ನೆರೆ ಸಂತ್ರಸ್ತರ ದೂರುಗಳ ಬಗ್ಗೆ ಖುದ್ದು ಪರಿಶೀಲನೆ: ಲೋಕಾಯುಕ್ತ
ಉಡುಪಿ, ನ.22: ಇತ್ತೀಚೆಗೆ ಸುರಿದ ಬಾರಿ ಮಳೆ ಹಾಗೂ ಪ್ರಾಕೃತಿಕ ವಿಕೋಪಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಹಾನಿಗೊಳಗಾಗಿರುವ ಸಂತ್ರಸ್ತರಿಗೆ ಸಮರ್ಪಕವಾಗಿ ಪರಿಹಾರ ದೊರೆತಿರುವ ಬಗ್ಗೆ ಲೋಕಾಯುಕ್ತ ಅಧಿಕಾರಿ ಗಳಿಂದ ಖುದ್ದು ಪರಿಶೀಲನೆ ನಡೆಸಲಾಗುವುದು ಎಂದು ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ತಿಳಿಸಿದ್ದಾರೆ.
ಶುಕ್ರವಾರ ಉಡುಪಿ ಜಿಲ್ಲೆಗೆ ಭೇಟಿ ನೀಡಿದ ಅವರು ನಗರದೊಳಗಿನ ವಿವಿಧ ಹಾಸ್ಟೆಲ್‌ಗಳನ್ನು ಪರಿಶೀಲಿಸಿದ ಬಳಿಕ ಮಣಿಪಾಲ ಜಿಲ್ಲಾಧಿಕಾರಿ ಸಭಾಂಗಣ ದಲ್ಲಿ ಜಿಲ್ಲೆಯ ಅಧಿಕಾರಿಗ ಸಭೆ ನಡೆಸಿ ಮಾತನಾಡುತಿದ್ದರು.
ಕಂದಾಯ ಇಲಾಖೆಯಿಂದ ಪ್ರಾಕೃತಿಕ ವಿಕೋಪ ಸಂತ್ರಸ್ತರ ಪಟ್ಟಿ ಪಡೆದು, ಲೋಕಾಯುಕ್ತ ಇನ್ಸ್‌ಪೆಕ್ಟರ್‌ಗಳು ಖುದ್ದಾಗಿ ಸಂತ್ರಸ್ತರ ಮನೆಗಳಿಗೆ ಭೇಟಿ ನೀಡಿ ಪರಿಹಾರ ಮೊತ್ತ ದೊರಕಿರುವ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ ಎಂದು ಅವರು ತಿಳಿಸಿದರು.
ವಸತಿ ಯೋಜನೆಯಲ್ಲಿ ಅರ್ಹ ಫಲಾನುಭವಿಗಳಿಗೆ ಮನೆ ಮಂಜೂರಾ ಗುವಂತೆ ಗಮನ ಹರಿಸಬೇಕು. ಹಲವೆಡೆ ಗ್ರಾಪಂ ಅಧ್ಯಕ್ಷರು ಅನರ್ಹರಿಗೂ ವಸತಿ ಯೋಜನೆಯಲ್ಲಿ ಮನೆ ಮಂಜೂರಾಗಲು ಪಿಡಿಓಗಳ ಮೇಲೆ ಒತ್ತಡ ಹೇರಿರುವ ಬಗ್ಗೆ ದೂರುಗಳು ಬಂದಿವೆ. ಅಮೆರಿಕಾ ದೇಶದಲ್ಲಿ ಉದ್ಯೋಗದಲ್ಲಿ ರುವವರಿಗೂ ವಸತಿ ಯೋಜನೆಯ ಮನೆ ಮಂಜೂರಾಗಿರುವ ಪ್ರಕರಣಗಳು ಇವೆ. ಈ ನಿಟ್ಟಿನಲ್ಲಿ ಬಡವರಿಗೆ ಮಾತ್ರ ಮನೆ ಮಂಜೂರುಗೊಳಿಸುವಲ್ಲಿ ಮುತುವರ್ಜಿ ವಹಿಸಬೇಕು. ಇದರಲ್ಲಿ ಯಾವುದೇ ದಾಕ್ಷಿಣ್ಯ ಇರಬಾರದು ಎಂದು ಲೋಕಾಯುಕ್ತ ನ್ಯಾಯಮೂರ್ತಿ ತಿಳಿಸಿದರು.
ಮಧ್ಯವರ್ತಿಗಳನ್ನು ದೂರವಿಡಿ: ಆರ್‌ಟಿಓ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿಯಿಂದ ಸಾರ್ವಜನಿಕರು ಪಡೆಯುವ ಸೇವೆಗಳಿಗೆ ಹೆಚ್ಚು ಖರ್ಚು ಮಾಡಬೇಕಾಗುತ್ತಿದೆ ಎಂಬ ಬಗ್ಗೆ ವ್ಯಾಪಕ ದೂರುಗಳು ಬರುತ್ತಿವೆ. ಈ ನಿಟ್ಟಿನಲ್ಲಿ ಬ್ರೋಕರ್‌ಗಳನ್ನು ಆರ್‌ಟಿಓ ಕಚೇರಿಯಿಂದ ದೂರವಿಡಲು ನ್ಯಾ. ಪಿ.ವಿಶ್ವನಾಥ ಶೆಟ್ಟಿ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೇ, ಪರ್ಮಿಟ್ ಪಡೆದ ಖಾಸಗಿ ಬಸ್‌ಗಳು ನಿಗದಿತ ಮಾರ್ಗದಲ್ಲಿ ಸಂಚರಿಸುತ್ತಿರುವ ಬಗ್ಗೆ ನಿಗಾ ವಹಿಸಬೇಕು, ಖಾತ್ರಿ ಪಡಿಸಿ ಕೊಳ್ಳಬೇಕು ಎಂದವರು ತಿಳಿಸಿದರು.
ಕೃಷಿ ಇಲಾಖೆಯ ಕೃಷಿ ಹೊಂಡ ಯೋಜನೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಸಾಕಷ್ಟು ಪ್ರಗತಿಯಾಗಿಲ್ಲ. ಈ ನಿಟ್ಟಿನಲ್ಲಿ ಕೃಷಿಕರಿಗೆ ಇದರ ಬಗ್ಗೆ ಅರಿವು ಮೂಡಿಸಿ. ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಅವರು ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಜಗದೀಶ್, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋಟ್, ಉಪ ಅರಣ್ಯ ಸಂರಕ್ಷಣಾಧಿ ಕಾರಿ ಕಮಲಾ, ಎಎಸ್ಪಿಕುಮಾರ ಚಂ್ರ ಮತ್ತಿತರರು ಉಪಸ್ಥಿತರಿದ್ದರು.