ಕೊಲ್ಲೂರು ದೇವಳದ ಹೆಸರಿನಲ್ಲಿ ನಕಲಿ ವೆಬ್‌ಸೈಟ್ : ಕಾನೂನು ಕ್ರಮದ ಎಚ್ಚರಿಕೆ
ಉಡುಪಿ, ನ.25: ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ಹೆಸರನ್ನು ದುರುಪಯೋಗಪಡಿಸಿಕೊಂಡು, ಅನಧಿಕೃತ ವೈಬ್‌ಸೈಟ್ ಬಳಸಿ, ದೇವಸ್ಥಾನದ ಸೇವೆಗಳ ಬಗ್ಗೆ ಸಾರ್ವಜನಿಕರಿಂದ ಹೆಚ್ಚಿನ ಹಣ ವಸೂಲಿ ಮಾಡುವ ಯಾವುದೇ ವ್ಯಕ್ತಿ/ಸಂಸ್ಥೆಯ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.
ದುಷ್ಕರ್ಮಿಗಳು ದೇವಸ್ಥಾನ ಅಥವಾ ಧಾರ್ಮಿಕ ದತ್ತಿ ಇಲಾಖೆಯಿಂದ ಅನುಮತಿ ಪಡೆಯದೆ www.mookambika.co.in ಎಂಬ ನಕಲಿ ವೆಬ್‌ಸೈಟ್ ತೆರೆದು ಚಂಡಿಕಾ ಹೋಮ ಹಾಗೂ ಇತರ ಸೇವೆಗಳ ಮುಂಗಡ ಬುಕ್ಕಿಂಗ್ ಮಾಡಿ ಭಕ್ತರಿಂದ ಹೆಚ್ಚಿನ ಹಣ ವಸೂಲಿಗೈದು ದೇವಳಕ್ಕೆ ನಷ್ಟ ಉಂಟು ಮಾಡುತ್ತಿರುವುದಾಗಿ ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಅರವಿಂದ ಎಸ್.ಸುತಗುಂಡಿ ನ.23ರಂದು ನೀಡಿದ ದೂರಿನಂತೆ ಉಡುಪಿ ಜಿಲ್ಲಾ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಸಲಾಗುತ್ತಿದೆ.
ಸಾರ್ವಜನಿಕರು ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ಅಧಿಕೃತ ವೆಬ್‌ಸೈಟ್ www.kollurmookambika.orgನ್ನು ಉಪಯೋಗಿಸಿ, ನಿಗದಿತ ಶುಲ್ಕ ಪಾವತಿಸಿ, ತಮ್ಮ ಸೇವೆಗಳನ್ನು ಬುಕ್ಕಿಂಗ್ ಅಥವಾ ಮುಂಗಡ ಬುಕ್ಕಿಂಗ್ ಮಾಡಿಕೊಳ್ಳಬೇಕು ಮತ್ತು ಅನಧಿಕೃತ ವೆಬ್‌ಸೈಟ್ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಉಡುಪಿ ಜಿಲ್ಲಾ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದೆ.