ಸಂವಿಧಾನ ಸಂರಕ್ಷಣೆಗಾಗಿ ಜಿಲ್ಲಾ ಕೇಂದ್ರಗಳಲ್ಲಿ ಜನಜಾಗೃತಿ ಕಾರ್ಯಕ್ರಮ

Update: 2019-11-22 16:40 GMT

ಉಡುಪಿ, ನ.22: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ವತಿಯಿಂದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ರ ಮಹಾಪರಿನಿರ್ವಾಣದ ಅಂಗವಾಗಿ ಮುಂದಿನ ಡಿ.6ರಿಂದ ಎಪ್ರಿಲ್ 14ರವರೆಗೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ‘ಸಂವಿಧಾನ ಸಂರಕ್ಷಣೆ’ ಜನಜಾಗೃತಿಯನ್ನು ಹಮ್ಮಿಕೊಳ್ಳಲಾ ಗುವುದು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ರಾಜ್ಯ ಸಮಿತಿಯ ರಾಜ್ಯ ಸಂಚಾಲಕ ಲಕ್ಷ್ಮೀನಾರಾಯಣ ನಾಗವಾರ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನ, ಜಾತ್ಯತೀತತೆ, ಪ್ರಜಾಪ್ರಭುತ್ವ ವ್ಯವಸ್ಥೆ ವಿರುದ್ಧ ದೇಶದಲ್ಲಿ ದೊಡ್ಡ ಪಿತೂರಿ ನಡೆಯುತ್ತಿದೆ. ಬಹುಸಂಸ್ಕೃತಿಯ ವಿರೋಧಿ ಸಂಘಪರಿವಾರ ಹಾಗೂ ಬಿಜೆಪಿ ಪಕ್ಷ ಕಾರ್ಪೋರೇಟ್ ಜಗತ್ತಿನ ಹಿತಕಾಯುವ ಕೆಲಸ ಮಾಡುತ್ತಿವೆ. ಜಾತಿವಾದ, ಕೋಮುವಾದವನ್ನು ಬೆಳೆಸುತ್ತಾ ಅಸ್ಪಶ್ಯರನ್ನು ಕೀಳಾಗಿ ಕಾಣುವ ತಮ್ಮ ಪ್ರವೃತ್ತಿಯನ್ನು ಮುಂದುವರಿಸಿವೆ ಎಂದವರು ಆರೋಪಿಸಿದರು.

ಕಾಂಗ್ರೆಸ್ ವಿರುದ್ಧ ದ್ವೇಷದ ಭಾಷಣಗಳನ್ನು ಮಾಡುತ್ತಾ, ಸುಳ್ಳುಗಳನ್ನೇ ಬಂಡವಾಳ ಮಾಡಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಕಳೆದ ಆರು ವರ್ಷಗಳಲ್ಲಿ ತಾನು ಕೊಟ್ಟ ಆಶ್ವಾಸನೆಗಳಲ್ಲಿ ಯಾವುದನ್ನೂ ಈಡೇರಿಸಿಲ್ಲ. ಬದಲು ಕೇಂದ್ರ ಸರಕಾರದ ಉದ್ದಿಮೆಗಳನ್ನು ಖಾಸಗೀಕರಣಗೊಳಿಸುತ್ತಾ ದಿನ ದಿನ ಒಂದೊಂದಾಗಿ ಮಾರಾಟ ಮಾಡುತ್ತಾ ಬರುತಿದ್ದಾರೆ ಎಂದರು.

 ದೇಶಪ್ರೇಮದ ಹೆಸರಿನಲ್ಲಿ ಅಭಿವ್ಯಕ್ತಿ ಸ್ವಾತಂತ್ರದ ಮೇಲೆ ದಾಳಿ ನಡೆಸಲಾಗು ತ್ತಿದೆ. ಸಾಹಿತಿಗಳು, ವಿಚಾರವಾದಿಗಳು, ಲೇಖಕರು ಸೇರಿದಂತೆ ಯಾರಿಗೂ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಅಭಿವ್ಯಕ್ತಿಸಲು ಸಾಧ್ಯವಿಲ್ಲದ ವಾತಾವರಣವನ್ನು ಸಂಘ ಪರಿವಾರ ನಿರ್ಮಾಣ ಮಾಡಿದೆ. ಇದರ ವಿರುದ್ಧ ಪ್ರಗತಿಪರರು, ವಿಚಾರವಂತರು, ಅಹಿಂದ ವರ್ಗಗಳು ಒಂದಾಗುವ ಮೂಲಕ ‘ಸಂವಿಧಾನದ ಸಂರಕ್ಷಣೆ’ ನಮ್ಮೆಲ್ಲರ ಹೊಣೆಯಾಗಿದೆ ಎಂದು ನಾಗವಾರ ಹೇಳಿದರು.

ಎಲ್ಲವೂ ಖಾಸಗೀಕರಣಗೊಳ್ಳುತ್ತಿರುವ ಇಂದಿನ ಸಂದರ್ಭದಲ್ಲಿ ಮೀಸಲಾತಿ ಸರಕಾರ ವಲಯದಲ್ಲಿ ಕಾಣೆಯಾಗುತ್ತಿದೆ. ಆದುದರಿಂದಲೇ ನಾವು ‘ಖಾಸಗಿ ವಲಯದಲ್ಲೂ ಮೀಸಲಾತಿ ಬೇಕು ಹಾಗೂ ಜನಸಂಖ್ಯೆಗನುಗುಣವಾಗಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸುತ್ತೇವೆ ಎಂದರು.

ಈಗ ಪರಿಶಿಷ್ಟ ಜಾತಿಗೆ ಶೇ.15, ಪರಿಶಿಷ್ಟ ಪಂಗಡಕ್ಕೆ ಶೇ.3ರಷ್ಟು ಮೀಸಲಾತಿ ಇದ್ದು, ಇದನ್ನು ಪ.ಜಾತಿಗೆ ಶೇ.18 ಹಾಗೂ ಪ.ಪಂಗಡಕ್ಕೆ ಶೇ.7ಕ್ಕೆ ಹೆಚ್ಚಿಸಬೇಕು. ಇದಕ್ಕಾಗಿ ಹಾಗೂ ಸಂವಿಧಾನ ಸಂರಕ್ಷಣೆಗಾಗಿ ಒತ್ತಾಯಿಸಿ ಜನಜಾಗೃತಿ ಕಾರ್ಯಕ್ರಮ ವನ್ನು ಡಿ.6ರಿಂದ ಎ.14ರವರೆಗೆ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಹಮ್ಮಿಕೊಳ್ಳುತ್ತೇವೆ ಎಂದವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ದಸಸಂ ಜಿಲ್ಲಾ ಪ್ರಧಾನ ಸಂಚಾಲಕ ಟಿ.ಮಂಜುನಾಥ ಗಿಳಿಯಾರು, ಜಿಲ್ಲಾ ಸಂಘಟನಾ ಸಂಚಾಲಕ ವಾಸುದೇವ ಮುದೂರು, ಕೆ.ಸಿ.ರಾಜು ಬೆಟ್ಟಿನಮನೆ, ಸಂಪತ್ ಗುಜ್ಜರಬೆಟ್ಟು, ರಾಜಶೇಖರ ಗುಳ್ಳಾಡಿ, ರವೀಂದ್ರ ಸುಣ್ಣಾರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News