ಅಫ್ಘಾನ್‌ನಲ್ಲಿ ಭಾರತದ ಹೆಚ್ಚಿನ ಪಾತ್ರಕ್ಕೆ ಅಮೆರಿಕ ಬೆಂಬಲ

Update: 2019-11-22 15:51 GMT

ವಾಶಿಂಗ್ಟನ್, ನ. 22: ಅಫ್ಘಾನಿಸ್ತಾನದಲ್ಲಿರುವ ಅಮೆರಿಕ ಸೈನಿಕರನ್ನು ವಾಪಸ್ ಕರೆಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಾಗಿರುವಂತೆಯೇ, ಆ ದೇಶದೊಂದಿಗೆ ಭಾರತವು ಹೆಚ್ಚೆಚ್ಚು ತೊಡಗಿಕೊಳ್ಳುವುದನ್ನು ತಾನು ಬೆಂಬಲಿಸುವುದಾಗಿ ಅಮೆರಿಕ ಗುರುವಾರ ಹೇಳಿದೆ.

ಭಾರತವು ಅಫ್ಘಾನಿಸ್ತಾನದ ಪ್ರಮುಖ ಬೆಂಬಲಿಗ ದೇಶಗಳ ಪೈಕಿ ಒಂದಾಗಿದೆ. ಅಮೆರಿಕ ನೇತೃತ್ವದ ಮಿತ್ರಪಡೆಯು 2001ರಲ್ಲಿ ಅಫ್ಘಾನಿಸ್ತಾನದ ತಾಲಿಬಾನ್ ಸರಕಾರವನ್ನು ಉರುಳಿಸಿದ ಬಳಿಕ, ಭಾರತವು ಆ ದೇಶಕ್ಕೆ 3 ಬಿಲಿಯ ಡಾಲರ್ (ಸುಮಾರು 21,500 ಕೋಟಿ ರೂಪಾಯಿ)ಗೂ ಹೆಚ್ಚು ನೆರವನ್ನು ನೀಡಿದೆ.

‘‘ಅಫ್ಘಾನಿಸ್ತಾನದಲ್ಲಿ ಭಾರತದ ಗಣನೀಯ ಹೂಡಿಕೆ ಮತ್ತು ಆ ದೇಶಕ್ಕೆ ನೀಡುತ್ತಿರುವ ನೆರವನ್ನು ಅಮೆರಿಕ ಸ್ವಾಗತಿಸುತ್ತದೆ’’ ಎಂದು ಅಮೆರಿಕದ ವಿದೇಶಾಂಗ ಇಲಾಖೆಯಲ್ಲಿ ಅಫ್ಘಾನಿಸ್ತಾನದ ವ್ಯವಹಾರಗಳ ಹೊಣೆ ಹೊತ್ತಿರುವ ಅಧಿಕಾರಿ ನ್ಯಾನ್ಸಿ ಇರೊ ಜಾಕ್ಸನ್ ಹೇಳಿದರು.

‘‘ಅಫ್ಘಾನಿಸ್ತಾನದಲ್ಲಿ ಗೌರವಾನ್ವಿತ ಮತ್ತು ಶಾಶ್ವತ ಫಲಿತಾಂಶವನ್ನು ಸಾಧಿಸಲು ಹಾಗೂ ಆ ದೇಶದ ಭವಿಷ್ಯಕ್ಕಾಗಿ ನಾವು ಮಾಡಿರುವ ಹೂಡಿಕೆಗಳನ್ನು ಸಂರಕ್ಷಿಸುವ ಪ್ರಯತ್ನಗಳನ್ನು ನಾವು ಮುಂದೆಯೂ ಬೆಂಬಲಿಸುತ್ತೇವೆ’’ ಎಂದು ಅವರು ನುಡಿದರು.

‘ಅಫ್ಘಾನಿಸ್ತಾನದಲ್ಲಿ ಭಾರತದ ಪಾತ್ರ’ ಎಂಬ ವಿಷಯದ ಬಗ್ಗೆ ಹಡ್ಸನ್ ಇನ್‌ಸ್ಟಿಟ್ಯೂಟ್‌ನಲ್ಲಿ ನಡೆದ ಸಮ್ಮೇಳನವೊಂದರಲ್ಲಿ ಅವರು ಮಾತನಾಡುತ್ತಿದ್ದರು.

ಆದರೆ, ಅಫ್ಘಾನಿಸ್ತಾನದಲ್ಲಿ ಭಾರತ ತೊಡಗಿಸಿಕೊಳ್ಳುವುದನ್ನು ಪಾಕಿಸ್ತಾನ ಬಯಸುತ್ತಿಲ್ಲ. ಹಾಗಾಗಿ, ಅದು ಅಫ್ಘಾನಿಸ್ತಾನದ ಭಯೋತ್ಪಾದಕ ಸಂಘಟನೆ ತಾಲಿಬಾನ್ ಜೊತೆಗೆ ಕೈಜೋಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News