ಉಡುಪಿ : ಹೆದ್ದಾರಿ ಬಳಿಯ ಟೆಂಟ್ ತೆರವು

Update: 2019-11-22 14:28 GMT

ಉಡುಪಿ, ನ.22: ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಉಡುಪಿ ಜಿಲ್ಲೆ ಮತ್ತು ಉಡುಪಿ ಜಿಲ್ಲಾ ನಾಗರಿಕ ಸೇವಾ ಸಮಿತಿ ಟ್ರಸ್ಟ್ ಉಡುಪಿ ಇವರ ಜಂಟಿ ಕಾರ್ಯಾಚರಣೆಯಲ್ಲಿ ಕರಾವಳಿ ಬೈಪಾಸ್ ಸಮೀಪದ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡಿರುವ ಟೆಂಟ್‌ನಲ್ಲಿ ವಾಸವಿದ್ದ ರಾಜಸ್ಥಾನ ಮೂಲದ ಐದು ಕುಟುಂಬಗಳ ಒಟ್ಟು 26 ಮಂದಿಯನ್ನು ಸುರಕ್ಷಿತವಾಗಿ ಬೇರೆ ಕಡೆ ಸ್ಥಳಾಂತರ ಗೊಳ್ಳುವಂತೆ ತಿಳಿಹೇಳಿ ಒಪ್ಪಿಸಲಾಯಿತು.

ಮಕ್ಕಳು ರಸ್ತೆ ಬದಿಯಲ್ಲಿ ವಾಸವಾಗಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳು ಸಂಚರಿಸುವುದರಿಂದ ಸಂಭವನೀಯ ದುರಂತ ತಪ್ಪಿಸುವ ನಿಟ್ಟಿನಲ್ಲಿ ಇಲಾಖೆ ಕ್ಷಿಪ್ರ ಕಾರ್ಯಾಚರಣೆ ಮೂಲಕ ನವಯುಗ ಕಂಪನಿಯ ಸಹಯೋಗದೊಂದಿಗೆ ನಿರಂತರವಾಗಿ ಟೆಂಟ್ ಹಾಕುವ ಪ್ರದೇಶಗಳಲ್ಲಿ ಜೆಸಿಬಿ ಯಿಂದ ಅಗೆದು ಮುಂದೆ ಆ ಪ್ರದೇಶಗಳಲ್ಲಿ ವಲಸೆ ಕಾರ್ಮಿಕರು ಟೆಂಟ್ ಅಳವಡಿಸದಂತೆ ಮಾಡಲಾಗುತ್ತಿದೆ.

ಈ ಕಾರ್ಯಾಚರಣೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸದಾನಂದ, ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್, ಸಮಾಲೋಚಕಿ ಅಂಬಿಕಾ ಕೆ.ಎಸ್, ಸಮಾಜ ಕಾರ್ಯಕರ್ತ ಯೋಗೀಶ್ ಮತ್ತು ಜಿಲ್ಲಾ ನಾಗರಿಕ ಸೇವಾ ಸಮಿತಿ ಟ್ರಸ್ಟ್‌ನ ನಿತ್ಯಾನಂದ ಒಳಕಾಡು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News