​ಮಂಗಳೂರು : ದುಬೈನಿಂದ ಆಗಮಿಸಿದ ಯುವಕನ ಸೂಟ್‌ಕೇಸ್ ಎಗರಿಸಿದ ದುಷ್ಕರ್ಮಿಗಳ ತಂಡ

Update: 2019-11-22 16:13 GMT
ಚಿತ್ರ : vcstar.com

ಮಂಗಳೂರು, ನ. 22: ದುಬೈನಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿ ಬಳಿಕ ಕಾರಿನಲ್ಲಿ ಕುಂಬಳೆಗೆ ತೆರಳುತ್ತಿದ್ದ ಯುವಕನೊಬ್ಬನನ್ನು ಬೆನ್ನಟ್ಟಿ ತಡೆದ ತಂಡವೊಂದು ಸೂಟ್‌ಕೇಸ್ ಎಗರಿಸಿ ಪರಾರಿಯಾದ ಘಟನೆ ಶುಕ್ರವಾರ ಸಂಜೆ ವೇಳೆ ಪದವಿನಂಗಡಿ ಬಳಿ ನಡೆದಿದೆ.

25 ವರ್ಷದ ಯುವಕ ಶುಕ್ರವಾರ ಸಂಜೆ 6:30ರ ವೇಳೆಗೆ ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ ಬಳಿಕ ಕೇರಳ ನೋಂದಾಯಿತ ಕಾರಿನಲ್ಲಿ ತನ್ನ ಊರು ಕುಂಬಳೆಯತ್ತ ತೆರಳುತ್ತಿದ್ದರು. ಈ ಸಂದರ್ಭ ಮಂಗಳೂರು ನೋಂದಣಿಯ ಮತ್ತೊಂದು ಕಾರಿನಲ್ಲಿ ನಾಲ್ಕು ಮಂದಿಯ ತಂಡ ಬೆನ್ನಟ್ಟಿಕೊಂಡು ಬಂದಿದೆ.

ಈ ತಂಡ ಪದವಿನಂಗಡಿ ಬಳಿ ಎದುರಿನ ಕಾರನ್ನು ಓವರ್‌ಟೇಕ್ ಮಾಡಿ ದುಬೈನಿಂದ ಆಗಮಿಸುತ್ತಿದ್ದ ಯುವಕನ ಕಾರಿಗೆ ಅಡ್ಡವಾಗಿ ನಿಲ್ಲಿಸಿದ್ದಾರೆ. ಬಳಿಕ ಇಳಿದು ಏಕಾಏಕಿ ಕಾರಿನೊಳಗಿದ್ದ ಯುವಕನಿಗೆ ಹಲ್ಲೆ ಮಾಡಿದ್ದಲ್ಲದೆ ಎರಡು ಸೂಟ್‌ಕೇಸ್‌ಗಳನ್ನು ಎಗರಿಸಿ ಬಂದ ಕಾರಿನಲ್ಲೇ ಮತ್ತೆ ಕಾವೂರಿನತ್ತ ಪರಾರಿಯಾಗಿದ್ದಾರೆ ಎಂದು ದೂರಲಾಗಿದೆ.

ಯುವಕ ದುಬೈನಿಂದ ಬರುತ್ತಿರುವ ಬಗ್ಗೆ ಮಾಹಿತಿ ಪಡೆದ ದುಷ್ಕರ್ಮಿಗಳು ಆತನ ಬರುವಿಕೆಯನ್ನೇ ಕಾದು ಕುಳಿತು ಬೆನ್ನುಬಿದ್ದಿರುವ ಸಾಧ್ಯತೆ ಇದೆ. ಪ್ರಕರಣದ ಸೂಕ್ಷ್ಮತೆ ನೋಡುವಾಗ ಪರಿಚಯಸ್ಥರೇ ಕೃತ್ಯ ಎಸಗಿರುವ ಸಾಧ್ಯತೆಯಿದ್ದು, ಇದರ ಹಿನ್ನೆಲೆ ಏನೆಂಬುದನ್ನು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಆದರೆ ದುಬೈನಿಂದ ಬಂದ ಯುವಕ ಮಾತ್ರ ಲೂಟಿಗೈದವರ ಪರಿಚಯ ನನಗಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ದುಷ್ಕರ್ಮಿಗಳು ಪರಾರಿಯಾದ ಕಾರು ಮಂಗಳೂರು ನೋಂದಣಿಯಾಗಿದ್ದು, ಅದರ ಬಗ್ಗೆಯೂ ಪೊಲೀಸರು ತೀವ್ರ ತಪಾಸಣೆ ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ಪೊಲೀಸರಲ್ಲೂ ಈ ಪ್ರಕರಣ ತೀವ್ರ ಕುತೂಹಲ ಮೂಡಿಸಿದೆ.

ಮಂಗಳೂರು ಗ್ರಾಮಾಂತರ ಠಾಣೆ ಪೊಲೀಸರು ದುಬೈ ಯುವಕ ಹಾಗೂ ಕಾರು ಚಾಲಕನನ್ನು ವಿಚಾರಣೆ ನಡೆಸುತ್ತಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News