×
Ad

ಮಲ್ಪೆ: ಸಮುದ್ರ ಮಧ್ಯೆ ಎದೆನೋವಿಗೆ ತುತ್ತಾದ ಮೀನುಗಾರನ ರಕ್ಷಣೆ

Update: 2019-11-23 22:09 IST

ಮಲ್ಪೆ, ನ.23: ಮಲ್ಪೆ ಸಮುದ್ರದಲ್ಲಿ ನ.23ರಂದು ಬೆಳಗ್ಗೆ ಮೀನುಗಾರಿಕೆ ನಡೆಸುತ್ತಿದ್ದ ಬೋಟಿನಲ್ಲಿ ಎದೆನೋವಿನಿಂದ ಬಳಲುತ್ತಿದ್ದ ಮೀನುಗಾರರೊಬ್ಬ ರನ್ನು ಮಲ್ಪೆ ಕರಾವಳಿ ಕಾವಲು ಪಡೆಯ ತಂಡ ರಕ್ಷಣೆ ಮಾಡಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಿರುವ ಬಗ್ಗೆ ವರದಿಯಾಗಿದೆ.

ಮಂಗಳೂರಿನಿಂದ ಮಲ್ಪೆಗೆ ಸಮುದ್ರದಲ್ಲಿ ಮೀನುಗಾರಿಕೆಗೆ ಬರುತ್ತಿದ್ದ ಕೇರಳ ನೊಂದಾಣಿಯ ‘ಶ್ರೇಯಾಲಿ’ ಹೆಸರಿನ ಬೋಟಿನಲ್ಲಿದ್ದ ಕೇರಳ ಮೂಲದ ರೂಪೇಶ್(45) ಎಂಬವರಿಗೆ ಎದೆನೋವು ಕಾಣಿಸಿಕೊಂಡಿದ್ದು, ಈ ಬಗ್ಗೆ ಕೋರ್ಸ್ಟ್ ಗಾರ್ಡ್‌ನಿಂದ ಮಲ್ಪೆ ಕರಾವಳಿ ಕಾವಲು ಪಡೆಯ ಠಾಣೆಗೆ ಸಂದೇಶ ಬಂದಿತ್ತೆನ್ನಲಾಗಿದೆ.

ಅದರಂತೆ ತಕ್ಷಣ ಸಮುದ್ರದಲ್ಲಿ ಗಸ್ತು ತಿರುಗುತ್ತಿದ್ದ ಕರಾವಳಿ ಕಾವಲು ಪಡೆಯ ಭಾರ್ಗವ ಎಂಬ ಬೋಟಿಗೆ ಮಾಹಿತಿ ನೀಡಲಾಯಿತು. ಸುದ್ದಿ ತಿಳಿದಾಕ್ಷಣ ತುರ್ತು ಕಾರ್ಯಾಚರಣೆ ನಡೆಸಿದ ಕರಾವಳಿ ಕಾವಲು ಪಡೆಯ ಪೊಲೀಸರು ಮಲ್ಪೆ ಬಂದರಿನಿಂದ 8.5 ನಾಟೆಕಲ್ ಮೈಲ್ ದೂರದ ಸಮುದ್ರದ ಮಧ್ಯೆ ನಿಂತಿದ್ದ ಶ್ರೇಯಾಲಿ ಬೋಟಿನ ಬಳಿ ತೆರಳಿದರು.

ಅದರಲ್ಲಿ ಎದೆನೋವಿನಿಂದ ಬಳಲುತ್ತಿದ್ದ ರೂಪೇಶ್‌ನನ್ನು ಇಲಾಖಾ ಬೋಟಿಗೆ ಇತರ ಮೀನುಗಾರರ ಸಹಾಯದೊಂದಿಗೆ ವರ್ಗಾಯಿಸಿ ಮಲ್ಪೆ ತೀರದಲ್ಲಿರುವ ಸೈಂಟ್ ಮೇರಿಸ್ ಜೆಟ್ಟಿಗೆ ಕರೆದುಕೊಂಡು ಬರಲಾಯಿತು. ಅಲ್ಲಿ ಸಿದ್ಧವಾಗಿ ನಿಂತಿದ್ದ ಉಡುಪಿ ಪೊಲೀಸ್ ಹೈವೆ ಮೊಬೈಲ್ ವಾಹನದಲ್ಲಿ ರೂಪೇಶ್ ಅವರನ್ನು ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತುರ್ತು ಚಿಕಿತ್ಸಾ ವಿಭಾಗಕ್ಕೆ ಒಳರೋಗಿಯಾಗಿ ದಾಖಲು ಮಾಡಲಾಯಿತು. ರೂಪೇಶ್ ಆರೋಗ್ಯ ಸ್ಥಿವಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ತುರ್ತು ಕಾರ್ಯಾಚರಣೆಯಲ್ಲಿ ಹೈವೆ ಮೊಬೈಲ್ ವಾಹನದ ಎಎಸ್ಸೈ ಉಮೇಶ್ ಜೋಗಿ, ಮಲ್ಪೆ ಕರಾವಳಿ ಕಾವಲು ಪಡೆಯ ಪೊಲೀಸ್ ನಿರೀಕ್ಷಕ ರಾಘವೇಂದ್ರ ಕಾಂಡಿಕೆ, ಎಸ್ಸೈ ಗಜೇಂದ್ರ, ಎಎಸ್ಸೈ ಮೋನಾ ಪೂಜಾರಿ, ಎಎಸ್ಸೈ ಗೋಪಾಲ್ ನಾಯ್ಕ ಮತ್ತು ಬೋಟ್ ಕ್ಯಾಪ್ಟನ್ ಮಲ್ಲಿಕಾರ್ಜುನ ಯಶವಂತ್ ಗುನಗಿ ಕಲಾಸಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News