ಚೀನಾದ ಮೂಲಸೌಕರ್ಯ ಯೋಜನೆಯಿಂದ ಪಾಕ್ ಆರ್ಥಿಕತೆಗೆ ಹಾನಿ: ಅಮೆರಿಕ ಅಧಿಕಾರಿ

Update: 2019-11-22 15:45 GMT

ವಾಶಿಂಗ್ಟನ್, ನ. 22: ಚೀನಾವು ತನ್ನ ಮಹತ್ವಾಕಾಂಕ್ಷೆಯ ಮೂಲಸೌಕರ್ಯ ಯೋಜನೆ ‘ಬೆಲ್ಟ್ ಆ್ಯಂಡ್ ರೋಡ್ ಇನಿಶಿಯೇಟಿವ್’ನ್ನು ಜಾರಿಗೊಳಿಸಿದರೆ ಪಾಕಿಸ್ತಾನಕ್ಕೆ ದೀರ್ಘಾವಧಿ ಆರ್ಥಿಕ ಹಾನಿ ಕಾದಿದೆ ಎಂದು ಅಮೆರಿಕ ಗುರುವಾರ ಎಚ್ಚರಿಸಿದೆ.

ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಯೋಜನೆಯು ಚೀನಾಕ್ಕೆ ಮಾತ್ರ ಲಾಭ ತರುತ್ತದೆ ಹಾಗೂ ಇದಕ್ಕಿಂತ ಒಳ್ಳೆಯ ಮಾದರಿಯನ್ನು ಅಮೆರಿಕ ಹೊಂದಿದೆಎಂದು ದಕ್ಷಿಣ ಏಶ್ಯಕ್ಕಾಗಿನ ಅಮೆರಿಕದ ಉಸ್ತುವಾರಿ ಸಹಾಯಕ ವಿದೇಶ ಕಾರ್ಯದರ್ಶಿ ಆ್ಯಲಿಸ್ ವೆಲ್ಸ್ ಹೇಳಿದರು. ‘‘ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ನೆರವಿನ ಯೋಜನೆಯಲ್ಲ ಎನ್ನುವುದು ಸ್ಪಷ್ಟವಾಗಿದೆ, ಅಥವಾ ಇನ್ನಾದರೂ ಸ್ಪಷ್ಟವಾಗಬೇಕಾಗಿದೆ’’ ಎಂದು ಅವರು ಹೇಳಿದರು.

ಹಲವು ಬಿಲಿಯ ಡಾಲರ್ ಯೋಜನೆಯು ಯಾವುದೇ ರಿಯಾಯಿತಿ ದರದಲ್ಲಿ ಸಾಲ ನೀಡುತ್ತಿಲ್ಲ, ಅದೂ ಅಲ್ಲದೆ ಚೀನಾದ ಕಂಪೆನಿಗಳು ಈ ಯೋಜನೆಯ ಜಾರಿಗೆ ತಮ್ಮದೇ ಕಾರ್ಮಿಕರು ಮತ್ತು ಪರಿಕರಗಳನ್ನು ಕಳುಹಿಸುತ್ತಿದ್ದಾರೆ ಎಂದು ಆ್ಯಲಿಸ್ ವೆಲ್ಸ್ ತಿಳಿಸಿದರು.

‘‘ಪಾಕಿಸ್ತಾನದಲ್ಲಿ ನಿರುದ್ಯೋಗವು ಹೆಚ್ಚುತ್ತಿದ್ದರೂ, ಈ ಆರ್ಥಿಕ ಕಾರಿಡಾರ್ ಮುಖ್ಯವಾಗಿ ಚೀನಾದ ಕೆಲಸಗಾರರು ಮತ್ತು ಸಲಕರಣೆಗಳನ್ನು ಅವಲಂಬಿಸಿದೆ’’ ಎಂದು ವುಡ್‌ರೋ ವಿಲ್ಸನ್ ಇಂಟರ್‌ನ್ಯಾಶನಲ್ ಸೆಂಟರ್ ಫಾರ್ ಸ್ಕಾಲರ್ಸ್‌ನಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡುತ್ತಾ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News