×
Ad

ಅಯೋಧ್ಯೆಯಲ್ಲಿನ ರಾಸುಗಳಿಗೆ ಶೀಘ್ರವೇ ಕೋಟುಗಳ ಭಾಗ್ಯ

Update: 2019-11-24 19:13 IST

ಅಯೋಧ್ಯೆ, ನ.24: ಚಳಿಗಾಲ ಆರಂಭಗೊಂಡಿರುವ ಹಿನ್ನೆಲೆಯಲ್ಲಿ ನಗರದ ವಿವಿಧ ಗೋಶಾಲೆಗಳಲ್ಲಿರುವ ರಾಸುಗಳನ್ನು ಚಳಿಯಿಂದ ರಕ್ಷಿಸಲು ಸೆಣಬಿನ ಕೋಟುಗಳನ್ನು ಖರೀದಿಸಲು ಅಯೋಧ್ಯಾ ಮಹಾನಗರ ಪಾಲಿಕೆಯು ನಿರ್ಧರಿಸಿದೆ.

ಯೋಜನೆಯನ್ನು 3-4 ಹಂತಗಳಲ್ಲಿ ಜಾರಿಗೊಳಿಸಲಾಗುವುದು. ಬೈಶಿಂಗಪುರ ಗೋಶಾಲೆಯಿಂದ ಇದನ್ನು ಆರಂಭಿಸಲಾಗುವುದು. ಅಲ್ಲಿ ಸುಮಾರು 1,200 ರಾಸುಗಳಿದ್ದು, ಈ ಪೈಕಿ 700 ಹೋರಿಗಳಿವೆ ಮತ್ತು ಉಳಿದವು ದನಕರುಗಳಾಗಿವೆ. ಕರುಗಳಿಗಾಗಿ 100 ಕೋಟುಗಳಿಗೆ ನಾವೀಗಾಗಲೇ ಬೇಡಿಕೆಯನ್ನು ಸಲ್ಲಿಸಿದ್ದು,ನವೆಂಬರ್ ಕೊನೆಯ ವಾರದಲ್ಲಿ ಪೂರೈಕೆಯಾಗಲಿವೆ. ಪ್ರತಿ ಕೋಟಿಗೂ 250 ರೂ.ನಿಂದ 300 ರೂ.ವೆಚ್ಚವಾಗಲಿದೆ. ಕರುಗಳಿಗಾಗಿ ಮೂರು ಪದರಗಳ ಕೋಟುಗಳು ತಯಾರಾಗುತ್ತಿದ್ದು,ತೀರ ಒಳಗಿನ ಪದರಕ್ಕೆ ಸಣಬಿನ ಜೊತೆಗೆ ಮೃದುವಾದ ಬಟ್ಟೆಗಳನ್ನು ಬಳಸುವಂತೆ ಸೂಚಿಸಲಾಗಿದೆ. ಹೋರಿಗಳು ಮತ್ತು ದನಗಳ ಕೋಟುಗಳು ಭಿನ್ನ ವಿನ್ಯಾಸಗಳಲ್ಲಿರಲಿದ್ದು,ಕ್ರಮವಾಗಿ ಒಂದು ಮತ್ತು ಎರಡು ಪದರಗಳನ್ನು ಹೊಂದಿರಲಿವೆ ಎಂದು ಮಹಾನಗರ ಪಾಲಿಕೆಯ ಆಯುಕ್ತ ನೀರಜ್ ಶುಕ್ಲಾ ತಿಳಿಸಿದರು.

ರಾಸುಗಳನ್ನು ಅತಿಯಾದ ಚಳಿಯಿಂದ ಕಾಪಾಡಲು ಗೋಶಾಲೆಗಳಲ್ಲಿ ಉರಿಯುತ್ತಿರುವ ಬೆಂಕಿಯ ವ್ಯವಸ್ಥೆಯನ್ನು ಮಾಡಲಾಗುವುದು,ಅವುಗಳು ಮಲಗಲು ಭತ್ತದ ಒಣಹುಲ್ಲನ್ನು ಹಾಸಲಾಗುವುದು ಎಂದರು.

ಗೋವುಗಳ ಸೇವೆ ನಮಗೆ ಮುಖ್ಯವಾಗಿದೆ. ಇತರ ಗೋಶಾಲೆಗಳನ್ನು ಅಭಿವೃದ್ಧಿಗೊಳಿಸಿ ಅವುಗಳನ್ನು ರಾಜ್ಯದಲ್ಲೇ ಅತ್ಯುತ್ತಮ ಗೋಶಾಲೆಗಳನ್ನಾಗಿಸುತ್ತೇವೆ ಎಂದು ಮೇಯರ್ ರಿಷಿಕೇಷ ಉಪಾಧ್ಯಾಯ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News