×
Ad

ಮಲ್ಪೆ ಸೈಂಟ್ ಮೇರಿಸ್ ದ್ವೀಪದಲ್ಲಿ ಇಡೀ ರಾತ್ರಿ ಕಳೆದ ಪ್ರವಾಸಿಗರು!

Update: 2019-11-24 16:05 IST

ಉಡುಪಿ, ನ.24: ಪ್ರವಾಸಿಗರನ್ನು ಕರೆದೊಯ್ಯುವ ಕೊನೆಯ ಬೋಟು ತಪ್ಪಿದ ಪರಿಣಾಮ ಕೇರಳ ರಾಜ್ಯದ ಮಹಿಳೆ ಸೇರಿದಂತೆ ನಾಲ್ವರು ಪ್ರವಾಸಿಗರು ಮಲ್ಪೆ ಸಮುದ್ರ ಮಧ್ಯೆ ಇರುವ ಸೈಂಟ್ ಮೇರಿಸ್ ದ್ವೀಪದಲ್ಲಿ ಇಡೀ ರಾತ್ರಿ ಕಳೆದ ಘಟನೆ ನ.23ರಂದು ನಡೆದಿದೆ.

ಕೇರಳದ ರಾಜ್ಯದ ಕೊಚ್ಚಿನ್ ನಿವಾಸಿಗಳಾದ ಜಸ್ಟಿನ್(34), ಶೀಜಾ(33), ಜೋಶ್(28) ಹಾಗೂ ಹರೀಶ್(17) ಎಂಬವರನ್ನು ನ.24ರಂದು ಬೆಳಗ್ಗೆ 7:30ರ ಸುಮಾರಿಗೆ ಸೈಂಟ್ ಮೇರಿಸ್ ದ್ವೀಪದಿಂದ ರಕ್ಷಿಸಿ ತೀರಕ್ಕೆ ಕರೆತರಲಾಗಿದ್ದು, ವಿಚಾರಣೆ ನಡೆಸಿದ ಮಲ್ಪೆ ಪೊಲೀಸರು ಇವರನ್ನು ಸುರಕ್ಷಿತವಾಗಿ ಕೇರಳ ರಾಜ್ಯಕ್ಕೆ ಕಳುಹಿಸಿಕೊಟ್ಟಿದ್ದಾರೆ.

ಜಸ್ಟಿನ್ ಮತ್ತು ಶೀಜಾ ಕೊಚ್ಚಿನ್‌ನಲ್ಲಿ ಸಣ್ಣ ಹೊಟೇಲ್ ನಡೆಸಿಕೊಂಡು ಬರುತ್ತಿದ್ದು, ಜೋಶ್ ಇವರಲ್ಲಿ ಕೆಲಸ ಮಾಡಿಕೊಂಡಿದ್ದನು ಎನ್ನಲಾಗಿದೆ. ಇವರ ಪೈಕಿ ಹರೀಶ್ 17 ವರ್ಷ ಕೆಳಗಿನ ಕೊಚ್ಚಿನ್ ಫುಟ್ಬಾಲ್ ಅಕಾಡಮಿಯ ಗೋಲ್ ಕೀಪರ್ ಆಗಿದ್ದಾನೆ ಎಂದು ವಿಚಾರಣೆ ಸಂದರ್ಭ ತಿಳಿದುಬಂದಿದೆ.

ಇವರು ನಾಲ್ವರು ನ.21ರಂದು ಕೇರಳದಿಂದ ರೈಲಿನಲ್ಲಿ ಹೊರಟು ಉಡುಪಿ ತಲುಪಿದ್ದರು. ಇಲ್ಲಿ ಕೆಲವೊಂದು ಸ್ಥಳಕ್ಕೆ ಭೇಟಿ ನೀಡಿ ನಂತರ ಗೋವಾ ರಾಜ್ಯಕ್ಕೆ ತೆರಳಿದ್ದರು. ಅಲ್ಲಿಂದ ನ.23ರ ಮಧ್ಯಾಹ್ನ ಉಡುಪಿಗೆ ಆಗಮಿಸಿದ ಇವರು, ಮಧ್ಯಾಹ್ನ 12.30ರ ಸುಮಾರಿಗೆ ಮಲ್ಪೆ ಅಭಿವೃದ್ಧಿ ಸಮಿತಿಯ ಬೋಟಿನ ಮೂಲಕ ಸೈಂಟ್ ಮೇರಿಸ್ ದ್ವೀಪಕ್ಕೆ ತೆರಳಿದ್ದರೆನ್ನಲಾಗಿದೆ.

