×
Ad

ಮದುವೆಯಾದ 4 ವರ್ಷಕ್ಕೆ ಕೈ-ಕಾಲುಗಳನ್ನು ಕಳೆದುಕೊಂಡು ಇದೀಗ ಪ್ಯಾರಾಲಿಂಪಿಕ್ ನತ್ತ...

Update: 2019-11-23 22:21 IST

ಮಣಿಪಾಲ, ನ.23: ‘ಸಾಧಿಸಿದರೆ ಸಬಳ ನುಂಗಬಹುದು’ ಎಂಬುದು ಕನ್ನಡದ ಜನಪ್ರಿಯ ಗಾದೆ. ಈ ಲೋಕ ನುಡಿಯನ್ನು ನಿಜಗೊಳಿಸಿ, ಅದಕ್ಕೊಂದು ಉದಾಹರಣೆಯಾಗಿ ನಿಲ್ಲುವವರು ಬೆಂಗಳೂರಿನವರಾದ 39 ವರ್ಷ ಪ್ರಾಯದ ಶಾಲಿನಿ ಸರಸ್ವತಿ. ಏಳು ವರ್ಷಗಳ ಹಿಂದೆ ತೀರಾ ಅಪರೂಪದ ಕಾಯಿಲೆಗೆ ತುತ್ತಾಗಿ ತನ್ನೆರಡು ಕಾಲು ಹಾಗೂ ಕೈಗಳನ್ನು ಕಳೆದುಕೊಂಡ ಶಾಲಿನಿ, ಇಂದು ಆತ್ಮವಿಶ್ವಾಸದಿಂದ ಬದುಕನ್ನು ಮತ್ತೆ ಕಟ್ಟಿಕೊಂಡ ಪರಿ, ಜೀವನದಲ್ಲಿ ಮಾಡುತ್ತಿರುವ ಸಾಧನೆ, ಅವರ ಆತ್ಮಸ್ಥೈರ್ಯ ಎಲ್ಲರಿಗೂ ಮಾದರಿ.

ಕೃತಕ ಕಾಲುಗಳ ಮೂಲಕ ಸಾಮಾನ್ಯರಂತೆ ನಡೆದಾಡುವ ಶಾಲಿನಿ, ಭಾರತದ ಮೊದಲ ಬ್ಲೇಡ್ ರನ್ನರ್ ಆಗಿ ಕ್ರೀಡಾಕ್ಷೇತ್ರದಲ್ಲೂ ಮಾಡುತ್ತಿರುವ ಸಾಧನೆ ಅಸಾಮಾನ್ಯ ಎಂದೇ ಹೇಳಬಹುದು. ಎಲ್ಲರಂತೆ ಸಾಮಾನ್ಯ ಯುವತಿ ಯಾಗಿದ್ದಾಗ ಎಂದೂ ಓಡದಿದ್ದ ಶಾಲಿನಿ ಇಂದು ಎರಡೂ ಕಾಲುಗಳಿಗೆ ಬ್ಲೇಡ್‌ಗಳನ್ನು ಅಳವಡಿಸಿ ಎರಡು ವರ್ಷಗಳ ಹಿಂದೆ ಬೆಂಗಳೂರಿನ ಟಿಸಿಎಸ್ 10 ಕಿ.ಮೀ.ನ ಹಾಫ್‌ಮ್ಯಾರಥಾನ್‌ನ್ನು ಪೂರ್ಣಗೊಳಿಸಿದ್ದರೆಂದರೆ ಅವರ ಮನೋಸ್ಥೈರ್ಯದ ಮಟ್ಟವನ್ನು ಅಂದಾಜಿಸಬಹುದು.

