×
Ad

'ರಾಜಕೀಯ ದಾಳಿಯಿಂದ ಕಾರ್ಟೂನಿಸ್ಟ್‌ಗಳಿಗೆ ಇನ್ನಷ್ಟು ಪ್ರಚಾರ'

Update: 2019-11-23 19:37 IST

ಕುಂದಾಪುರ, ನ.23: ರಾಜಕೀಯ ಹಾಗೂ ರಾಜಕಾರಣೆಗಳನ್ನು ಟೀಕಿಸಿ ವ್ಯಂಗ್ಯಚಿತ್ರ ರಚಿಸಿದ ವ್ಯಂಗ್ಯಚಿತ್ರಕಾರರ ಮೇಲೆ ದಾಳಿಗಳು ನಡೆಯುತ್ತಲೇ ಇವೆ. ಆದರೆ ವ್ಯಂಗ್ಯಚಿತ್ರಕಾರರು ತಮ್ಮ ವೃತ್ತಿಯನ್ನು ಮುಂದಕ್ಕೆ ಕೊಂಡೊಯ್ಯ ಬೇಕು. ಟೀಕೆಗಳಿಗೆ ಯಾರು ಕೂಡ ಹೆದರಬಾರದು. ಇಂತಹ ದಾಳಿಗಳಿಂದ ವ್ಯಂಗ್ಯಚಿತ್ರಕಾರರಿಗೆ ಇನ್ನಷ್ಟು ಪ್ರಚಾರ ದೊರೆಯಲು ಸಾಧ್ಯ ಎಂದು ಸಿನೆಮಾ ನಿರ್ದೇಶಕ ಹಾಗೂ ನಟ ರಿಷಬ್ ಶೆಟ್ಟಿ ಹೇಳಿದ್ದಾರೆ.

ಕುಂದಾಪುರ ಕಾರ್ಟೂನ್ ಬಳಗದ ಆಶ್ರಯದಲ್ಲಿ ಮಹಾತ್ಮ ಗಾಂಧೀಜಿ ಅವರ 150ನೆ ಜನ್ಮದಿನಾಚರಣೆಯ ಪ್ರಯುಕ್ತ ‘ಈಶ್ವರ ಅಲ್ಲಾ ತೇರೋ ನಾಮ್’ ಧ್ಯೇಯದೊಂದಿಗೆ ಕುಂದಾಪುರ ಪದವಿ ಪೂರ್ವ ಕಾಲೇಜಿನ ರೋಟರಿ ಲಕ್ಷ್ಮೀ ನರಸಿಂಹ ಕಲಾ ಮಂದಿರದಲ್ಲಿ ಹಮ್ಮಿಕೊಳ್ಳಲಾದ ನಾಲ್ಕು ದಿನಗಳ ಕಾರ್ಟೂನ್ ಹಬ್ಬವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಸಿನೆಮಾ ಕತೆ ಬರೆಯುವಾಗ ನಮ್ಮ ಜೀವನದಲ್ಲಿ ಎದುರಾಗುವ ಪಾತ್ರಗಳನ್ನೇ ಕತೆಯಾಗಿ ತೆಗೆದುಕೊಳ್ಳಬೇಕು. ನಮ್ಮ ಕಲೆ, ಸಂಸ್ಕೃತಿ, ನಾಡು-ನುಡಿಯೊಂದಿಗೆ ಕತೆ ಬರೆದಾಗ ಮಾತ್ರ ಅದು ಗಟ್ಟಿಯಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ. ನಮ್ಮ ಪರಿಸರದಲ್ಲಿರುವ ವಿಚಾರಗಳನ್ನು ಹೆಚ್ಚು ಗಮನಿಸಬೇಕು ಮತ್ತು ಎಲ್ಲಿಯೂ ಕೂಡ ನಮ್ಮತನವನ್ನು ಬಿಟ್ಟುಕೊಡದೆ ಉಳಿಸಿಕೊಳ್ಳುವ ಮನೋಭಾವ ಬೆಳೆಸಿ ಕೊಳ್ಳಬೇಕು ಎಂದರು.

