ಕಂದಾವರ: ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆ

Update: 2019-11-21 16:52 GMT

ಗುರುಪುರ, ನ.21: ಕಂದಾವರ ಗ್ರಾಮದ ‘ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಭೆಯು ಗುರುವಾರ ಗ್ರಾಪಂ ಸಭಾಭವನದಲ್ಲಿ ಜರುಗಿತು.

ಸಭೆಯಲ್ಲಿ ಆದ್ಯಪಾಡಿ, ಕಿನ್ನಿಕಂಬಳ ಹಾಗೂ ಸುಂಕದಕಟ್ಟೆ ಪ್ರಾಥಮಿಕ ಹಾಗೂ ಪ್ರೌಢಾಶಾಲಾ ಮಕ್ಕಳು ಪಾಲ್ಗೊಂಡಿದ್ದು, ಶಾಲೆ ಹಾಗೂ ಶಾಲಾ ಪರಿಸರಕ್ಕೆ ಸಂಬಂಧಿಸಿದ ಹಲವು ಮಹತ್ವದ ಪ್ರಶ್ನೆಗಳು ಕೇಳಿ ಬಂದವು.

*ನಮ್ಮ ಶಾಲೆಯ ಆಟದ ಮೈದಾನಕ್ಕೆ ವಿದ್ಯುತ್ ದೀಪ, ಆವರಣ ಗೋಡೆ, ಕಸದ ತೊಟ್ಟಿ, ಸೀಸಿಟೀವಿ ಕ್ಯಾಮರಾ, ಶಾಲೆಗೆ ಹತ್ತಿರದ ರಸ್ತೆಗೆ ದುರಸ್ತಿ, ಬಸ್ಸಿನ ವ್ಯವಸ್ಥೆ ಇತ್ಯಾದಿ ಸಮಸ್ಯೆಯನ್ನು ಆದ್ಯಪಾಡಿ ಮಕ್ಕಳು ಸಭೆಯ ಮುಂದಿಟ್ಟರು.

*ನಮ್ಮಲ್ಲಿ ಆಟದ ಮೈದಾನವಿದ್ದರೂ ದೈಹಿಕ ಶಿಕ್ಷಕರಿಲ್ಲ. ಹಾಸ್ಟೆಲ್ ವ್ಯವಸ್ಥೆ ಇನ್ನೂ ಸರಿಯಾಗಿಲ್ಲ. ವಾರ್ಡನ್ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂದು ಸುಂಕದಕಟ್ಟೆ ಮಕ್ಕಳು ಅಸಮಾಧಾನ ವ್ಯಕ್ತಪಡಿಸಿದರು.

*ಶಾಲೆಯಲ್ಲೀಗ ದೈಹಿಕ ಶಿಕ್ಷಕರಿದ್ದಾರೆ. ಆದರೆ ನಮ್ಮಲ್ಲಿ ಆಡಲು ಮೈದಾನವೇ ಇಲ್ಲ. ಶಾಲೆಯ ಮುಂದೆ ಸಾವಿರಾರು ವಾಹನಗಳು ಓಡಾಡುತ್ತಿದ್ದು, ಮಕ್ಕಳು ಭಯದಿಂದ ರಸ್ತೆ ದಾಟಬೇಕಿದೆ. ಅಪಘಾತ ವಲಯವಾಗಿರುವ ಇಲ್ಲೊಂದು ರಸ್ತೆ ಹಂಪ್ಸ್, ದಾರಿದೀಪ ಅಳವಡಿಸಬೇಕು. ಶಾಲೆಯ ಹೊರಗಡೆ ಹುಲುಸಾಗಿ ಬೆಳೆದಿರುವ ಹುಲ್ಲು ತೆರವುಗೊಳಿಸಬೇಕು ಮತ್ತು ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಕಿನ್ನಿಕಂಬಳ ಶಾಲೆಯ ಮಕ್ಕಳು ಆಗ್ರಹಿಸಿದರು.

ಕಿನ್ನಿಕಂಬಳ ದಕ ಜಿಪಂ ಪ್ರೌಢಶಾಲೆಗೆ ಇಂಗ್ಲಿಷ್ ಶಿಕ್ಷಕರ ಕೊರತೆ ಇದೆ. ಈಗ ನಿಯುಕ್ತರಾಗಿರುವ ಶಿಕ್ಷಕರು ಇನ್ನೂ ಕೆಲಸಕ್ಕೆ ಹಾಜರಾಗಿಲ್ಲ. ಮಕ್ಕಳ ಸಂಖ್ಯೆ ಹೆಚ್ಚಿದ್ದು, ಶಿಕ್ಷಕರ ಕೊರತೆ ನೀಗಿಸಲು ಪ್ರಯತ್ನಿಸುವಂತೆ ಮಕ್ಕಳ ಪರವಾಗಿ ಶಿಕ್ಷಕಿ ತಾರಾ ಒತ್ತಾಯಿಸಿದರು.

ಕಂದಾವರ ಗ್ರಾಪಂ ಅಧ್ಯಕ್ಷೆ ಜಯಾ ಗೋಪಾಲ ಸುವರ್ಣ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಉಪಾಧ್ಯಕ್ಷ ದೇವೇಂದ್ರ ಮತ್ತು ಸದಸ್ಯರು ಉಪಸ್ಥಿತರಿದ್ದರು. ಪಿಡಿಒ ಯಶವಂತ ಬೆಳ್ಚಡ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News