ಇಂಥ ಶಾಲಿನಿ ಸರಸ್ವತಿ ಇಂದು ಮಣಿಪಾಲಕ್ಕೆ ಬಂದಿದ್ದು, ಮಾಹೆ ಮುಂದಿನ ವರ್ಷ ನಡೆಸುವ ಮಣಿಪಾಲ ಮ್ಯಾರಥಾನ್ ಅಂಗವಾಗಿ ಹಮ್ಮಿಕೊಂಡಿರುವ ಸರಣಿ ಉಪನ್ಯಾಸ ಮಾಲಿಕೆಯಲ್ಲಿ ‘ನನ್ನ ಬದುಕು, ನನ್ನ ಪಯಣ’ ಎಂಬ ವಿಷಯದ ಕುರಿತು ಮಾತನಾಡುತ್ತಾ ಕಳೆದ ಏಳು ವರ್ಷಗಳ ಬದುಕಿನ ಪಯಣದ ಏಳು-ಬೀಳು, ಸಂತೋಷ-ದು:ಖ, ನೋವು-ನಲಿವಿನ ಕ್ಷಣಗಳನ್ನು ಬರಪೂರ ಹಾಸ್ಯದ ಲೇಪನದೊಂದಿಗೆ ಕೇಳುಗರ ಮನಕಲುಕುತ್ತಾ ತೆರೆದಿಟ್ಟರು.

‘ಜೀವನದಲ್ಲಿ ಪರೀಕ್ಷೆಗಳು ಎದುರಾದಾಗಲಷ್ಟೇ, ನಿಮ್ಮ ಸಾಮರ್ಥ್ಯ ಏನು ಎಂಬುದು ನಿಮಗೆ ಹಾಗೂ ಜಗತ್ತಿಗೆ ತಿಳಿಯುತ್ತದೆ. ಒಂದರ್ಥದಲ್ಲಿ ಈ ಪರೀಕ್ಷೆ ನಿಮ್ಮ ಮನೋಬಲವನ್ನು ಸದೃಢಗೊಳಿಸುತ್ತದೆ. ಎಲ್ಲಾ ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಿ ಬದುಕುವ ಛಲವನ್ನು, ಬದುಕು ಕಟ್ಟಿಕೊಳ್ಳುವ ಸಂಕಲ್ಪವನ್ನು ಗಟ್ಟಿಗೊಳಿಸುತ್ತದೆ.’ ಎಂದು ಅವರು ಮಾಹೆಯ ಅಧಿತಿ ಶಾಸ್ತ್ರಿ ಅವರೊಂದಿಗೆ ಸುಮಾರು ಮುಕ್ಕಾಲು ಗಂಟೆ ನಡೆಸಿದ ಸಂವಾದದ ಸಂದರ್ಭದಲ್ಲಿ ನಗುತ್ತಾ ಹೇಳಿಕೊಂಡರು.

ಮಾಹೆಯ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಹಾಗೂ ಸಿಬಂದ್ದಿಗಳು ಸೇರಿದ್ದ ಸಭೆಯಲ್ಲಿ ತನ್ನ ನೋವುಗಳನ್ನು ಮರೆಸು ವಂತೆ ಹಾಸ್ಯಲೇಪಿತ ಮಾತುಗಳೊಂದಿಗೆ ನೆರೆದವರನ್ನು ನಗಿಸುತ್ತಾ ಮಾತನಾಡಿದ ಶಾಲಿನಿ, 2012ರ ಎಪ್ರಿಲ್ ತಿಂಗಳಲ್ಲಿ ಭಾರತದಲ್ಲಿ ಅಪರೂಪದ್ದಾದ, ತಿಂಗಳ ಹಿಂದೆ ಪತಿಯೊಂದಿಗೆ ವಿವಾಹದ ನಾಲ್ಕನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಕಾಂಬೋಡಿಯಾ ಪ್ರವಾಸಕ್ಕೆ ತೆರಳಿದ ಸಂದರ್ಭದಲ್ಲಿ ನಾಯಿಯ ಉಣ್ಣಿಯೊಂದರಿಂದ ತಗಲಿರಬಹುದಾದ ಮಾರಕ ಕಾಯಿಲೆಯಿಂದ ಸಾವಿನ ಅಂಚಿನವರೆಗೆ ಸಾಗಿ ಬದುಕಿ ಬಂದ, ಆ ವೇಳೆ ಗರ್ಭಿಣಿಯಾಗಿದ್ದ ತಾನು ಮಗುವನ್ನು ಕಳೆದು ಕೊಂಡ ಕತೆಯನ್ನೂ ಅವರು ಹೇಳಿ ಕೇಳುಗರ ಹೃದಯವನ್ನು ತಟ್ಟಿದರು.

