×
Ad

ಕಾಲೇಜು ಪ್ರವೇಶ ಹಂತದಲ್ಲೇ ಡ್ರಗ್ಸ್ ತಪಾಸಣೆ ಕಾನೂನಿಗೆ ಒತ್ತಾಯ

Update: 2019-11-23 15:34 IST

ಮಂಗಳೂರು, ನ. 23: ಯುವ ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಮಾದಕ ವಸ್ತುಗಳ ಸೇವೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳ ಪ್ರವೇಶ ಹಂತದಲ್ಲಿಯೇ ಡ್ರಗ್ಸ್ ತಪಾಸಣೆಗೆ ಸಂಬಂಧಿಸಿ ಕಾನೂನು ನಿಯಮ ರೂಪಿಸಬೇಕೆಂದು ಸರ್ವ ಕಾಲೇಜು ವಿದ್ಯಾರ್ಥಿ ಸಂಘ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಸಂಘದ ರಾಜ್ಯ ಕಾನೂನು ಸಲಹೆಗಾರ ದಿನಕರ ಶೆಟ್ಟಿ, ಕಳೆದ ಐದು ವರ್ಷಗಳಿಂದ ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿ ಡ್ರಗ್ಸ್ ಸೇವಿಸಲು ಪ್ರೇರೇಪಿಸುತ್ತಿರುವ ಜಾಲ ವ್ಯಾಪಕವಾಗುತ್ತಿದೆ. 8ನೆ ತರಗತಿಯಿಂದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಈ ಜಾಲಕ್ಕೆ ಬಲಿಪಶುಗಳಾಗುತ್ತಿದ್ದಾರೆ. ಆದ್ದರಿಂದ ಶಾಲಾ ಕಾಲೇಜಿಗೆ ಪ್ರವೇಶ ಮಾಡುವ ಸಂದರ್ಭದಲ್ಲಿ ಕಡ್ಡಾಯವಾಗಿ ಮೆಡಿಕಲ್ ಪರೀಕ್ಷೆ ಮಾಡುವ ಬಗ್ಗೆ ಕಾನೂನು ರೂಪಿಸುವ ಅಗತ್ಯವಿದೆ ಎಂದವರು ಹೇಳಿದರು.

ವಿದ್ಯಾರ್ಥಿಗಳಲ್ಲಿ ಡ್ರಗ್ಸ್ ಹಾವಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ವ ಕಾಲೇಜು ವಿದ್ಯಾರ್ಥಿ ಸಂಘವು ಡ್ರಗ್ಸ್ ಮುಕ್ತ ಕ್ಯಾಂಪಸ್ ಆಂದೋಲನಕ್ಕೆ ಚಾಲನೆ ನೀಡಿದ್ದು, ಎಲ್ಲಾ ಕಾಲೇಜುಗಳಲ್ಲಿ ಡ್ರಗ್ಸ್ ವಿರುದ್ಧ ಜಾಗೃತಿ ಮಾಹಿತಿ ಕಾರ್ಯಾಗಾರ ನಡೆಸಲು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.

ಡ್ರಗ್ಸ್‌ಗೆ ಬಲಿಪಶುಗಳಾಗಿರುವ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಡಿಬಾರ್ ಮಾಡುವ ಕ್ರಮಕ್ಕೆ ಮುಂದಾಗುವ ಬದಲು ಪ್ರತಿ ಕಾಲೇಜಿನಲ್ಲಿ ಕೌನ್ಸಿಲಿಂಗ್ ಕೇಂದ್ರಗಳನ್ನು ತೆರೆದು ಮನಪರಿವರ್ತನೆಗೆ ಮುಂದಾಗಬೇಕು. ಡ್ರಗ್ಸ್ ಜಾಲ ಪ್ರಮುಖ ಮಾರಾಟಗಾರರ ಮೇಲೆ ಗೂಂಡಾ ಕಾಯ್ದೆ ಹಾಕಿ ಕಠಿಣ ಕ್ರಮ ಜರುಗಿಸಬೇಕು ಎಂದು ಅವರು ಈ ಸಂದರ್ಭ ಆಗ್ರಹಿಸಿದರು.

ಗೋಷ್ಠಿಯಲ್ಲಿ ಸಂಘದ ದ.ಕ. ಜಿಲ್ಲಾಧ್ಯಕ್ಷ ತುಷಾರ್ ಕದ್ರಿ, ವಿದ್ಯಾರ್ಥಿ ನಾಯಕರಾದ ಭವಿಷ್ ಶೆಟ್ಟಿ, ಇಬ್ರಾಹಿಂ ಬಾತಿಷ್, ವಿಕಾಸ್ ಬಂಗೇರ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News