ಯುನಿವೆಫ್ ಕರ್ನಾಟಕದಿಂದ ಪ್ರವಾದಿ ಸಂದೇಶ ಪ್ರಚಾರ ಅಭಿಯಾನಕ್ಕೆ ಚಾಲನೆ

Update: 2019-11-22 17:25 GMT

ಮಂಗಳೂರು, ನ. 22: ಯುನಿವರ್ಸಲ್ ವೆಲ್ಫೇರ್ ಫೋರಮ್ ಕರ್ನಾಟಕ (ಯುನಿವೆಫ್) ವತಿಯಿಂದ ಮುಂದಿನ ಜ.24ರವರೆಗೆ ನಡೆಯುವ ‘ಅರಿಯಿರಿ ಮನುಕುಲದ ಪ್ರವಾದಿಯನ್ನು’ ಎಂಬ ಪ್ರವಾದಿ ಸಂದೇಶ ಪ್ರಚಾರ ಅಭಿಯಾನಕ್ಕೆ ನಗರದ ಕಂಕನಾಡಿಯ ಜಮೀಯ್ಯತುಲ್ ಫಲಾಹ್ ಸಭಾಂಗಣದಲ್ಲಿ ಶುಕ್ರವಾರ ಸಂಜೆ ಯುನಿವೆಫ್ ಕರ್ನಾಟಕ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಚಾಲನೆ ನೀಡಿದರು.

ಬಳಿಕ ಕಾರ್ಯಕ್ರಮದಲ್ಲಿ ‘ಮಾನವ ಸಂಬಂಧಗಳು ಮತ್ತು ಪ್ರವಾದಿ’ ವಿಷಯದಲ್ಲಿ ವಿಚಾರ ಮಂಡಿಸಿದ ರಫೀಉದ್ದೀನ್ ಕುದ್ರೋಳಿ, ನಮ್ಮ ಬದುಕನ್ನು ಪ್ರವಾದಿಯ ಪಥದಲ್ಲಿ ಸಾಗಿಸಿದರೆ ಮಾತ್ರ ಪರಲೋಕದಲ್ಲಿ ಮೋಕ್ಷ ಸಿಗುತ್ತದೆ. ಇಂದಿನ ವರ್ತಮಾನದಲ್ಲಿ ಪ್ರವಾದಿಯನ್ನು ನಿಂದಿಸುವವರಿಗೆ ಅವರ ಜೀವನ ಸಂದೇಶವನ್ನು ತಿಳಿಸಬೇಕಾಗಿದೆ. ಪ್ರವಾದಿಯ ಸಂದೇಶದ ವಾಸ್ತವಿಕತೆಯನ್ನು ಅಂಥವರ ಮುಂದೆ ಅನಾವರಣಗೊಳಿಸಿದಾಗ ಎಲ್ಲ ಮಿಥ್ಯಗಳೂ ಬಹಿರಂಗಗೊಳ್ಳುತ್ತವೆ ಎಂದು ಹೇಳಿದರು.

