ಮೋದಿ ಸರಕಾರದ 82 ಕಾರ್ಯದರ್ಶಿಗಳಲ್ಲಿ ಪ.ಜಾತಿ/ಪಂಗಡದಿಂದ ಕೇವಲ 4 ಮಂದಿ !

Update: 2019-11-21 18:45 GMT

ಹೊಸದಿಲ್ಲಿ, ನ. 21: ನರೇಂದ್ರ ಮೋದಿ ಸರಕಾರದ ವಿವಿಧ ಸಚಿವಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 82 ಕಾರ್ಯದರ್ಶಿಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದ ಕೇವಲ ನಾಲ್ಕು ಮಂದಿ ಮಾತ್ರ ಇದ್ದಾರೆ ಎಂದು ಗುರುವಾರ ರಾಜ್ಯಸಭೆಗೆ ಮಾಹಿತಿ ನೀಡಲಾಯಿತು.

ಸಚಿವಾಲಯಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿರುವ ಕಾರ್ಯದರ್ಶಿಗಳ ಸಂಖ್ಯೆಯ ಕುರಿತು ಸಿಪಿಎಂ ಸಂಸದ ಕೆ. ಸೋಮಪ್ರಸಾದ್ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಿಬ್ಬಂದಿ ಹಾಗೂ ತರಬೇತಿ ಖಾತೆಯ ಸಹಾಯಕ ಸಚಿವ ಜಿತೇಂದ್ರ ಸಿಂಗ್, ಅಂಗವಿಕಲ ಸಬಲೀಕರಣ ಇಲಾಖೆ, ಭೂಸಂಪನ್ಮೂಲ ಇಲಾಖೆ, ಔಷಧ ಇಲಾಖೆ, ಕಾರ್ಮಿಕ ಹಾಗೂ ಉದ್ಯೋಗ ಸಚಿವಾಲಯದಲ್ಲಿ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದ ತಲಾ ಒಬ್ಬರು ಕಾರ್ಯದರ್ಶಿ ಇದ್ದಾರೆ ಎಂದರು.

ಈ ಸಂದರ್ಭ ಎನ್‌ಸಿಪಿ ಸಂಸದ ಹುಸೈನ್ ದಳವಾಯಿ, ಸರಕಾರದಲ್ಲಿ ಉನ್ನತ ಶ್ರೇಣಿಯ ಹುದ್ದೆಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮುಸ್ಲಿಂ ಹಾಗೂ ಇತರ ಹಿಂದುಳಿದ ವರ್ಗಗಳ ಪ್ರಾತಿನಿಧ್ಯ ಎಷ್ಟಿದೆ ಎಂದು ಕೋರಿದರು. ಇದಕ್ಕೆ ಸಿಂಗ್, ಈ ಬಗೆಗಿನ ದತ್ತಾಂಶವನ್ನು ಸರಕಾರ ನಿರ್ವಹಿಸುತ್ತಿಲ್ಲ ಎಂದರು.

‘‘ಆರಂಭಿಕ ನೇಮಕಾತಿ ಸಂದರ್ಭ ಮಾತ್ರ ಈ ಪ್ರಾತಿನಿಧ್ಯ ಆಧಾರಿತ ದತ್ತಾಂಶ ಸಂಗ್ರಹಿಸಲಾಗುತ್ತದೆ. ಮೇಲಿನ ಶ್ರೇಣಿ ಹುದ್ದೆಗೆ ನೇಮಕಾತಿ/ಬಡ್ತಿ ಪಾತಿನಿಧ್ಯ ಆಧರಿಸಿಲ್ಲ. ಆದುದರಿಂದ ಅಂತಹ ದತ್ತಾಂಶವನ್ನು ನಿರ್ವಹಣೆ ಮಾಡುತ್ತಿಲ್ಲ’’ ಎಂದು ಸಿಂಗ್ ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News