ಹೆಜಮಾಡಿ ಕ್ರೀಡಾಂಗಣಕ್ಕೆ ತಾಲೂಕು ಕ್ರೀಡಾಂಗಣ ಪ್ರಸ್ತಾವ: ಲಾಲಾಜಿ ಮೆಂಡನ್

Update: 2019-11-24 05:46 GMT

ಪಡುಬಿದ್ರೆ, ನ.24: ಹೆಜಮಾಡಿಯ ರಾಜೀವ್ ಗಾಂಧಿ ಬಸ್ತಿಪಡ್ಪುಕ್ರೀಡಾಂಗಣವನ್ನು ತಾಲೂಕು ಕ್ರೀಡಾಂಗಣವಾಗಿ ಮಾರ್ಪಡಿಸಲು ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯ ಮೂಲಕ ರಾಜ್ಯ ಸರಕಾರಕ್ಕೆ ಶೀಘ್ರವೇ ಪ್ರಸ್ತಾವ ಸಲ್ಲಿಸುವುದಾಗಿ ಶಾಸಕ ಲಾಲಾಜಿ ಮೆಂಡನ್ ಹೇಳಿದ್ದಾರೆ.

ಹೆಜಮಾಡಿಯ ಸರಕಾರಿ ಪದವಿ ಪೂರ್ವ ಕಾಲೇಜು, ಪ್ರೌಢಶಾಲೆಯಲ್ಲಿ ಶನಿವಾರ ಜರುಗಿದ ಸಬೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಹೆಬ್ಬಾಗಿಲಿನಲ್ಲಿರುವ ಈ ಕ್ರೀಡಾಂಗಣದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.

ಕ್ರೀಡಾಂಗಣದ ಉಸ್ತುವಾರಿಗಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಕರನ್ನೇ ಪ್ರಭಾರ ತಾಲೂಕು ಕ್ರೀಡಾಧಿಕಾರಿಯನ್ನಾಗಿ ನೇಮಕಗೊಳಿಸಲಾಗುತ್ತದೆ. ಮುಂದೆ ಪರೀಕ್ಷಾ ವೇಳೆಗಳ ಹೊರತಾಗಿ ನಡೆಯಬಹುದಾದ ಕ್ರೀಡಾ ಚಟುವಟಿಕೆಗಳಿಗೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೂಲಕವೇ ಪರವಾನಿಗೆಯನ್ನು ಪಡೆದುಕೊಳ್ಳಲೂ ಅನುಕೂಲವೆನಿಸುತ್ತದೆ. ಈ ಕುರಿತಾಗಿ ಪ್ರಸ್ತಾವಿಸಿದ ಜಿಲ್ಲಾ ಯುವಜನ ಸೇವಾ ಹಾಗೂ ಕ್ರೀಡಾಧಿಕಾರಿ ರೋಷನ್ ಕುಮಾರ್ ಶೆಟ್ಟಿ, ಈ ಹಿಂದೆಯೇ ಹೆಜಮಾಡಿಯ ಈ ಕ್ರೀಡಾಂಗಣವನ್ನು ಅಭಿವೃದ್ಧಿಪಡಿಸಲು ಜಿಲ್ಲಾಧಿಕಾರಿ 13.10 ಎಕ್ರೆ ಜಾಗವನ್ನು ಕ್ರೀಡಾ ಇಲಾಖೆಯ ಹೆಸರಿಗೆ ವರ್ಗಾಯಿಸಿದ್ದಾರೆ. ಇಲ್ಲಿ ಈಗ ನಾವು 95 ಶೇಕಡಾದಷ್ಟು ಆವರಣಗೋಡೆಯ ಕಾಮಗಾರಿಯನ್ನು ಮುಗಿಸಿದ್ದೇವೆ. ಮಾಜಿ ಶಾಸಕ ವಿನಯ ಕುಮಾರ್ ಸೊರಕೆ ಅವರ ಶಾಸಕರಾಗಿದ್ದಾಗ ನಿರ್ಮಿಸಲು ಉದ್ದೇಶಿಸಿದ ಹೊಸ ಗ್ಯಾಲರಿಯ ಕಾಮಗಾರಿ, 400 ಮೀಟರ್ ಟ್ರಾಕ್‌ಗಳಿಗಾಗಿ ಅನುದಾನವು ಪೂರ್ಣ ಲಭ್ಯವಾಗಿಲ್ಲ. 1.25 ಕೋಟಿ ರೂ. ಅನುದಾನ ಮಾತ್ರ ಬಿಡುಗಡೆಯಾಗಿದೆ. ಇದರಲ್ಲಿ ಸುಮಾರು 60ಲಕ್ಷ ರೂ. ವೆಚ್ಚದಲ್ಲಿ ಗ್ಯಾಲರಿಯ 50 ಶೇ. ಕಾಮಗಾರಿಯಷ್ಟೇ ಮುಗಿದಿದೆ. ಆದರೆ ಛಾವಣಿಯ ವಿನಹ ಗ್ಯಾಲರಿ ಮಾತ್ರದ ಕಾಮಗಾರಿಗೆ ಹಾಗೂ ಅಂಗಡಿ ಕೋಣೆಗಳ ಕಾಮಗಾರಿ ಪೂರ್ಣಗೊಳಿಸಲು ಕ್ರೀಡಾ ಇಲಾಖೆ ಬಳಿ 65 ಲಕ್ಷ ರೂ. ಅನುದಾನವಿದೆ. ಹೊಸ ಸಿಂಥೆಟಿಕ್ ಟ್ರಾಕ್, ಒಳಾಂಗಣ ಕ್ರೀಡಾಂಗಣ, ಶಟಲ್ ಕೋರ್ಟ್ ಇತ್ಯಾದಿಗಳಿಗೆ ಸೇರಿಸಿಕೊಂಡು 2014ರಲ್ಲಿ ಕೇಂದ್ರ ಕ್ರೀಡಾ ಇಲಾಖೆಗೆ ಪ್ರಸ್ತಾವ ರವಾನಿಸಿದ್ದರೂ ಮಂಜೂರಾಗಿರಲಿಲ್ಲವೆಂದರು.

 ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್, ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಈಶ್ವರ್, ಹೆಜಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್, ಉಪಾಧ್ಯಕ್ಷ ಸುಧಾಕರ್ ಕರ್ಕೇರ, ಜಿಲ್ಲಾ ಪಂಚಾಯತ್ ಸದಸ್ಯ ಶಶಿಕಾಂತ್ ಪಡುಬಿದ್ರೆ, ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಸವಿತಾ ಮತ್ತಿತರರು ಉಪಸ್ಥಿತರಿದ್ದರು. ಪ್ರಾಧ್ಯಾಪಕ ಆಲ್ವಿನ್ ಅಂದ್ರಾದೆ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News