ಐದು ವರ್ಷಗಳಲ್ಲಿ ಗಲ್ಫ್ ರಾಷ್ಟ್ರಗಳಲ್ಲಿ ಮೃತಪಟ್ಟ ಭಾರತೀಯರ ಸಂಖ್ಯೆ ಎಷ್ಟು ಗೊತ್ತಾ?

Update: 2019-11-22 11:12 GMT
Photo: arabiangazette.com

ಹೈದರಾಬಾದ್, ನ.22: ಗಲ್ಫ್ ರಾಷ್ಟ್ರಗಳಾದ ಕುವೈತ್, ಸೌದಿ ಅರೇಬಿಯಾ, ಬಹರೈನ್, ಕತರ್, ಒಮಾನ್ ಹಾಗೂ ಸಂಯುಕ್ತ ಅರಬ್ ಸಂಸ್ಥಾನದಲ್ಲಿ ಪ್ರತಿ ದಿನ ಸರಾಸರಿ 15 ಮಂದಿ ಭಾರತೀಯ ವಲಸಿಗರು ಸಾವನ್ನಪ್ಪುತ್ತಾರೆಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಂಕಿಅಂಶಗಳು ತಿಳಿಸುತ್ತವೆ.

ಗಲ್ಫ್ ರಾಷ್ಟ್ರಗಳಲ್ಲಿ 2014ರಿಂದ 33,988 ಭಾರತೀಯರು ಸಾವನ್ನಪ್ಪಿದ್ದಾರೆ. ಈ ವರ್ಷ 4,823 ಮಂದಿ ಸಾವಿಗೀಡಾಗಿದ್ದಾರೆಂದು   ಕಾಂಗ್ರೆಸ್ ಸಂಸದ ಹಾಗೂ ತೆಲಂಗಾಣ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಎನ್. ಉತ್ತಮ್ ಕುಮಾರ್ ರೆಡ್ಡಿಗೆ ನೀಡಿದ ಉತ್ತರದಲ್ಲಿ ವಿದೇಶಾಂಗ ವ್ಯವಹಾರಗಳ ಖಾತೆಯ ಸಹಾಯಕ ಸಚಿವ ವಿ. ಮುರಳೀಧರನ್ ತಿಳಿಸಿದ್ದಾರೆ.

ಹೆಚ್ಚಿನ ಸಾವು ಪ್ರಕರಣಗಳು ಸೌದಿ ಅರೇಬಿಯಾ ಹಾಗೂ ಸಂಯುಕ್ತ ಅರಬ್ ಸಂಸ್ಥಾನದಿಂದ ವರದಿಯಾಗಿದೆ ಎಂಬ ಮಾಹಿತಿಯನ್ನೂ ಸಚಿವರು ನೀಡಿದ್ದಾರೆ.

ಸೌದಿ ಅರೇಬಿಯಾದಲ್ಲಿ 2014ರಿಂದ 2019 ತನಕ 1,920 ಭಾರತೀಯರು ಮರಣ ಹೊಂದಿದ್ದರೆ, ಸಂಯುಕ್ತ ಅರಬ್ ಸಂಸ್ಥಾನದಲ್ಲಿ 1,451 ಮಂದಿ, ಕುವೈತ್‍ ನಲ್ಲಿ 584, ಒಮಾನ್‍ ನಲ್ಲಿ 402, ಕತರ್ ಹಾಗೂ ಬಹ್ರೈನ್‍ನಲ್ಲಿ ಕ್ರಮವಾಗಿ 286 ಹಾಗೂ 180 ಮಂದಿ ಸಾವನ್ನಪ್ಪಿದ್ದಾರೆಂದು ಸಚಿವರು ನೀಡಿದ ಮಾಹಿತಿ ತಿಳಿಸಿದೆ. 2014ರಲ್ಲಿ ಒಟ್ಟು ಸಾವಿನ ಸಂಖ್ಯೆ 5,388 ಆಗಿದ್ದರೆ, 2015ರಲ್ಲಿ 5,786, 2016ರಲ್ಲಿ 6,013, 2017ರಲ್ಲಿ 5,604, 2018ರಲ್ಲಿ 6,014 ಹಾಗೂ 2019ರಲ್ಲಿ 4,823 ಪ್ರಕರಣಗಳು ವರದಿಯಾಗಿವೆ.

ಹೆಚ್ಚಿನ ಗಲ್ಫ್ ಉದ್ಯೋಗಿಗಳು ಸಾಲದ ಹೊರೆ ಹಾಗೂ ಒತ್ತಡದಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕೆಲವೊಮ್ಮೆ ಕಠಿಣ ಉದ್ಯೋಗ ಪರಿಸ್ಥಿತಿಯೂ ಅವರ ಆರೋಗ್ಯದ ಮೇಲೆಪರಿಣಾಮ ಬೀರುತ್ತದೆ, ಎಂದು ತೆಲಂಗಾಣ ಗಲ್ಫ್ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷ ಪಿ ಬಸಂತ್ ರೆಡ್ಡಿ ಹೇಳುತ್ತಾರೆ.

ಹೀಗೆ ಗಲ್ಫ್ ರಾಷ್ಟ್ರಗಳಲ್ಲಿ ಮರಣವಪ್ಪಿದವರಲ್ಲಿ ಹೆಚ್ಚಿನವರು ತೆಲಂಗಾಣದವರು ಎಂದೂ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News