ಮೂಲತ: ಕೇರಳದ ಕೊಟ್ಟಾಯಂನವರಾದ ಶಾಲಿನಿ, ಬಾಲ್ಯದಿಂದ ಬೆಂಗಳೂರಿನಲ್ಲೇ ಬೆಳೆದವರು. ತಾನು ಬೆಂಗಳೂರಿನ ಹುಡುಗಿ ಎಂದು ಹೆಮ್ಮೆಯಿಂದ ಹೇಳಿಕೊಂಡ ಶಾಲಿನಿ, ತನ್ನೆಲ್ಲಾ ವಿದ್ಯಾಭ್ಯಾಸವನ್ನು ಮಾಡಿದ್ದು ಬೆಂಗಳೂರಿನಲ್ಲೇ. ಕನ್ನಡವನ್ನೂ ಚೆನ್ನಾಗಿಯೇ ಮಾತನಾಡುವ ಅವರು, ಬಿಪಿಒ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದು, ಈಗಲೂ ಅದರಲ್ಲೇ ಉನ್ನತ ಹುದ್ದೆಯಲ್ಲಿದ್ದಾರೆ. ಬೆಂಗಳೂರಿನವರೇ ಆದ ಪ್ರಶಾಂತ ಚೌಡಪ್ಪರೊಂದಿಗೆ ಅವರ ವಿವಾಹವೂ ನಡೆಯಿತು.

‘ನಮ್ಮ ಮದುವೆಯ ನಾಲ್ಕನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ರಜೆ ಕಳೆಯಲು ನಾವು ಕಾಂಬೋಡಿಯಕ್ಕೆ ಹೋಗಿದ್ದೆವು. ಇದು ನನ್ನ ಬದುಕಿನ ಗತಿಯನ್ನೇ ಬದಲಿಸಿತು. ಅಲ್ಲಿಂದ ಬಂದ ಕೆಲವೇ ದಿನಗಳಲ್ಲಿ ನನಗೆ ಜ್ವರ ಬಂದಿತ್ತು. ಆಗ ನಾನು ಗರ್ಭಿಣಿ ಎಂಬ ಸಿಹಿ ಸುದ್ದಿಯೂ ಗೊತ್ತಾಗಿತ್ತು. ನನ್ನ ರಕ್ತ ಪರೀಕ್ಷೆ ನಡೆಸಿದಾಗ ರಕ್ತಕಣಗಳು ಕುಸಿದಿರುವುದು ಗೊತ್ತಾಯಿತು. ವೈದ್ಯರು ಮೊದಲು ಮಲೇರಿಯಾ ಅಥವಾ ಡೆಂಗ್ ಇರಬಹುದು ಎಂದು ಚಿಕಿತ್ಸೆ ನೀಡಿದರು. ಜ್ವರ ನಿಲ್ಲದಾಗ ತನ್ನನ್ನು ಸಾಮಾನ್ಯ ವಾರ್ಡ್‌ನಿಂದ ಐಸಿಯುಗೆ ಸೇರಿಸಲಾಯಿತು ಎಂದವರು ವಿವರಿಸಿದರು.

ಭಾರತದಲ್ಲಿ ಅಪರೂಪದ್ದಾದ ರಿಕಟ್‌ಸಿಯಲ್ ಅಟ್ಮೋಸ್ ಎಂಬ ಬ್ಯಾಕ್ಟೀರಿಯಾ ಸೊಂಕು ತಗಲಿರುವುದು ಖಚಿತವಾಗುವ ವೇಳೆ ಅದಾಗಲೇ ಕಾಲ ಮಿಂಚಿತ್ತು. ತನಗೆ ಗರ್ಭಪಾತವಾಗಿದ್ದು ಮಾತ್ರವಲ್ಲದೇ, ತನ್ನ ದೇಹದ ಕೆಲವು ಭಾಗಗಳು (ಎರಡು ಕೈ ಮತ್ತು ಕಾಲುಗಳು) ಕೊಳೆಯತೊಡಗಿದವು. 2013ರಲ್ಲಿ ಮೊದಲು ತನ್ನ ಎಡಗೈಯನ್ನು ಕತ್ತರಿಸಲಾಯಿತು. ಕೆಲವೇ ದಿನಗಳಲ್ಲಿ ಬಲಗೈ ಉದುರಿಬಿತ್ತು. ಗ್ಯಾಂಗ್ರೇನ್‌ಗೆ ತನ್ನೆರಡು ಕಾಲುಗಳನ್ನೂ ಕಳೆದುಕೊಳ್ಳಬೇಕಾಯಿತು ಎಂದವರು ತಿಳಿಸಿದರು.

