ಮಾತೃಭಾಷೆ ಎಂದಿಗೂ ಶಾಶ್ವತ: ವಸಂತಿ ಶೆಟ್ಟಿ

Update: 2019-11-21 16:25 GMT

ಶಿರ್ವ, ನ.21: ಇಂದು ಕನ್ನಡ ಉಳಿದಿರುವುದು ಕೆಳವರ್ಗದ ಕೂಲಿ ಕಾರ್ಮಿಕರ, ಬಡವರ್ಗದವರ ಮನೆಗಳಲ್ಲಿ ಅಲ್ಲದೆ ಯಕ್ಷಗಾನದಲ್ಲಿ ಎಂಬ ಸ್ಥಿತಿ ನಿರ್ಮಾಣಗೊಂಡಿದೆ. ಮಾತೃಭಾಷೆಯಲ್ಲಿ ಉತ್ತಮ ಸಂಸ್ಕಾರವಿದೆ. ಮಾತೃಭಾಷೆ ಎಂದಿಗೂ ಶಾಶ್ವತ, ಉಳಿದ ಭಾಷೆಗಳು ಬಂದು ಹೋಗುವ ನೆಂಟರು ಇದ್ದಂತೆ. ಆದ್ದರಿಂದ ಮಾತೃಭಾಷೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ವಸಂತಿ ಶೆಟ್ಟಿ ಬ್ರಹ್ಮಾವರ ಹೇಳಿದ್ದಾರೆ.

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಾಪು ಘಟಕ, ಮಣೂರು ಗೀತಾನಂದ ಫೌಂಡೇಶನ್, ಉಡುಪಿ ಜಿಲ್ಲಾಡಳಿತ, ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಗಳ ಸಹಬಾಗಿತ್ವದಲ್ಲಿ ಬುಧವಾರ ಶಿರ್ವ ಹಿಂದೂ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾದ ಶಾಲೆಯತ್ತ ಸಾಹಿತ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಶಿರ್ವ ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಹಾಗೂ ಕಾಪು ತಾಲೂಕು ಕಸಾಪ ಗೌರವ ಮಾರ್ಗದರ್ಶಕ ಪ್ರೊ.ವೈ.ಭಾಸ್ಕರ ಶೆಟ್ಟಿ ಮಾತನಾಡಿ, ಭಾಷೆ ಭಾವನೆಗಳನ್ನು ವ್ಯಕ್ತಪಡಿಸುವುದರ ಜೊತೆಗೆ ಬಾಂಧವ್ಯವನ್ನು ಬೆಳೆಸುತ್ತದೆ. ವಿದ್ಯಾರ್ಥಿಗಳು ನಮ್ಮ ಭಾಷೆಯ ಬಗ್ಗೆ ಅಭಿಮಾನ ಹಾಗೂ ಇತರ ಭಾಷೆಗಳ ಬಗ್ಗೆ ಗೌರವ ಬೆಳಸಿಕೊಳ್ಳಬೇಕು ಎಂದು ತಿಳಿಸಿದರು.

ಬ್ರಹ್ಮಾವರ ತಾಲೂಕು ಕಸಾಪ ಅಧ್ಯಕ್ಷ ನಾರಾಯಣ ಮಡಿ ಮಾತನಾಡಿ ದರು. ಅಧ್ಯಕ್ಷತೆಯನ್ನು ಕಾಪು ತಾಲೂಕು ಕಸಾಪ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ವಹಿಸಿದ್ದರು. ಹಿಂದು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಭಾಸ್ಕರ್, ಪ್ರೌಢ ಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಶಕಿಲಾ, ಕಸಾಪ ಕಾಪು ತಾಲೂಕು ಸಮಿತಿ ಸದಸ್ಯರಾದ ಹರೀಶ್ ಟ್ಪಾಡಿ, ಸುದಕ್ಷಿಣೆ ಉಪಸ್ಥಿತರಿದ್ದರು.

ಉಡುಪಿ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಪ್ರಾಸ್ತಾವಿಕ ವಾಗಿ ಮಾತನಾಡಿದರು. ವಿದ್ಯಾರ್ಥಿನಿಯರಾದ ಅಂಬಿಕಾ ಸ್ವಾಗತಿಸಿದರು. ಶ್ರುತಿ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಭಾವನಾ ಪರಿಚಯಿಸಿದರು. ಸ್ಪೂರ್ತಿ ಹಾಗೂ ಶ್ರೀಯಾಂಕಾ ಕಾರ್ಯಕ್ರಮ ನಿರೂಪಿಸಿದರು. ಕಸಾಪ ಸಮಿತಿ ಸದಸ್ಯ ಶಿವಾನಂದ ಕಾಮತ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News