ಇಂದಿಗೂ ನಾವು ಬ್ರಿಟಿಷ್ ಶಿಕ್ಷಣ ಪದ್ದತಿಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ. ಆದರೆ ನಮ್ಮ ಗುರುಕುಲ ಮಾದರಿ ಶಿಕ್ಷಣ ವ್ಯವಸ್ಥೆ ಯಲ್ಲಿ ಮಕ್ಕಳು ಜೀವನ ಏನು ಎಂಬುದನ್ನು ಕಲಿಯುತ್ತಿದ್ದರು. ಇಂದು ಅದನ್ನು ನಾವು ಕಳೆದುಕೊಂಡಿದ್ದೇವೆ. ಆದುದರಿಂದ ಮತ್ತೆ ಗುರುಕುಲ ಪದ್ಧತಿಯತ್ತ ಹೋದರೆ ನಮ್ಮತನವನ್ನು ಉಳಿಸಿಕೊಳ್ಳಬಹುಾಗಿದೆ ಎಂದವರು ಅಭಿಪ್ರಾಯ ಪಟ್ಟರು.

‘ಈಶ್ವರ ಅಲ್ಲಾ ತೇರೋ ನಾಮ್’ ವಿಷಯದ ಕುರಿತು ದಿಕ್ಸೂಚಿ ಭಾಷಣ ಮಾಡಿದ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ, ಸಮಾಜದಲ್ಲಿ ಭಾವನಾತ್ಮಕ ಸಂಬಂಧ ದೂರವಾಗಿ ಸಾಮರಸ್ಯಕ್ಕೆ ಧಕ್ಕೆಯಾಗುತ್ತಿದೆ. ಗಾಂಧಿಜೀ ಅವರನ್ನು ಕೇವಲ ಐಕಾನ್ ಆಗಿ ಬಳಸುತ್ತಿದ್ದೇವೆ ಹೊರತು ಅವರ ಆದರ್ಶ ಗಳನ್ನು ಪಾಲಿಸುತ್ತಿಲ್ಲ ಎಂದರು.

ಕೋಮು ಸಾಮರಸ್ಯ, ಅಸ್ಪಶ್ಯತೆ ನಿವಾರಣೆ, ಸ್ವಚ್ಛತೆ ಗಾಂಧಿ ಕನಸು ಆಗಿದ್ದು, ಆದರೆ ಇಂದು ಅವರ ವಿಚಾರಧಾರೆಯು ದಿಕ್ಕು ತಪ್ಪುತ್ತಿದೆ. ಸಮಾಜದಲ್ಲಿ ಉದ್ಭವಿ ಸಿರುವ ಎಲ್ಲ ಸಮಸ್ಯೆಗಳಿಗೆ ಗಾಂಧೀ ವಿಚಾರಧಾರೆಯನ್ನು ನಾವು ಸರಿಯಾಗಿ ಅರ್ಥೈಸಿಕೊಳ್ಳದಿರುವುದೇ ಕಾರಣ ವಾಗಿದೆ. ಹೆಣ್ಣುಮಕ್ಕಳು ಸ್ವತಂತ್ರವಾಗಿ ಓಡಾಡಬೇಕು ಎಂಬುದು ಗಾಂಧೀಜಿ ಆಶಯ. ಆದರೆ ಅವರ 150ನೆ ಜನ್ಮ ದಿನಾಚರಣೆಯ ಕಾಲಘಟ್ಟದಲ್ಲಿ ಮಹಿಳೆಯ ಶಕ್ತಿ ಕೇವಲ 50ರಷ್ಟು ಮಾತ್ರ ಅನಾವರಣಗೊಂಡಿರುವುದು ಖೇದಕರ ಎಂದು ಅವರು ತಿಳಿಸಿದರು.

