×
Ad

ಬಂಟ್ವಾಳ ತಾಲೂಕು ಮಟ್ಟದ ತುಳು ನೃತ್ಯ ಭಜನಾ ಸ್ಪರ್ಧೆ ಉದ್ಘಾಟನೆ

Update: 2019-11-24 22:40 IST

ಬಂಟ್ವಾಳ, ನ. 24: ಭಜನೆ ನಡೆಸುವ ಸಂದರ್ಭ ಭಾವನೆಯನ್ನು ಜೊತೆಗೂಡಿಸಬೇಕು. ಭಜನೆ ಮಾಡುವವರಿಗೆ ಹೆದರಿಕೆ ಇರುವುದಿಲ್ಲ. ಶಕ್ತಿಯುತವಾದ ಸದೃಢ ಸಮಾಜ ನಿರ್ಮಾಣಕ್ಕೆ ಭಜನೆ ಕೊಡುಗೆ ನೀಡುತ್ತದೆ ಎಂದು ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದ್ದಾರೆ.

ತುಳುಕೂಟ ಬಂಟ್ವಾಳ ಆಶ್ರಯದಲ್ಲಿ ಬಂಟ್ವಾಳ ಸ್ಪರ್ಶ ಕಲಾ ಮಂದಿರದಲ್ಲಿ ರವಿವಾರ ಬಂಟ್ವಾಳ ತಾಲೂಕು ಮಟ್ಟದ ತುಳು ನೃತ್ಯ ಭಜನಾ ಸ್ಪರ್ಧೆ ಉದ್ಘಾಟನಾ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿ, ಧನಾತ್ಮಕವಾದ ಶಕ್ತಿಯನ್ನು ಒದಗಿಸುವ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಹಾರೈಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಹಿಂದುತ್ವ ಉಳಿವಿಗೆ ಭಜನೆ ಕಾರಣ. ಭಜನೆ ಆತ್ಮವಿಶ್ವಾಸ ವೃದ್ಧಿಸುತ್ತದೆ ಹಾಗೂ ನೃತ್ಯಭಜನೆಯಿಂದ ದೈಹಿಕವಾಗಿ ತೊಡಗಿಸಿಕೊಳ್ಳಲು ಸಾಧ್ಯ. ತುಳು ಪಂಚದ್ರಾವಿಡ ಭಾಷೆಗಳಲ್ಲಿ ಪ್ರಾಚೀನವಾಗಿದ್ದು, ತುಳುವರು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ಹೇಳಿದರು.

ತುಳುಕೂಟ ಅಧ್ಯಕ್ಷ ಸುದರ್ಶನ ಜೈನ್ ಅಧ್ಯಕ್ಷತೆ ವಹಿಸಿದ್ದರು. ವಕೀಲ ಅಶ್ವನಿ ಕುಮಾರ್ ರೈ, ಉದ್ಯಮಿ ನಾಗೇಶ್ ಕುಲಾಲ್, ಕಾರ್ಯಕ್ರಮದ ಕೋಶಾಧಿಕಾರಿ, ಉದ್ಯಮಿ ಸುಭಾಶ್ಚಂದ್ರ ಜೈನ್ ಶುಭ ಹಾರೈಸಿದರು.  ಮತ್ತೋರ್ವ ಸಂಚಾಲಕ ಕೈಯೂರು ನಾರಾಯಣ ಭಟ್ ಪಾಸ್ತಾವಿಸಿದರು. ಭಜನಾ ಸಮಿತಿ ಸಂಚಾಲಕ ಸರಪಾಡಿ ಅಶೋಕ್ ಶೆಟ್ಟಿ ಸ್ವಾಗತಿಸಿದರು. ಭಜನಾ ಸಮಿತಿ ಸಂಚಾಲಕ ಮಂಜು ವಿಟ್ಲ ವಂದಿಸಿದರು. ತುಳುಕೂಟ ಕಾರ್ಯದರ್ಶಿ ಎಚ್.ಕೆ.ನಯನಾಡು ಕಾರ್ಯಕ್ರಮ ನಿರೂಪಿಸಿದರು

29 ತಂಡಗಳು ಭಾಗಿ

ಇದೇ ವೇಳೆ ವಾರದ ಹಿಂದೆ ತುಳುಕೂಟ ಆಯೋಜಿಸಿದ ಕತೆ, ಕವನ ವಾಚನ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ರಮೇಶ್ ನಾಯಕ್ ರಾಯಿ ಬಹುಮಾನಿತರ ಪಟ್ಟಿ ವಾಚಿಸಿದರು. ಬಳಿಕ ಸುಮಾರು 29 ತಂಡಗಳು ತುಳು ಭಾಷೆಯಲ್ಲಿ ಕುಣಿತ ಭಜನೆ ಸ್ಪರ್ಧೆಯಲ್ಲಿ ಪಾಲ್ಗೊಂಡವು. ರಾಮಕೃಷ್ಣ ಕಾಟುಕುಕ್ಕೆ, ಅರುಣಾ ರಾವ್ ಕಟೀಲು ಮತ್ತು ಕಿಶೋರ್ ಪೆರ್ಲ ತೀರ್ಪುಗಾರರಾಗಿ ಹಾಗೂ ಶೀನಪ್ಪ ನಾಯ್ಕ್ ಸ್ಪರ್ಧೆಗೆ ಸಹಕರಿಸಿದರು.

ಭಜನಾ ಸ್ಪರ್ಧೆಯ ನಿರ್ವಹಣೆಯನ್ನು ತುಳು ಸಾಹಿತ್ಯ ಅಕಾಡಮಿ ಸದಸ್ಯೆ ಮಲ್ಲಿಕಾ ಶೆಟ್ಟಿ ನಡೆಸಿದರು. ಕಾರ್ಯಕ್ರಮದಲ್ಲಿ ತುಳುಕೂಟದ ನಾನಾ ಸಮಿತಿಯ ಪದಾಧಿಕಾರಿಗಳು ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News