×
Ad

'ಕೊಂಕಣಿಗರು ಜಾಗತಿಕ ಸಮುದಾಯವಾಗಿ ಹೊರಹೊಮ್ಮಲಿ'

Update: 2019-11-23 20:43 IST

ಮಂಗಳೂರು, ನ.23: ಕೊಂಕಣಿ ಸಮುದಾಯವು ಪ್ರಪಂಚದ ಎಲ್ಲೆಡೆ ನೆಲೆಸಿದ್ದು, ಕೊಂಕಣಿಗರು ಜಾಗತಿಕ ಸಮುದಾಯವಾಗಿ ಹೊರಹೊಮ್ಮಬೇಕು ಎಂದು ಮಣಿಪಾಲ್ ಗ್ಲೋಬಲ್ ಎಜುಕೇಶನ್ ಅಧ್ಯಕ್ಷ ಟಿ.ವಿ.ಮೋಹನ್‌ದಾಸ್ ಪೈ ತಿಳಿಸಿದ್ದಾರೆ.

ನಗರದ ಟಿ.ವಿ. ರಮಣ್ ಪೈ ಕನ್ವೆನ್ಶನ್ ಹಾಲ್‌ನಲ್ಲಿ ಕೊಂಕಣಿ ಭಾಷೆ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಶನಿವಾರ ಜರುಗಿದ ವಿಶ್ವ ಕೊಂಕಣಿ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ವಿಶ್ವ ಕೊಂಕಣಿ ಕೇಂದ್ರದ ಮೂಲಕ ಕಳೆದ 10 ವರ್ಷಗಳಲ್ಲಿ 20 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ 25 ಕೋಟಿ ರೂ. ವಿದ್ಯಾರ್ಥಿ ವೇತನ ವಿತರಿಸಲಾಗಿದೆ. ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ದೊರೆಯುವ ವಿದ್ಯಾರ್ಥಿ ವೇತನವನ್ನು ಕೊಂಕಣಿ ಸಮುದಾಯದ ಎಲ್ಲರಿಗೂ ಒದಗಿಸುವಂತೆ ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದರು.

ಪ್ರಶಸ್ತಿ ಪ್ರದಾನ: ದೇವಿದಾಸ್ ಕದಂ (ಜಾನವಾಯಿ- ಕೊಂಕಣಿ ಕಾದಂಬರಿ)- ಸಾಹಿತ್ಯ ಪುರಸ್ಕಾರ ಮತ್ತು ಶಕುಂತಳಾ ಆರ್.ಕಿಣಿ (ಥೊಡೇ ಏಕಾಂತ- ಕೊಂಕಣಿ ಕವನ ಸಂಕಲನ)- ಕವಿತಾ ಕೃತಿ ಪುರಸ್ಕಾರ ಪ್ರದಾನ ಮಾಡಲಾಯಿತು.

 ಕೊಂಕಣಿ ಭಾಷೆ ಮತ್ತು ಸಂಶೋಧನೆಗೆ ಜೀವಮಾನದ ಕೊಡುಗೆಗಾಗಿ ರೋಕಿ ವಿ. ಮಿರಾಂದ ಅವರಿಗೆ ವಿಶ್ವ ಕೊಂಕಣಿ ಜೀವನ ಸಿದ್ದಿ ಸನ್ಮಾನ್, ಅನುಕರಣೀಯ ಸಾಧನೆಗಾಗಿ ಕೆ.ರಾಘವೇಂದ್ರ ಪೈ ( ಯೋಗ ಕ್ಷೇತ್ರ) ಮತ್ತು ಮೀರಾ ಎಸ್.ಶಾನುಭಾಗ್ (ಹಿರಿಯರ ಕಾಳಜಿ) ಅವರಿಗೆ ವಿಶ್ವ ಕೊಂಕಣಿ ಸೇವಾ ಪುರಸ್ಕಾರ, ಮಾದರಿ ಸಾಧನೆಗಾಗಿ ಸುಹಾಸ್ ಯಶವಂತ ದಲಾಲ್ (ಕೊಂಕಣಿ ಚಳವಳಿ) ಮತ್ತು ವಸಂತಿ ಆರ್.ನಾಯಕ್ (ಸಂಗೀತ) ಅವರಿಗೆ ವಿಮಲಾ ವಿ.ಪೈ ವಿಶ್ವ ಕೊಂಕಣಿ ವಿಶೇಷ ಕೊಂಕಣಿ ಪುರಸ್ಕಾರ ಪ್ರದಾನಿಸಲಾಯಿತು.

ಮುಂಬೈನ ಏಷಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಂಕೋಲಾಜಿ ನಿರ್ದೇಶಕ ಡಾ.ರಮಾಕಾಂತ್ ಕೃಷ್ಣಾಜಿ ದೇಶಪಾಂಡೆ, ಡಾ.ಆಸ್ಟಿನ್ ಡಿಸೋಜ ಪ್ರಭು ಮತ್ತು ಪಿ.ಸಬಿತಾ ಸತೀಶ್‌ಪೈ ಪುರಸ್ಕಾರ/ ಪ್ರಶಸ್ತಿ ಪ್ರದಾನ ಮಾಡಿದರು. ವಿಶ್ವ ಕೊಂಕಣಿ ಸರ್ದಾರ್ ಬಸ್ತಿ ವಾಮನ ಶೆಣೈ ಅಧ್ಯಕ್ಷತೆ ವಹಿಸಿದ್ದರು. ಸಬಿತಾ ಸತೀಶ್‌ಪೈ, ಸಿ.ಡಿ.ಕಾಮತ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News