ಮತದಾರರ ಬೇಡಿಕೆ ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿ: ಶಾಸಕ ಡಾ.ಭರತ್ ಶೆಟ್ಟಿ
ಮಂಗಳೂರು, ನ.23: ಬಿಜೆಪಿ ಸದಸ್ಯರು ಪ್ರಾಮಾಣಿಕವಾಗಿ ಜನರ ಸೇವೆ ಮಾಡಲು ಮುಂದಾಗಬೇಕು. ಭ್ರಷ್ಟಾಚಾರ ಮುಕ್ತ ಆಡಳಿತ ಬಿಜೆಪಿಯ ಗುರಿಯಾಗಿದೆ. ಮಂಗಳೂರಿನ ಸಮಗ್ರ ಅಭಿವೃದ್ಧಿಗೆ ಮತದಾರರು ನಮಗೆ ಮತ ನೀಡಿದ್ದಾರೆ. ಅವರ ನಿರೀಕ್ಷೆಗಳನ್ನು ಆದ್ಯತೆಯ ಮೇರೆಗೆ ನೆರವೇರಿಸಿಕೊಂಡು ಹೋಗಬೇಕು ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ. ಹೇಳಿದರು.
ಬಿಜೆಪಿ ಉತ್ತರ ಕ್ಷೇತ್ರದಲ್ಲಿ ಮನಪಾ ಚುನಾವಣೆಯಲ್ಲಿ ಅಭೂತಪೂರ್ವ ಜಯಸಾಧಿಸಿದ ಮೇರೆಗೆ ಕೋಡಿಕಲ್‌ನಲ್ಲಿ ಶುಕ್ರವಾರ ಬಿಜೆಪಿ ಕಾರ್ಯಕರ್ತರು ಆಯೋಜಿಸಿದ್ದ ಸನ್ಮಾನ ಕಾರ್ಯ್ರಮದಲ್ಲಿ ಅವರು ಮಾತನಾಡಿದರು.
ಕೇಂದ್ರ ,ರಾಜ್ಯ ಇದೀಗ ಪಾಲಿಕೆಯಲ್ಲೂ ನಮ್ಮದೇ ಆಡಳಿತ ಬಂದಿದೆ. ಸಬೂಬು ನೀಡಿ ತಪ್ಪಿಸಲು ಅಸಾಧ್ಯ. ಕೆಲಸ ಮಾಡಿ ಜನರ ಮನಗೆಲ್ಲುವುದೊಂದೇ ಆಯ್ಕೆ ಎಂದು ಅವರು ಹೇಳಿದರು.
ಇನ್ನೇನಿದ್ದರೂ ಬಿಜೆಪಿ ಆಡಳಿತದಲ್ಲಿ ಅಭಿವೃದ್ಧಿಯ ಮಂತ್ರ ವಾಗಲಿದೆ. ಸ್ಮಾರ್ಟ್ ಸಿಟಿ ಯೋಜನೆ, ಸ್ವಚ್ಛ-ಸುಂದರ ಮಂಗಳೂರು ನಿರ್ಮಾಣ ಬಿಜೆಪಿಯ ಗುರಿ. ಪ್ರಥಮವಾಗಿ ಆಗಬೇಕಾದ ಕೆಲಸಗಳ ಪಟ್ಟಿಮಾಡಿ ಬರೆದಿಟ್ಟುಕೊಳ್ಳಿ. ಆದರೆ ಮಹಾನಗರಪಾಲಿಕೆಯಲ್ಲಿ ಸಿಗುವ ಪ್ರತಿಯೊಂದು ಸೌಲಭ್ಯ, ಅನುದಾನದ ಬಗ್ಗೆ ನೀವೇ ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡು ಕೆಲಸ ಮಾಡುವುದನ್ನು ಕಲಿತುಕೊಳ್ಳಿ ಎಂದು ಕಿವಿಮಾತು ಹೇಳಿದರು.
ಮತದಾರರು ಕಾಂಗ್ರೆಸ್ ದುರಾಡಳಿತದ ವಿರುದ್ಧ ತೀರ್ಪು ನೀಡಿದ್ದರಿಂದ ಮತದಾರರು ಕಾರಣರಾಗಿದ್ದಾರೆ. ಹೊರತಾಗಿ ಮಾಜಿ ಶಾಸಕ ಮೊಯ್ದಿನ್ ಬಾವ ಏಕವ್ಯಕ್ತಿ ಕಾರಣ ಎಂಬುದು ಬಿಜೆಪಿ ಒಪ್ಪಿಕೊಳ್ಳುವುದಿಲ್ಲ. ಬಿಜೆಪಿ ಪಕ್ಷವು ಕಾಂಗ್ರೆಸ್ಸನ್ನು ಸೋಲಿಸಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ದೇರೆಬೈಲ್ ಪೂರ್ವ ವಾರ್ಡಿನ ಮನೋಜ್ ಕುಮಾರ್, ಬಂಗ್ರಕೂಳೂರು 16ನೇ ವಾರ್ಡಿನ ಕಿರಣ್ ಕುಮಾರ್, ಸೇರಿದಂತೆ ಇತರ ಬಿಜೆಪಿ ಸದಸ್ಯರನ್ನು, ಬಿಜೆಪಿಯ ಗೆಲುವಿಗೆ ದುಡಿದ ವಾರ್ಡ್ ಅಧ್ಯಕ್ಷರು ಪದಾಧಿಕಾರಿಗಳನ್ನು, ಮಂಗಳೂರು ಉತ್ತರ ಬಿಜೆಪಿ ಮಂಡಲದ ಪದಾಧಿಕಾರಿಗಳನ್ನು, ಹಿರಿಯ ಬಿಜೆಪಿ ಮುತ್ಸದ್ದಿಗಳನ್ನು ಸಮಾರಂಭದಲ್ಲಿ ಗೌರವಿಸಲಾಯಿತು.