ಪುತ್ತೂರು: ಜೋಡಿ ಕೊಲೆ ಪ್ರಕರಣದ ಆರೋಪಿ ಪೊಲೀಸ್ ಕಸ್ಟಡಿಗೆ

Update: 2019-11-22 15:31 GMT

ಪುತ್ತೂರು: ಕುರಿಯ ಗ್ರಾಮದ ಅಜಲಾಡಿ ಸಮೀಪದ ಹೊಸಮಾರು ಎಂಬಲ್ಲಿ ನ.17ರಂದು ರಾತ್ರಿ ನಡೆದಿದ್ದ ಅಜ್ಜ ಮತ್ತು ಮೊಮ್ಮಗಳ ಜೋಡಿ ಕೊಲೆ ಪ್ರಕರಣದ ಆರೋಪಿ ಕರೀಂ ಖಾನ್‍ನನ್ನು ಸಂಪ್ಯ ಪೊಲೀಸರು ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಯ ಹೆಚ್ಚಿನ ವಿಚಾರಣೆಗಾಗಿ ಒಂದು ದಿನಕ್ಕೆ ಮತ್ತೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ಕುರಿಯದ ಹೊಸಮಾರು ಎಂಬಲ್ಲಿ ಕಳೆದ ರವಿವಾರ ರಾತ್ರಿ ಅಲ್ಲಿನ ನಿವಾಸಿ ಕೊಗ್ಗು ಸಾಹೇಬ್ (70), ಅವರ ಮೊಮ್ಮಗಳು, ಪುತ್ತೂರಿನ ಮಂಜಲ್ಪಡ್ಪು ಎಂ.ಪಿ.ಎಂ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ ಶಮಿಹಾ ಬಾನು (16) ಹತ್ಯೆ ನಡೆದಿತ್ತು.

ಕೊಗ್ಗು ಸಾಹೇಬ್ ಅವರ ಪತ್ನಿ ಖತೀಜಮ್ಮ (65)  ಮೇಲೆ ಗಂಭೀರ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮಂಗಳವಾರ ಆರೋಪಿ ಕರೀಂ ಖಾನ್‍ನನ್ನು ಬಂಧಿಸಿ, ಆತನಿಂದ ಕಳ್ಳತನ ನಡೆಸಿದ್ದ 30ಗ್ರಾಂ ತೂಕದ ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದರು.

ಕಳವು ನಡೆಸುವ ಉದ್ದೇಶದಿಂದ ಕೊಗ್ಗು ಸಾಹೇಬ್ ಅವರ ಮನೆಗೆ ನುಗ್ಗಿ ಕೊಲೆ ನಡೆಸಿದ ಸಂದರ್ಭ ನಡೆದಿದ್ದ ಘರ್ಷಣೆಯಲ್ಲಿ ಆರೋಪಿ ಕರೀಂಖಾನ್‍ನ ಕೈಗೆ ಗಾಯವಾಗಿ ಮೂಳೆ ಮುರಿತಕ್ಕೊಳಗಾಗಿತ್ತು. ಈ ಹಿನ್ನೆಲೆಯಲ್ಲಿ ಬಂಧಿತ ಆರೋಪಿಯನ್ನು ಗುರುವಾರ ಪೊಲೀಸರು ಪತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಪೊಲೀಸ್ ಪಹರೆ ನಿರ್ಮಿಸಿದ್ದರು.

ಆಸ್ಪತ್ರೆಯ ವೈದ್ಯ ಡಾ. ಅಜೇಯ್ ಅವರು ಆರೋಪಿಯ ಕೈಗೆ ಶಸ್ತ್ರಚಿಕಿತ್ಸೆ ನಡೆಸಿದ್ದರು. ಆಸ್ಪತ್ರೆಯ ವೈದ್ಯರು ನೀಡಿರುವ ಫಿಟ್ನೆಸ್ ಸರ್ಟಿಫಿಕೇಟ್ ಆಧಾರದಲ್ಲಿ ಶುಕ್ರವಾರ ಸಂಪ್ಯ ಎಸ್‍ಐ ಸತ್ತಿವೇಲು ಮತ್ತು ಸಿಬ್ಬಂದಿ ಆರೋಪಿ ಕರೀಂಖಾನ್‍ನನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಪ್ರಕರಣದ ಕುರಿತು ಹೆಚ್ಚಿನ ವಿಚಾರಣೆಯ ಹಿನ್ನಲೆಯಲ್ಲಿ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ನೀಡುವಂತೆ ಸಲ್ಲಿಸಿದ್ದ ಕೋರಿಕೆ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಾಲಯ ಆರೋಪಿಯನ್ನು ಒಂದು ದಿನದ ಮಟ್ಟಿಗೆ ಪೊಲೀಸ್ ಕಸ್ಟಡಿಗೆ ನೀಡಿದೆ.

ಆರೋಪಿಯನ್ನು ಕಸ್ಟಡಿಗೆ ಪಡೆದುಕೊಂಡ ಪೊಲೀಸರು ಶುಕ್ರವಾರ ಸಂಜೆಯ ವೇಳೆಗೆ ಮಹಜರು ಪ್ರಕ್ರಿಯೆ ಹಾಗೂ ತನಿಖೆಯನ್ನು ಪೂರ್ಣಗೊಳಿಸಿದ್ದಾರೆ. ತನಿಖೆ ಪ್ರಕ್ರಿಯೆ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ರಾತ್ರಿ ವೇಳೆ ಮತ್ತೆ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಸಂಪ್ಯ ಠಾಣೆಯ ಎಸ್‍ಐ ಸಕ್ತಿವೇಲು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News