ಆಗ ನನಗೆ ಜಗತ್ತೇ ಕತ್ತಲುಮಯ ಎನಿಸಿಕೊಂಡಿತ್ತು. ಆದರೆ ಸ್ವಭಾವತ: ಧೈರ್ಯದ ಹುಡುಗಿಯಾಗಿದ್ದ ತಾನು ಹೆತ್ತವರು, ಒಡನಾಡಿಗಳು ಹಾಗೂ ಪತಿಯ ಬೆಂಬಲ ಹಾಗೂ ಒತ್ತಾಸೆಯಂತೆ ಎಲ್ಲವನ್ನೂ ಎದುರಿಸಿ ನಿಲ್ಲಲು ದೃಢ ಸಂಕಲ್ಪ ಮಾಡಿದೆ. ಚೇತರಿಕೆಯ ಎರಡು ವರ್ಷಗಳ ಅವಧಿಯಲ್ಲಿ ಕಳೆದುಕೊಂಡಿದ್ದನ್ನು ನೆನಪಿಸಿಕೊಂಡು ದು:ಖಪಡುವುದಕ್ಕಿಂತ, ನಗುತ್ತಾ ಕಷ್ಟಗಳನ್ನು ಎದುರಿಸುತ್ತಾ ಬದುಕಿನಲ್ಲಿ ಸಾಧನೆ ಮಾಡುವದಕ್ಕೆ ನಿರ್ಧರಿಸಿದೆ ಎಂದರು.

ಇದರಂತೆ ಕೃತಕ ಕಾಲುಗಳನ್ನು ಬಳಸಿ ನಡೆದಾಡಲು ಪ್ರಯತ್ನಿಸಿದೆ. ಈ ಹಂತದಲ್ಲಿ ಆಕೆಗೆ ಕೋಚ್ ಆಗಿ ಬಂದ ಬಿ.ಪಿ.ಅಯ್ಯಪ್ಪ ಅವರ ಬದುಕಿಗೆ ಹೊಸ ತಿರುವು ನೀಡಿದರು. ಮೊದಲು ನೃತ್ಯಾಭ್ಯಾಸ ಮಾಡಿದ್ದ ಶಾಲಿನಿ, ಸತತ ಪ್ರಯತ್ನದಿಂದ ಕೃತಕ ಕಾಲುಗಳ (ಬ್ಲೇಡ್) ಮೂಲಕ ನಿಧಾನವಾಗಿ ಓಟದ ಅಭ್ಯಾಸ ನಡೆಸಿದರು. ಈಗಲೂ ಅವರು ಪ್ರತಿದಿನ 90 ನಿಮಿಷಗಳ ಕಾಲ ಸತತ ಓಟದ ಅಭ್ಯಾಸ ನಡೆಸುತ್ತಾರೆ.

ತನ್ನೆರಡೂ ಕಾಲುಗಳು ಸರಿಯಿದ್ದಾಗ ನಾನೆಂದೂ ಓಟದಲ್ಲಿ ಭಾಗವಹಿಸಿದವಳೇ ಅಲ್ಲ. ಈಗ ಕೃತಕ ಕಾಲುಗಳನ್ನು ಬಳಸಿ 2016ರಲ್ಲಿ ಬೆಂಗಳೂರಿನಲ್ಲಿ ಟಿಸಿಎಸ್ ಹಾಫ್ ಮ್ಯಾರಥಾನ್ (10ಕಿ.ಮೀ.)ನ್ನು ಪೂರ್ಣಗೊಳಿಸಿದ ಸಾಧನೆಯನ್ನೂ ಮಾಡಿದ್ದೇನೆ ಎಂದರು.

