ಭಾರತೀಯ ಸಂಸ್ಕೃತಿ ಉಳಿಸಲು ಯಕ್ಷಗಾನ ಸಹಕಾರಿ: ಪಲಿಮಾರು ಶ್ರೀ
ಉಡುಪಿ, ನ. 25: ಪಾಶ್ಚಿಮಾತ್ಯ ಸಂಸ್ಕೃತಿಯು ಇಂದು ನಮ್ಮ ಮಕ್ಕಳನ್ನು ಬೇರೆ ಕಡೆ ಸೆಳೆಯುತ್ತಿದೆ. ಇಂತಹ ಸಂದರ್ಭದಲ್ಲಿ ನಮ್ಮ ಮಕ್ಕಳನ್ನು ಭಾರತೀಯ ಸಂಸ್ಕೃತಿಯನ್ನು ಉಳಿಸುವ ಯಕ್ಷಗಾನದಂತಹ ಕಲೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕೆಂದು ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಉಡುಪಿ ಶ್ರೀಕೃಷ್ಣ ಮಠ, ಪರ್ಯಾಯ ಪಲಿಮಾರು ಮಠದ ಆಶ್ರಯದಲ್ಲಿ ಉಡುಪಿ ಯಕ್ಷಶಿಕ್ಷಣ ಟ್ರಸ್ಟ್ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಉಡುಪಿ ಯಕ್ಷಗಾನ ಕಲಾರಂಗದ ಸಹಯೋಗದೊಂದಿಗೆ ಮಠದ ರಾಜಾಂಗಣದಲ್ಲಿ ಡಿ.19ರವರೆಗೆ ಹಮ್ಮಿಕೊಳ್ಳಲಾಗಿರುವ ಕಿಶೋರ ಯಕ್ಷಗಾನ ಸಂಭ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಇಂದಿನ ಶಿಕ್ಷಣದಿಂದ ಮಕ್ಕಳು ಹೆಚ್ಚು ಒತ್ತಡ ಹಾಗೂ ಬ್ಯುಸಿಯಾಗಿರುತ್ತಾರೆ. ಈ ಮಧ್ಯೆ ಮಕ್ಕಳು ಯಕ್ಷಗಾನ ಕಲಿತು ಪ್ರದರ್ಶನ ನೀಡುತ್ತಿರುವುದು ಮೆಚ್ಚುವಂತಹ ಕೆಲಸವಾಗಿದೆ. ಯಕ್ಷಗಾನ ಕಲೆ ಉಡುಪಿ ಜಿಲ್ಲೆ ನೀಡಿರುವ ದೊಡ್ಡ ಕೊಡುಗೆಯಾಗಿದೆ. ಮಕ್ಕಳಿಗೆ ತುಂಬಾ ಖುಷಿ ಕೊಡುವ ಕಲೆ ಇದಾಗಿದೆ ಎಂದು ಅವರು ತಿಳಿಸಿದರು.
ಮಕ್ಕಳ ಮನಸ್ಸು ಯಾವುದೇ ರೀತಿಯ ಶಿಕ್ಷಣ ನೀಡಿದರೂ ಸ್ವೀಕರಿಸುತ್ತದೆ. ಆದುದರಿಂದ ಈ ವಯಸ್ಸಿನಲ್ಲಿ ಮಕ್ಕಳಿಗೆ ಯಕ್ಷಗಾನ ಕಲಿಸಿದರೆ ಅದು ಜೀವನ ಪರ್ಯಂತ ಅವರಲ್ಲಿ ಉಳಿದುಕೊಳ್ಳುತ್ತದೆ. ಯಕ್ಷಗಾನ ಕಲಿಯುವ ಮಕ್ಕಳಿಗೆ ಪ್ರತ್ಯೇಕವಾಗಿ ಯೋಗ ಮಾಡುವ ಅಗತ್ಯ ಬರುವುದಿಲ್ಲ. ಯಾಕೆಂದರೆ ಯಕ್ಷಗಾನವೇ ಬಳ ದೊಡ್ಡ ಯೋಗವಾಗಿದೆ ಎಂದರು.
ವೇದಿಕೆಯಲ್ಲಿ ಯಕ್ಷ ಶಿಕ್ಷಣ ಟ್ರಸ್ಟ್‌ನ ಉಪಾಧ್ಯಕ್ಷ ಡಾ.ನಿ.ಬಿ.ವಿಜಯ ಬಲ್ಲಾಳ್, ಮಠದ ದಿವಾನ ವೇದವ್ಯಾಸ ತಂತ್ರಿ, ಉದ್ಯಮಿ ವಿಶ್ವನಾಥ್ ಶೆಣೈ, ಟ್ರಸ್ಟಿ ನಾರಾಯಣ ಹೆಗಡೆ ಉಪಸ್ಥಿತರಿದ್ದರು.
ಟ್ರಸ್ಟಿ ಎಸ್.ವಿ.ಭಟ್ ಸ್ವಾಗತಿಸಿದರು. ಇನ್ನೋರ್ವ ಟ್ರಸ್ಟಿ ಎಂ.ಗಂಗಾಧರ್ ರಾವ್ ವಂದಿಸಿದರು. ಕಾರ್ಯದರ್ಶಿ ಮುರಳಿ ಕಡೆಕಾರ್ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಇಂದ್ರಾಳಿ ಯಕ್ಷಗಾನ ಕೇಂದ್ರದ ಮಕ್ಕಳಿಂದ ಚಕ್ರವ್ಯೆಹ ಮತ್ತು ಮಣಿಪಾಲ ಮಾಧವ ಕೃಪ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಗಳಿಂದ ಶಶಿಪ್ರಭಾ ಪರಿಣಯ ಯಕ್ಷಗಾನ ಪ್ರದರ್ಶನ ನಡೆಯಿತು.