×
Ad

ಭೀಮಾ ಮಾಂಡವಿ ಹತ್ಯೆ ಪ್ರಕರಣ: ಎನ್‌ಐಎಗೆ ತನಿಖೆಯನ್ನು ಹಸ್ತಾಂತರಿಸಲು ಛತ್ತೀಸ್‌ಗಡ ಸರಕಾರಕ್ಕೆ ಹೈಕೋರ್ಟ್ ನಿರ್ದೇಶ

Update: 2019-11-23 22:18 IST

ಹೊಸದಿಲ್ಲಿ, ನ.23: ಬಿಜೆಪಿ ಶಾಸಕ ಭೀಮಾ ಮಾಂಡವಿ ಹತ್ಯೆ ಪ್ರಕರಣದ ತನಿಖೆ ಮತ್ತು ಈವರೆಗಿನ ವಿಚಾರಣಾ ವರದಿಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ಹಸ್ತಾಂತರಿಸುವಂತೆ ಛತ್ತೀಸ್‌ಗಡ ಉಚ್ಚ ನ್ಯಾಯಾಲಯವು ರಾಜ್ಯ ಸರಕಾರಕ್ಕೆ ನಿರ್ದೇಶ ನೀಡಿದೆ.

ಈ ಸಂಬಂಧ ಛತ್ತೀಸ್‌ಗಡದ ಕಾಂಗ್ರೆಸ್ ಸರಕಾರವು ಸಲ್ಲಿಸಿದ್ದ ಮರುಪರಿಶೀಲನೆ ಅರ್ಜಿಯನ್ನು ಅದು ತಳ್ಳಿಹಾಕಿದೆ.

ಬಸ್ತಾರ್ ಲೋಕಸಭಾ ಕ್ಷೇತ್ರದಲ್ಲಿ ಮೊದಲ ಹಂತದ ಮತದಾನಕ್ಕೆ ಎರಡು ದಿನಗಳ ಮೊದಲು, ಎ.9ರಂದು ದಾಂತೆವಾಡಾದಲ್ಲಿ ಮಾವೋವಾದಿ ಬಂಡುಕೋರರು ನಡೆಸಿದ್ದ ಐಇಡಿ ಸ್ಫೋಟದಲ್ಲಿ ಮಾಂಡವಿ ಮತ್ತು ನಾಲ್ವರು ಪೊಲೀಸರು ಕೊಲ್ಲಲ್ಪಟ್ಟಿದ್ದರು.

ತನಗೆ ರಾಜ್ಯ ಸರಕಾರದ ತನಿಖೆಯಲ್ಲಿ ವಿಶ್ವಾಸವಿಲ್ಲವೆಂದು ಮೃತ ಶಾಸಕರ ಪತ್ನಿ ಹೇಳಿದ ಬಳಿಕ ಮೇ 16ರಂದು  ಕೇಂದ್ರದ ಬಿಜೆಪಿ ನೇತೃತ್ವದ ಸರಕಾರವು ಪ್ರಕರಣದ ತನಿಖೆಯನ್ನು ಹಸ್ತಾಂತರಿಸಿಕೊಳ್ಳುವಂತೆ ಎನ್‌ಐಗೆ ಆದೇಶಿಸಿತ್ತು.

 ರಾಜ್ಯ ಪೊಲೀಸರು ಈಗಾಗಲೇ ತನಿಖೆಯನ್ನು ಆರಂಭಿಸಿದ್ದು ಅದು ಮುಂದುವರಿದ ಹಂತದಲ್ಲಿರುವುದರಿಂದ ಎನ್‌ಐಎಗೆ ಹಸ್ತಾಂತರಿಸುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕೋರಿ ರಾಜ್ಯ ಸರಕಾರವು ಎರಡು ಬಾರಿ ಕೇಂದ್ರ ಗೃಹಸಚಿವಾಲಯಕ್ಕೆ ಪತ್ರ ಬರೆದಿತ್ತು.

ಈ ವಿಷಯದಲ್ಲಿ ಹಸ್ತಕ್ಷೇಪ ಕೋರಿ ಎನ್‌ಐಎ ಉಚ್ಚ ನ್ಯಾಯಾಲಯದ ಮೆಟ್ಟ್ಟಿಲನ್ನೇರಿತ್ತು. ತನಿಖೆಯನ್ನು ಎನ್‌ಐಎಗೆ ಹಸ್ತಾಂತರಿಸುವಂತೆ ಏಕ ನ್ಯಾಯಾಧೀಶ ಪೀಠವು ರಾಜ್ಯ ಸರಕಾರಕ್ಕೆ ಆದೇಶಿಸಿತ್ತು. ಆದರೆ ಇದನ್ನು ಪ್ರಶ್ನಿಸಿ ಅದು ಮರುಪರಿಶೀಲನೆ ಅರ್ಜಿಯನ್ನು ಸಲ್ಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News