ಮನುಷ್ಯನ ಸ್ವಾರ್ಥದಿಂದ ಆದಾಯಕ್ಕಿಂತ ಹೆಚ್ಚು ಅಕ್ರಮ ಆಸ್ತಿ ಗಳಿಕೆ: ಸಿ.ಎಂ.ಜೋಶಿ

Update: 2019-11-23 14:22 GMT

 ಉಡುಪಿ, ನ.23: ಮನುಷ್ಯನ ಸ್ವಾರ್ಥ, ಮಿತಿ ಮೀರಿದ ಆಸೆಯಿಂದ ಆದಾಯಕ್ಕಿಂತ ಹೆಚ್ಚು ಅಕ್ರಮ ಆಸ್ತಿ, ಹಣವನ್ನು ಕೂಡಿಟ್ಟಿರುವುದರಿಂದ ಇಂದು ಆದಾಯ ತೆರಿಗೆ, ಇಡಿ ಅಧಿಕಾರಿಗಳು ದಾಳಿ ನಡೆಸುವಂತಾಗಿದೆ ಎಂದು ಉಡುಪಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಸಿ.ಎಂ.ಜೋಶಿ ಹೇಳಿದ್ದಾರೆ.

ಭಾರತೀಯ ಲೆಕ್ಕ ಪರಿಶೋಧನಾ ಸಂಸ್ಥೆಯ ಎಸ್‌ಐಆರ್‌ಸಿ ಉಡುಪಿ ಶಾಖೆ ವತಿಯಿಂದ ಕಡಿಯಾಳಿಯ ಐಸಿಎಐ ಭವನದ ಸೆಮಿನಾರ್ ಹಾಲ್‌ನಲ್ಲಿ ಶನಿವಾರ ಆಯೋಜಿಸಲಾದ ಆದಾಯ ತೆರಿಗೆ ಸಮೀಕ್ಷೆ, ದಾಳಿ ಮತ್ತು ವಶ- ಸಮೀಕ್ಷೆ ನಂತರ ವೌಲ್ಯಮಾಪನ ವಿಷಯದ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಈ ದೇಶದಲ್ಲಿ ಅನಾದಿ ಕಾಲದಿಂದಲೂ ತೆರಿಗೆ ಸಂಗ್ರಹ ಎಂಬುದು ಜಾರಿ ಯಲ್ಲಿತ್ತು. ಇಂದು ಬದಲಾಗುತ್ತಿರುವ ಕಾಲಘಟ್ಟದಲ್ಲಿ ಪೈಪೋಟಿಗಳು ಹೆಚ್ಚಾ ಗುತ್ತಿವೆ. ಹಣ ಗಳಿಸುವುದೇ ಸಾಧನೆ ಎಂಬ ಮನೋಭಾವನೆ ಬೆಳೆಯುತ್ತಿದೆ. ಇದರಿಂದ ಸಮಸ್ಯೆ ಉಂಟಾಗಿ ಸಮಾಜದಲ್ಲಿ ಅಸಮತೋಲನ ಸೃಷ್ಟಿಯಾಗು ತ್ತಿದೆ. ಈ ಮದ್ಯೆ ಕಾನೂನು ಪರಿಪಾಲನೆ ಮಾಡುವುದನ್ನು ಮರೆಯುತ್ತಿದ್ದೇವೆ ಎಂದು ಅವರು ತಿಳಿಸಿದರು.

ತೆರಿಗೆ ಸಂಗ್ರಹಿಸುವ ಸಂದರ್ಭದಲ್ಲಿ ಯಾರಿಗೂ ಅನ್ಯಾಯ, ತೊಂದರೆ ಆಗದಂತೆ ನೋಡಿಕೊಳ್ಳುವುದು ಸಂಬಂಧಪಟ್ಟವರ ಜವಾಬ್ದಾರಿ ಯಾಗಿದೆ. ಅದೇ ರೀತಿ ಪ್ರತಿಯೊಬ್ಬರಿಗೂ ಈ ಪರಿಸರದಿಂದ ಪ್ರಯೋಜನ ಪಡೆಯುವ ಹಕ್ಕು ಇದೆ. ಆದರೆ ಕಾನೂನು ಉಲ್ಲಂಘಿಸಿ ಮಿತಿವಿಲ್ಲದ ಆಸೆ, ಮುಂದಿನ ಪೀಳಿಗೆಗೆ ಆಸ್ತಿ ಮಾಡುವುದು ಸರಿಯಲ್ಲ. ಈ ಬಗ್ಗೆ ನಾವು ಚಿಂತನೆ ನಡೆಸಬೇಕಾಗಿೆ ಎಂದು ಅವರು ಅಭಿಪ್ರಾಯ ಪಟ್ಟರು.

ಭಾರತೀಯ ಲೆಕ್ಕ ಪರಿಶೋಧನಾ ಸಂಸ್ಥೆ ಉಡುಪಿ ಶಾಖೆಯ ಅಧ್ಯಕ್ಷ ಸಿಎ ನರಸಿಂಹ ನಾಯಕ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಂತ್ರಿಕ ಗೋಷ್ಠಿಯಲ್ಲಿ ಬೆಂಗಳೂರಿನ ಹಿರಿಯ ನ್ಯಾಯವಾದಿಗಳಾದ ಸಿಎ ಎ.ಶಂಕರ್, ವಿ.ನರೇಂದ್ರ ಶರ್ಮಾ ಉಪನ್ಯಾಸ ನೀಡಿದರು. ಉಡುಪಿ ಶಾಖೆಯ ಕಾರ್ಯ ದರ್ಶಿ ಸಿಎ ಕವಿತಾ ಎಂ.ಪೈ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News