ಮಣಿಪಾಲ ಗಾಂಧೀಜಿ ಅಧ್ಯಯನ ಕೇಂದ್ರ ನಿರ್ದೇಶಕ ಪ್ರೊ.ವರದೇಶ ಹಿರೇಗಂಗೆ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಿನಿಮಾ ನಿರ್ಮಾಪಕ ಯಾಕೂಬ್ ಖಾದರ್ ಗುಲ್ವಾಡಿ ಮಾತನಾಡಿದರು. ಹಿರಿಯ ವ್ಯಂಗ್ಯ ಚಿತ್ರಗಾರರಾದ ವಿ.ಜಿ.ನರೇಂದ್ರ, ಸುರೇಂದ್ರ, ಪವರ್‌ಲಿಪ್ಟರ್ ವಿಶ್ವನಾಥ ಗಾಣಿಗ ಅವರನ್ನು ಸನ್ಮಾನಿಸಲಾಯಿತು.

ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ಅತಿಥಿಗಳನ್ನು ಗೌರವಿಸಿದರು. ವ್ಯಂಗ್ಯ ಚಿತ್ರಕಾರರಾದ ಕೇಶವ ಸಸಿಹಿತ್ಲು, ಚಂದ್ರಶೇಖರ ಶೆಟ್ಟಿ ಸಹಕರಿಸಿದರು. ಅವಿನಾಶ್ ಕಾಮತ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಹವ್ಯಾಸಿ ವ್ಯಂಗ್ಯ ಚಿತ್ರಕಲಾವಿದ ರಾಮಕೃಷ್ಣ ಹೇರ್ಳೆ ವಂದಿಸಿದರು.

ವಿದ್ಯಾರ್ಥಿಗಳಿಗೆ ಕಾರ್ಟೂನು ಸ್ಪರ್ಧೆ

ಶನಿವಾರ ಅಪರಾಹ್ನ ಕಾರ್ಟೂನ್‌ಹಬ್ಬದಲ್ಲಿ ಮಾಯಾ ಕಾಮತ್ ಸ್ಮರಣಾರ್ಥ ಉಡುಪಿ ಮತ್ತು ದ.ಕ. ಜಿಲ್ಲೆಯ ಶಾಲಾ ಕಾಲೇಜು ವಿದ್ಯಾರ್ಥಿ ಗಳಿಗಾಗಿ ಕಾರ್ಟೂನು ರಚಿಸು  ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

5ನೇ ತರಗತಿವರೆಗಿನ ಮಕ್ಕಳಿಗೆ ಗಾಂಧೀಜಿ ಚಿತ್ರ, 6ರಿಂದ ಕಾಲೇಜು ವರೆಗಿನ ವಿದ್ಯಾರ್ಥಿಗಳಿಗೆ ಗಾಂಧೀಜಿ ಈಶ್ವರ ಅಲ್ಲಾ ತೇರೋ ನಾಮ್ (ಕೋಮು ಸಾಮರಸ್ಯ) ಬಗ್ಗೆ ಚಿತ್ರ ಬಿಡಿಸುವ ಸ್ಪರ್ಧೆಯನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಮನೋವೈದ್ಯ ಡಾ.ಪಿ.ವಿ.ಭಂಡಾರಿ, ವಾಗ್ಮಿ ಡಾ.ಜಯ ಪ್ರಕಾಶ್ ಶೆಟ್ಟಿ ಉಡುಪಿ, ಸಾಧನಾ ಕಲಾ ಸಾಂಸ್ಕೃತಿಕ ಕೇಂದ್ರ ಕುಂದಾಪುರ ನಾರಾಯಣ ಐತಾಳ್, ಕ್ರಿಕೆಟ್ ತರಬೇತುದಾರ ವಿಜಯ್ ಆಳ್ವ ಬ್ರಹ್ಮಾವರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News