ಮದ್ಯ ಸೇವಿಸಿ ವಾಹನ ಚಾಲನೆ : ಪರಾರಿಯಾಗುತ್ತಿದ್ದ ಚಾಲಕನನ್ನು ಬಂಧಿಸಿದ ಪೊಲೀಸರು

Update: 2019-11-22 17:15 GMT

 ಮಂಗಳೂರು, ನ. 22: ಉಳ್ಳಾಲ ಸೇತುವೆ ಬಳಿ ವಾಹನ ತಪಾಸಣೆ ವೇಳೆ ಕುಡಿದ ಮತ್ತಿನಲ್ಲಿದ್ದ ಕಂಟೈನರ್ ಚಾಲಕನೊಬ್ಬ ವಾಹನದೊಂದಿಗೆ ಪರಾರಿಯಾಗಿದ್ದು, ಆತನನ್ನು ಪೊಲೀಸರು ಬೈಕಂಪಾಡಿ ಮೀನಕಳಿಯ ಸಮೀಪ ವಶಕ್ಕೆ ಪಡೆದ ಘಟನೆ ಬುಧವಾರ ತಡರಾತ್ರಿ ನಡೆದಿದೆ.

ನಾಗಲ್ಯಾಂಡ್ ನೋಂದಣಿಯ ಕಂಟೈನರ್‌ವೊಂದು ಬುಧವಾರ ರಾತ್ರಿ 1ಗಂಟೆಗೆ ಉಳ್ಳಾಲ ಸೇತುವೆ ಮೂಲಕ ಮಂಗಳೂರಿನತ್ತ ಆಗಮಿಸುತ್ತಿತ್ತು. ಇದನ್ನು ನೋಡಿದ ಮಂಗಳೂರು ಪೊಲೀಸರು ಲಾರಿಯನ್ನು ನಿಲ್ಲಿಸಲು ಸೂಚನೆ ನೀಡಿದ್ದು, ಅದನ್ನು ಗಣನೆಗೆ ತೆಗೆದುಕೊಳ್ಳದ ಚಾಲಕ ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸಿಕೊಂಡೇ ಮುಂದುವರಿದಿದ್ದಾನೆ.

ಇದರಿಂದ ಪೊಲೀಸರು ಅನುಮಾನಗೊಂಡು ಆ ಕಂಟೈನರ್‌ನ್ನು ಬೆನ್ನತ್ತಿದ್ದಾರೆ. ಚಾಲಕ ವೇಗವಾಗಿ ಪಂಪ್‌ವೆಲ್‌ನಿಂದ ಕೆಪಿಟಿ ಕಡೆಗೆ ವಾಹನ ಯದ್ವಾತದ್ವಾ ಓಡಿಸಿದ್ದಾನೆ. ಈ ಸಂದರ್ಭ ಕೇರಳ ನೋಂದಣಿಯ ಕಾರು ಹಾಗೂ ರಸ್ತೆಯಲ್ಲಿದ್ದ ಡಿವೈಡರ್‌ಗೂ ಕಂಟೈನರ್ ಢಿಕ್ಕಿಯಾಗಿ ಮುಂದುವರಿದಿತ್ತು.

ಕಂಟೈನರ್ ಚಾಲಕನ ನಿರ್ಲಕ್ಷದ ಚಾಲನೆ ನೋಡಿದ ಪೊಲೀಸರು ಕೂಡಲೇ ಕಂಟ್ರೋಲ್ ರೂಂಗೆ ಮಾಹಿತಿ ರವಾನಿಸಿದ್ದಾರೆ. ಮಾಹಿತಿ ಪಡೆದ ಪಣಂಬೂರು ಪೊಲೀಸರು ಬೈಕಂಪಾಡಿಯಲ್ಲಿ ಕಂಟೈನರ್‌ನ್ನು ಅಡ್ಡಗಟ್ಟಲು ತಯಾರಿ ನಡೆಸಿದ್ದರು. ಬೈಕಂಪಾಡಿ ಮೀನಕಳಿಯದಲ್ಲಿ ವಾಹನವನ್ನು ನಿಲ್ಲಿಸಿದ ಚಾಲಕ ಪೊಲೀಸರಿಗೆ ಹೆದರಿ ಸೇತುವೆ ಕೆಳಗೆ ಜಿಗಿದು ಚರಂಡಿ ನೀರಿನಲ್ಲಿ ಅವಿತು ಕುಳಿತಿದ್ದಾನೆ. ಪೊಲೀಸರು ಕೂಡಲೇ ಅತ್ತ ತೆರಳಿ ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಲಾರಿಯನ್ನು ಪರಿಶೀಲನೆ ನಡೆಸಿದಾಗ ಯಾವುದೇ ಸೊತ್ತು ಪತ್ತೆಯಾಗಿಲ್ಲ.

ಮಂಗಳೂರು ನಗರ ಪೂರ್ವ (ಕದ್ರಿ) ಸಂಚಾರ ಪೊಲೀಸರು ಆತನ ವಿರುದ್ಧ ಪಾನಮತ್ತನಾಗಿ ವಾಹನ ಚಲಾಯಿಸಿದ ಕೇಸು ದಾಖಲಿಸಿ, ದಂಡ ವಸೂಲಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News