ಅಲ್ಲಿ ಮೋಜು ಮಾಡಿದ ಇವರು ಸೈಂಟ್ ಮೇರಿಸ್ ದ್ವೀಪದ ಹತ್ತಿರದಲ್ಲೇ ಇರುವ ಇನ್ನೊಂದು ಸಣ್ಣ ದ್ವೀಪಕ್ಕೆ ತೆರಳಿದ್ದರು. ಸಂಜೆಯ ವೇಳೆ ನೀರಿನ ಮಟ್ಟ ಏರಿಕೆಯಾದ ಪರಿಣಾಮ ದ್ವೀಪವನ್ನು ದಾಟಲು ಸಾಧ್ಯವಾಗದೆ ಇವರೆಲ್ಲ ಅಲ್ಲೇ ಉಳಿದುಕೊಂಡಿದ್ದರು. ಈ ಮಧ್ಯೆ ಪ್ರವಾಸಿಗರನ್ನು ವಾಪಸ್ ಕರೆದೊಯ್ಯುವ ಕೊನೆಯ ಬೋಟ್ ಸಂಜೆ 6:45ರ ಸುಮಾರಿಗೆ ದ್ವೀಪಕ್ಕೆ ಬಂದಿದ್ದು, ದ್ವೀಪದಲ್ಲಿ ಇದ್ದ ಎಲ್ಲ ಪ್ರವಾಸಿಗರನ್ನು ಕರೆದುಕೊಂಡು ತೀರಕ್ಕೆ ಬಂದಿತ್ತು.

ಆದರೆ ಕೇರಳದ ಈ ನಾಲ್ವರು ಬೋಟಿನವರಿಗೆ ಕಾಣದೆ ಇದ್ದುದರಿಂದ ಬೋಟು ವಾಪಸ್ ತೀರಕ್ಕೆ ಬಂದಿತು. ನೀರಿನ ಮಟ್ಟ ಇಳಿದ ನಂತರ ಇವರು ಬೋಟು ಆಗಮಿಸುವ ಸ್ಥಳಕ್ಕೆ ಬಂದು ನೋಡಿದಾಗ ಬೋಟು ತೆರಳಿರುವುದು ತಿಳಿಯಿತು. ಈ ಸಂದರ್ಭದಲ್ಲಿ ಯಾರನ್ನು ಕೂಡ ಸಂರ್ಪಕಿಸಲು ಸಾಧ್ಯವಾಗದೆ ಈ ನಾಲ್ವರು ಇಡೀ ರಾತ್ರಿ ಸೈಂಟ್ ಮೇರಿಸ್‌ನಲ್ಲೇ ಕಳೆದರು ಎಂದು ಮಲ್ಪೆ ಪೊಲೀಸರು ತಿಳಿಸಿದರು.

 ಇಂದು ಬೆಳಗ್ಗೆ ಸೈಂಟ್ ಮೇರಿಸ್ ದ್ವೀಪಕ್ಕೆ ತೆರಳಿದ ಬೋಟಿನವರು ಇವರನ್ನು ಗಮನಿಸಿ ತೀರಕ್ಕೆ ಕರೆದುಕೊಂಡು ಬಂದು ಪೊಲೀಸರಿಗೆ ಮಾಹಿತಿ ನೀಡಿದರು. ಸೈಂಟ್ ಮೇರಿಸ್ ದ್ವೀಪದಲ್ಲಿ ರಾತ್ರಿ ಉಳಿದುಕೊಳ್ಳುವುದನ್ನು ನಿಷೇಧಿರುವುದರಿಂದ ಪೊಲೀಸರು ಇವರನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಇವರಲ್ಲಿರುವ ಬೋಟಿನ ಟಿಕೆಟ್, ರೈಲ್ವೆ ಟಿಕೆಟ್, ಗುರುತಿನ ಚೀಟಿಗಳನ್ನು ಪರಿಶೀಲಿಸಿದರು. ನಂತರ ಇವರನ್ನು ಸುರಕ್ಷಿತವಾಗಿ ಕೇರಳ ರಾಜ್ಯಕ್ಕೆ ಕಳುಹಿಸಿ ಕೊಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News