ಯುನಿವೆಫ್ ಕರ್ನಾಟಕ ಕಳೆದ 13 ವರ್ಷಗಳಿಂದ ಈ ವಾಸ್ತವಿಕತೆಯನ್ನು ಅರ್ಥೈಸಿಕೊಂಡು ಜನರಿಗೆ ಪ್ರವಾದಿಯ ಸಂದೇಶವನ್ನು ತಲುಪಿಸುತ್ತಿದೆ. ಜತೆಗೆ ಸೌಹಾರ್ದತೆಯ ನಾಡನ್ನು ಕಟ್ಟಲು ಪ್ರಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ಜನರು ಸಹಕರಿಸಬೇಕು ಎಂದರು.
ಮುಸ್ಲಿಮರು ಪ್ರವಾದಿಯನ್ನು ನಂಬುವುದು ಮಾತ್ರವಲ್ಲ, ಅವರ ಬೋಧನೆಗಳನ್ನು ಅನುಷ್ಠಾನಗೊಳಿಸಬೇಕು. ಆಗ ಮಾತ್ರ ನಾವು ನೈಜ ಪ್ರವಾದಿಯ ಅನುಯಾಯಿಗಳಾಗುತ್ತೇವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಯುನಿವೆಫ್ ಕರ್ನಾಟಕ ಶಿಕ್ಷಣ ಘಟಕದ ಸಂಚಾಲಕ ಯು.ಕೆ.ಖಾಲಿದ್, ಉಪ ಸಂಚಾಲಕ ಸೈಯದ್ ಅಹ್ಮದ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಉಮರ್ ಮುಕ್ತಾರ್ ಕಿರಾಅತ್ ಪಠಿಸಿದರು. ಹುದೈಫ್ ಕುದ್ರೋಳಿ ಪ್ರಾಸ್ತಾವಿಕವಾಗಿ ಮಾತನಾಡಿ, ಅತಿಥಿಗಳನ್ನು ಸ್ವಾಗತಿಸಿದರು. ಯುನಿವೆಫ್ ಕಾರ್ಯದರ್ಶಿ ಅರ್ಶಲನ್ ಕುದ್ರೋಳಿ ಕಾರ್ಯಕ್ರಮ ನಿರೂಪಿಸಿದರು. ಸಿರಾಜುದ್ದೀನ್ ವಂದಿಸಿದರು.

ಪ್ರಶಸ್ತಿ ಪ್ರದಾನ

2019ನೇ ಸಾಲಿನಲ್ಲಿ ಎಸೆಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ಬಡ ವಿದ್ಯಾರ್ಥಿಗಳಿಗೆ ವೌಲಾನಾ ಅಬುಲ್ ಕಲಾಮ್ ಆಝಾದ್ ಮತ್ತು ಸರ್ ಅಲ್ಲಮಾ ಇಕ್ಬಾಲ್ ಹೆಸರಲ್ಲಿ ಉದ್ಯಮಿ ಎಸ್.ಎನ್.ಹಮೀದ್, ಯೆನ್ ಮಾರ್ಕ್ ಬಿಲ್ಡರ್ ನೂರುಲ್ ಪ್ರಶಸ್ತಿ-ಪುರಸ್ಕಾರ ವಿತರಿಸಿದರು.

ಎಸೆಸೆಲ್ಸಿ ವಿಭಾಗದಲ್ಲಿ ಮೆಲ್ಕಾರ್ ಶಾಲೆಯ ವಿದ್ಯಾರ್ಥಿನಿ ಫಾತಿಮಾ ಸುಹಾನಾ ಬಂಟ್ವಾಳ ಹಾಗೂ ಎಸ್‌ಡಿಎಂ ಉಜಿರೆ ಶಾಲೆಯ ಸೈಯದ್ ಆರಿಫ್ ಅವರಿಗೆ ವೌಲಾನಾ ಅಬುಲ್ ಕಲಾಮ್ ಆಝಾದ್ ಪ್ರಶಸ್ತಿ ಹಾಗೂ ನಗದು ಪುರಸ್ಕಾರ ನೀಡಲಾಯಿತು.

ಪಿಯುಸಿ ವಿಭಾಗದಲ್ಲಿ ಸಂತ ಅಲೋಶಿಯಸ್ ಕಾಲೇಜಿನ ಅಬ್ದುಲ್ ನೂಮಾನ್ ಹಾಗೂ ಮೆಲ್ಕಾರ್ ಕಾಲೇಜಿನ ರಾಬಿಯತುಲ್ ಅದಬಿಯ ಅವರಿಗೆ ಸರ್ ಅಲ್ಲಮಾ ಇಕ್ಬಾಲ್ ಪ್ರಶಸ್ತಿ ಮತ್ತು ನಗದು ಪುರಸ್ಕಾರ ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News