ಗೂಗಲ್, ಫೇಸ್‌ಬುಕ್‌ನ ವ್ಯಾಪಾರ ಮಾದರಿಗಳು ಮಾನವಹಕ್ಕುಗಳಿಗೆ ಬೆದರಿಕೆ: ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್

Update: 2019-11-21 16:02 GMT

ಸ್ಯಾನ್‌ಫ್ರಾನ್ಸಿಸ್ಕೊ (ಅಮೆರಿಕ), ನ. 21: ಫೇಸ್‌ಬುಕ್ ಮತ್ತು ಗೂಗಲ್ ಅನುಸರಿಸುತ್ತಿರುವ ದತ್ತಾಂಶ ಸಂಗ್ರಹ ವ್ಯಾಪಾರ ಮಾದರಿಯು ಜಗತ್ತಿನಾದ್ಯಂತ ಮಾನವಹಕ್ಕುಗಳಿಗೆ ಬೆದರಿಕೆಯಾಗಿದೆ ಎಂದು ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್‌ನ ವರದಿಯೊಂದು ಬುಧವಾರ ಹೇಳಿದೆ.

ಜನರಿಗೆ ಉಚಿತ ಆನ್‌ಲೈನ್ ಸೇವೆಗಳನ್ನು ನೀಡಿ, ಬಳಿಕ ಅವರ ಕುರಿತ ಮಾಹಿತಿಗಳನ್ನು ಹಣ ಮಾಡುವ ಜಾಹೀರಾತುಗಳಿಗೆ ನೀಡುವುದು ಅಭಿಪ್ರಾಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಗಳು ಸೇರಿದಂತೆ ಹಲವಾರು ಸ್ವಾತಂತ್ರ್ಯಗಳು ಉಲ್ಲಂಘಿಸುತ್ತದೆ ಎಂದು ಅದು ಅಭಿಪ್ರಾಯಪಟ್ಟಿದೆ.

‘‘ಗೂಗಲ್ ಮತ್ತು ಫೇಸ್‌ಬುಕ್‌ಗಳು ನೀಡುತ್ತಿರುವ ಸೇವೆಗಳು ನೈಜ ಮಹತ್ವವನ್ನು ಹೊಂದಿರುವ ಹೊರತಾಗಿಯೂ, ಅದಕ್ಕೆ ನಾವು ಬೆಲೆಯನ್ನು ತೆರುತ್ತಿದ್ದೇವೆ’’ ಎಂದು ‘ಸರ್ವೇಲನ್ಸ್ ಜಯಂಟ್ಸ್’ (ಕಣ್ಗಾವಲು ದೈತ್ಯರು) ಎಂಬ ವರದಿಯಲ್ಲಿ ಆ್ಯಮ್ನೆಸ್ಟಿ ಅಭಿಪ್ರಾಯಪಟ್ಟಿದೆ.

‘‘ಈ ಕಂಪೆನಿಗಳ ಕಣ್ಗಾವಲು ಆಧಾರಿತ ವ್ಯಾಪಾರ ಮಾದರಿಯು, ಮಾಹಿತಿ, ಜ್ಞಾನಕ್ಕಾಗಿ ತಮ್ಮ ಆತ್ಮವನ್ನೇ ಮಾರಿಕೊಳ್ಳುವಂತೆ ಜನರನ್ನು ಪ್ರೇರೇಪಿಸುತ್ತದೆ. ಇಲ್ಲಿ ಮಾನವಹಕ್ಕುಗಳ ಉಲ್ಲಂಘನೆಯೇ ಮೂಲವಾಗಿರುವ ವ್ಯವಸ್ಥೆಯೊಂದಕ್ಕೆ ನಮ್ಮನ್ನು ಒಪ್ಪಿಸಿಕೊಂಡು, ಆನ್‌ಲೈನ್ ಮೂಲಕ ಮಾತ್ರ ಮಾನವಹಕ್ಕುಗಳನ್ನು ಅನುಭವಿಸುವಂತಾಗಿದೆ’’ ಎಂದು ಅದು ಹೇಳಿದೆ.

 ‘‘ಪ್ರತಿಕ್ಷಣವೂ ಜನರ ಚಲನವಲನಗಳ ಮೇಲೆ ನಿಗಾ ಇಡುವ ಈ ಎರಡು ಆನ್‌ಲೈನ್ ದೈತ್ಯ ಕಂಪೆನಿಗಳು ಬೃಹತ್ ಪ್ರಮಾಣದ ಮಾಹಿತಿಗಳನ್ನು ಕಲೆ ಹಾಕುತ್ತವೆ. ಈ ಮಾಹಿತಿಗಳನ್ನು ಅವುಗಳ ಗ್ರಾಹಕರ ವಿರುದ್ಧವೇ ಬಳಸಬಹುದಾಗಿದೆ’’ ಎಂದು ಲಂಡನ್‌ನಲ್ಲಿ ನೆಲೆ ಹೊಂದಿರುವ ಮಾನವಹಕ್ಕುಗಳ ಗುಂಪು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News