​ಉಡುಪಿ: 18ನೇ ಭರತಮುನಿ ಜಯಂತ್ಯುತ್ಸವ

Update: 2019-11-22 16:36 GMT

ಉಡುಪಿ, ನ. 22: ಪರ್ಯಾಯ ಪಲಿಮಾರು ಮಠದ ಆಶ್ರಯದಲ್ಲಿ ರಾಧಾಕೃಷ್ಣ ನೃತ್ಯನಿಕೇತನ ಉಡುಪಿ ಇದರ ವತಿಯಿಂದ 18ನೇ ವರ್ಷದ ಭರತಮುನಿ ಜಯಂತ್ಯುತ್ಸವ ಇದೇ ಡಿ.1ರಂದು ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ನೃತ್ಯಗುರು ವಿದುಷಿ ವೀಣಾ ಎಂ.ಸಾಮಗ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೃತ್ಯಗುರು ರಾಧಾಕೃಷ್ಣ ತಂತ್ರಿಗಳಿಂದ ಸ್ಥಾಪನೆಗೊಂಡ ರಾಧಾಕೃಷ್ಣ ನೃತ್ಯನಿಕೇತನಕ್ಕೆ ಇದೀಗ 30 ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು, ಸಂಸ್ಥೆಯ ತ್ರಿಶಂತ್ ವರ್ಷದ ಉದ್ಘಾಟನೆಯೂ ಇದೇ ಸಂದರ್ಭದಲ್ಲಿ ನಡೆಯಲಿದೆ ಎಂದರು.

ನೃತ್ಯಕ್ಕೆ ಮೂಲಾಧಾರವಾದ ನಾಟ್ಯಶಾಸ್ತ್ರ ಗ್ರಂಥದ ಕೃರ್ತ ಭರತಮುನಿ ಜಯಂತ್ಯುತ್ಸವವನ್ನು ಡಿ.1ರ ಬೆಳಗ್ಗೆ 8:45ಕ್ಕೆ ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥರು ಉದ್ಘಾಟಿಸಲಿದ್ದಾರೆ. ಕಿರಿಯ ಯತಿಗಳಾದ ಶ್ರೀವಿದ್ಯಾರಾಜೇಶ್ವರ ತೀರ್ಥರು ಉಪಸ್ಥಿತರಿರುವರು.

ನಾಟಕಕಾರ, ಚಿತ್ರಸಾಹಿತಿ ಹಾಗೂ ನ್ಯಾಯವಾದಿ ಶಶಿರಾಜ್ ರಾವ್ ಕಾವೂರು, ಕರ್ಣಾಟಕ ಬ್ಯಾಂಕಿನ ಸಹಾಯಕ ಮಹಾಪ್ರಬಂಧಕ ಬಿ.ಗೋಪಾಲಕೃಷ್ಣ ಸಾಮಗ ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಮುಖ್ಯ ಅತಿಥಿಗಳಾಗಿರುವರು.

ಇದೇ ಸಂದರ್ಭದಲ್ಲಿ ಈ ವರ್ಷದ ಭರತ ಪ್ರಶಸ್ತಿಯನ್ನು ಮೂವರು ಕಲಾವಿದರಾದ ಬೆಂಗಳೂರು ಶಾರದಾ ನೃತ್ಯಾಲಯದ ನೃತ್ಯಗುರು ವಿದುಷಿ ಇಂದು ನಾಡಿಗ್, ಪುತ್ತೂರು ವಿಶ್ವ ಕಲಾ ನಿಕೇತನದ ವಿದುಷಿ ನಯನಾ ವಿ.ರೈ ಹಾಗೂ ಯಕ್ಷಗಾನ ಭಾಗವತರಾದ ವಿದುಷಿ ಲೀಲಾವತಿ ಬೈಪಾಡಿತ್ತಾಯರಿಗೆ ನೀಡಿ ಗೌರವಿಸಲಾಗುವುದು ಎಂದರು.

ಅಲ್ಲದೇ ಕಲಾರ್ಪಣಾ ಪ್ರಶಸ್ತಿಯನ್ನು ಉಡುಪಿಯ ನಾಗರಾಜ್ ಉಪಾಧ್ಯಾಯರಿಗೆ, ಗುರು ರಾಧಾಕೃಷ್ಣಾನುಗ್ರಹ ಪ್ರಶಸ್ತಿಯನ್ನು ಪ್ರತೀಕ್ಷಾ ಯು, ಮಯೂರಿ ಶಶಿರಾಜ್ ಹಾಗೂ ರಾಧಿಕಾರಿಗೆ ನೀಡಿ ಗೌರವಿಸಲಾಗುವುದು ಎಂದು ವೀಣಾ ಸಾಮಗ ವಿವರಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಉಡುಪಿಯ ಪವನ್‌ರಾಜ್ ಸಾಮಗರಿಂದ ವೇಣುವಾದನ, 11:00ರಿಂದ ಸಂಸ್ಥೆಯ ವಿದ್ಯಾರ್ಥಿ ಗಳಿಂದ ಭರತನಾಟ್ಯ ಹಾಗೂ ಕಥಕ್ ಕಾರ್ಯಕ್ರಮ, ರಾತ್ರಿ 7 ಕ್ಕೆ ಸಂಸ್ಥೆಯ ಹಿರಿಯ ವಿದ್ಯಾರ್ಥಿ ಗಳಿಂದ ವಿಶೇಷ ಭರತನಾಟ್ಯ ದೀಪಾವಳಿ ನೃತ್ಯರೂಪಕ ಪ್ರಸ್ತುತಗೊಳ್ಳಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಸಂಚಾಲಕ ಬಿ.ಮುರಳೀಧರ ಸಾಮಗ, ಸಂಸ್ಥೆಯ ಕಾರ್ಯದರ್ಶಿ ಬಿ.ಎಂ.ಪ್ರಥ್ವಿರಾಜ್ ಸಾಮಗ, ಸಂಸ್ಥೆಯ ಕಲಾವಿದರಾದ ಗಾಯತ್ರಿ ಅಭಿಷೇಕ್, ಕಲ್ಯಾಣಿ ಪೂಜಾರಿ, ದಿಶಾ ಉಪಸ್ಥಿತ ರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News