ಮುಳುಗುತ್ತಿದ್ದ ಮಲ್ಪೆ ಬೋಟಿನ ನಾಲ್ವರು ಮೀನುಗಾರರ ರಕ್ಷಣೆ

Update: 2019-11-24 12:11 GMT

ಮಲ್ಪೆ, ನ.24: ಸಮುದ್ರ ಮಧ್ಯೆ ಸಂಭವಿಸಿದ ಅವಘಡದಿಂದ ನೀರಿನಲ್ಲಿ ಮುಳುಗುತ್ತಿದ್ದ ಮಲ್ಪೆಯ ಮೀನುಗಾರಿಕಾ ಬೋಟಿನಲ್ಲಿದ್ದ ನಾಲ್ವರು ಮೀನುಗಾರರನ್ನು ಕರಾವಳಿ ಕವಾಲು ಪಡೆಯ ಪೊಲೀಸರು ರಕ್ಷಿಸಿರುವ ಘಟನೆ ರವಿವಾರ ನಡೆದಿದೆ.

ಭಟ್ಕಳ ಕರಾವಳಿ ಕಾವಲು ಪಡೆ ಪೊಲೀಸ್ ಠಾಣೆ ವ್ಯಾಪ್ತಿಯ ನೇತ್ರಾಣಿ ದ್ವೀಪದಿಂದ ಸುಮಾರು ಎರಡು ನಾಟಿಕಲ್ ಮೈಲ್ ದಕ್ಷಿಣದಲ್ಲಿ ಮಲ್ಪೆಯ ‘ಶ್ರೀಲೀಲಾ’ ಮೀನುಗಾರಿಕಾ ಬೋಟಿನ ಮೇಲ್ಭಾಗದಲ್ಲಿದ್ದ ಡಿಸೇಲ್ ಟ್ಯಾಂಕ್ ಅಕಸ್ಮಿಕವಾಗಿ ಬಿದ್ದು, ಬೋಟಿನ ತಳಭಾಗವು ಒಡೆದಿತ್ತು. ಇದರಿಂದ ಬೋಟಿನ ಒಳಗೆ ನೀರು ನುಗ್ಗಿ ಮುಳುಗುತ್ತಿತ್ತೆನ್ನಲಾಗಿದೆ.

ಈ ಬಗ್ಗೆ ಬೋಟಿನಲ್ಲಿದ್ದ ಮೀನುಗಾರರು ಸಂಬಂಧಪಟ್ಟವರಿಗೆ ಮಾಹಿತಿ ರವಾನಿಸಿದ್ದು, ಈ ಕುರಿತು ಬಂದ ಮಾಹಿತಿಯಂತೆ ಮಲ್ಪೆ ಕರಾವಳಿ ಕಾವಲು ಪಡೆಯ ಪೊಲೀಸ್ ಅಧೀಕ್ಷಕ ಆರ್.ಚೇತನ್ ಮಾರ್ಗದರ್ಶನದಲ್ಲಿ ಭಟ್ಕಳ ಕರಾವಳಿ ಕಾವಲು ಪಡೆ ಪೊಲೀಸರು ತುರ್ತು ಕಾರ್ಯಾಚರಣೆ ನಡೆಸಿದರು.

ಇಂಟರ್‌ಸೆಪ್ಟರ್ ಬೋಟಿನಲ್ಲಿ ಸ್ಥಳಕ್ಕೆ ತೆರಳಿದ ಪೊಲೀಸರು ಬೋಟಿನಲ್ಲಿದ್ದ ಆನಂದ ಮೊಗೇರ, ಗುರು ಖಾರ್ವಿ, ಮಂಜು ನಾಥ, ರಮೇಶ ಛಲವಾದಿ ಎಂಬವರನ್ನು ರಕ್ಷಿಸಿದ್ದಾರೆ. ನೀರು ತುಂಬಿದ ಪರಿಣಾಮ ಬೋಟು ಅದೇ ಸ್ಥಳದಲ್ಲಿ ಮುಳುಗಿದ್ದು, ಮೀನುಗಾರರೆಲ್ಲರು ಸುರಕ್ಷಿತವಾಗಿದ್ದಾರೆ ಎಂದು ಎಸ್ಪಿ ಆರ್. ಚೇತನ್ ತಿಳಿಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಭಟ್ಕಳ ಕರಾವಳಿ ಕಾವಲು ಪಡೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ನಾಗರಾಜ್, ಉಪನಿರೀಕ್ಷಕ ಅಣ್ಣಪ್ಪಮೊಗೇರ, ತಾಂತ್ರಿಕ ಸಿಬ್ಬಂದಿಗಳಾದ ಕ್ಯಾಪ್ಟನ್ ಮಲ್ಲಪ್ಪಮುದಿಗೌಡರ್ ಮತ್ತು ಕಲಾಸಿ ಸಂಜೀವ ನಾಯಕ ಪಾಲ್ಗೊಂಡಿದ್ದರು. ಈ ಕಾರ್ಯಚರಣೆಯಲ್ಲಿ ಭಾಗವಹಿಸಿದ ಪೊಲೀಸ್ ಅಧಿಕಾರಿ ಹಾಗೂ ತಾಂತ್ರಿಕ ಸಿಬ್ಬಂದಿರವರ ಕರ್ತವ್ಯವನ್ನು ಪ್ರಶಂಶಿಸಿ ರುವ ಎಸ್ಪಿ ಚೇತನ್, ಆ ತಂಡಕ್ಕೆ ಸೂಕ್ತ ಬಹುಮಾನವನ್ನು ಘೋಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News