ಇದೀಗ ತನ್ನ ಮುಂದಿನ ಗುರಿ 2020ರಲ್ಲಿ ನಡೆಯುವ ಬೇಸಿಗೆ ಪ್ಯಾರಾಲಿಂಪಿಕ್ಸ್‌ನ ಸ್ಪ್ರಿಂಟ್ ಸ್ಪರ್ಧೆಯಲ್ಲಿ (100ಮೀ., 200ಮೀ.) ಸ್ಪರ್ಧಿಸು ವುದಾಗಿದೆ. ಇದಕ್ಕಾಗಿ ಕೋಚ್ ಅಯ್ಯಪ್ಪರ ಮಾರ್ಗದರ್ಶನದಲ್ಲಿ ಸತತ ಅಭ್ಯಾಸವನ್ನೂ ನಡೆಸುತಿದ್ದೇನೆ.’ ಎಂದು ಶಾಲಿನಿ ನುಡಿದರು.

ಶಾಲಿನಿ ಈಗ ದೇಶದ ಪ್ರಮುಖ ಪ್ಯಾರಾ ಅಥ್ಲೀಟ್ ಆಗಿದ್ದಾರೆ. 2018ರ ರಾಷ್ಟ್ರೀಯ ಪ್ಯಾರಾ ಅಥ್ಲಿಟಿಕ್ ಚಾಂಪಿಯನ್‌ಷಿಪ್‌ನ 100ಮೀ. ಸ್ಪ್ರಿಂಟ್‌ನಲ್ಲಿ ಅವರು ಪದಕವನ್ನು ಜಯಿಸಿದ್ದಾರೆ. ಈ ವಿಭಾಗದಲ್ಲಿ ಅವರು ಏಷ್ಯನ್‌ದ ನಂ.3 ಆಗಿದ್ದಾರೆ. ಹೀಗಾಗಿ ಮುಂದಿನ ವರ್ಷದ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆಲುವುದು ತನ್ನ ಗುರಿಯಾಗಿದೆ. ಇದಕ್ಕಾಗಿ ಕಠಿಣ ಅಭ್ಯಾಸದಲ್ಲಿ ತನ್ನನ್ನು ತೊಡಗಿಸಿಕೊಂಡಿರುವುದಾಗಿ ಹೇಳಿದರು.

ಇದರೊಂದಿಗೆ ಶಾಲಿನಿ ಶಾಲಾ-ಕಾಲೇಜುಗಳಿಗೆ, ಸಂಘಸಂಸ್ಥೆಗಳಲ್ಲಿ ಜೀವನ ದಲ್ಲಿ ತನ್ನಂತೆ ಅಕಸ್ಮಿಕಗಳಿಗೆ ತುತ್ತಾದವರಿಗೆ ಸ್ಪೂರ್ತಿ ನೀಡುವ ಭಾಷಣಗಳನ್ನು ಮಾಡುತ್ತಾರೆ. ವೈಯಕ್ತಿಕವಾಗಿ ಇದು ನನಗೆ ಇನ್ನಷ್ಟು ಸಾಧನೆಗೆ ಸ್ಪೂರ್ತಿ ತುಂಬುತ್ತದೆ. ಜೀವನದಲ್ಲಿ ಏನೇ ಬಂದರೂ ಎದುರಿಸುವ ಧೈರ್ಯವೂ ನನಗೆ ಇದರಿಂದ ಬಂದಿದೆ ಎಂದು ಶಾಲಿನಿ ನುಡಿದರು.

ಮಣಿಪಾಲದ ಕಾರ್ಯಕ್ರಮದ ಕೊನೆಯಲ್ಲಿ ಅವರು ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಚುರುಕಾದ ಉತ್ತರವನ್ನು ನೀಡಿ, ಅವರಲ್ಲೂ ಬದುಕನ್ನು ಧೈರ್ಯದಿಂದ ಎದುರಿಸುವ ಆತ್ಮಸ್ಥೈರ್ಯ ತುಂಬಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News