ಟೆಂಪೊಗೆ ಢಿಕ್ಕಿ: ಬೈಕ್ ಸವಾರ ಮೃತ್ಯು
Update: 2019-11-23 22:11 IST
ಕಾರ್ಕಳ, ನ.23: ಬೈಕೊಂದು ಟೆಂಪೊಗೆ ಹಿಂಬದಿಯಿಂದ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ನ.23ರಂದು ಬೆಳಗ್ಗೆ 8.15ರ ಸುಮಾರಿಗೆ ಮುಡ್ರಾಲು ದುರ್ಗಾಪರಮೇಶ್ವರೀ ದೇವಸ್ಥಾನದ ದ್ವಾರದ ಬಳಿ ಕಾರ್ಕಳ -ಕುದುರೆ ಮುಖ ರಾಷ್ಟೀಯ ಹೆದ್ದಾರಿಯಲ್ಲಿ ನಡೆದಿದೆ.
ಮೃತರನ್ನು ಬೈಕ್ ಸವಾರ ಸತೀಶ್ ಆಚಾರ್ಯ(41) ಎಂದು ಗುರುತಿಸ ಲಾಗಿದೆ. ಬಜಗೋಳಿ ಕಡೆಯಿಂದ ಮಾಳ ಕಡೆಗೆ ಹೋಗುತ್ತಿದ್ದ 407 ಟೆಂಪೋ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಹೆದ್ದಾರಿಯ ಮಧ್ಯ ಭಾಗದಲ್ಲಿ ಯಾವುದೇ ಸೂಚನೆ ನೀಡದೆ ಒಮ್ಮೇಲೆ ಬ್ರೇಕ್ ಹಾಕಿ ನಿಲ್ಲಿಸಿದ್ದ ಎನ್ನಲಾಗಿದೆ.
ಇದರ ಪರಿಣಾಮ ಹಿಂದಿನಿಂದ ಬರುತ್ತಿದ್ದ ಪಲ್ಸರ್ ಬೈಕ್ ಟೆಂಪೊಗೆ ಢಿಕ್ಕಿ ಹೊಡೆಯಿತು. ಇದರಿಂದ ಬೈಕ್ ಸವಾರ ತಲೆಗೆ ತೀವ್ರವಾಗಿ ಗಾಯಗೊಂಡು ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತ ಪಟ್ಟರು ಎಂದು ತಿಳಿದುಬಂದಿದೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.