಂಡು ಅಕಾಡಮಿಯನ್ನು ಸ್ಥಾಪಿಸಿದ್ದರೆ ಇದೀಗ ಐದು ಮಂದಿ ಇದರಲ್ಲಿ ಟ್ರಸ್ಟಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸದ್ಯ ಬಾಡಿಗೆ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದು, ಸ್ವಂತ ಕಟ್ಟಡ ನಿರ್ಮಿಸುವ ಸಲುವಾಗಿ ರಾ.ಹೆ.66ರ ಕಲ್ಲಾಪು ಬಳಿ ಸ್ವಂತ ಜಮೀನು ಖರೀದಿಸಿದ್ದೇವೆ ಎಂದು ಅಕಾಡಮಿಯ ಎಚ್‌ಒಡಿ ರೇಶ್ಮಾ ಎಂ.ಎಸ್. ತಿಳಿಸಿದ್ದಾರೆ.

ಅನಾಥ ಹೆಣ್ಮಕ್ಕಳಿಗೆ ಸಹಾಯ ಮಾಡುವ ಸಲುವಾಗಿ ನಾವು ಕಳೆದ ವರ್ಷ ನವೆಂಬರ್ 17ರಂದು ಮೊದಲ ಬಾರಿಗೆ ‘ಅಲ್ ಕಲಮ್ ಫೆಸ್ಟ್’ ಆರಂಭಿಸಿದೆವು. ಇದೀಗ ಎರಡನೆ ವರ್ಷದ ಫೆಸ್ಟ್ ನಡೆಸಲು ಸಿದ್ಧತೆ ನಡೆಸುತ್ತಿದ್ದೇವೆ. ಕಳೆದ ಬಾರಿ 3 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. 15 ವರ್ಷ ಮೇಲ್ಪಟ್ಟವರಿಗೆ ಪ್ರವೇಶ ಶುಲ್ಕವಿದೆ. ಅನಾಥ ಮಕ್ಕಳ ಕಲ್ಯಾಣಕ್ಕಾಗಿಯೇ ‘ಅಲ್ ಕಲಮ್ ಫೆಸ್ಟ್’ನ್ನ ಆಯೋಜಿಸಲಾಗಿದೆ ಎಂದು ರೇಶ್ಮಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News