ಗುಂಡಿಬೈಲು: ರಸ್ತೆಯಲ್ಲೇ ಹರಿಯುತ್ತಿರುವ ಒಳಚರಂಡಿ ತ್ಯಾಜ್ಯ ನೀರು
ಉಡುಪಿ, ನ.25:ನಗರದ ಗುಂಡಿಬೈಲು ವಿಜಯತಾರ ಹೊಟೇಲ್ ಹಿಂಭಾಗದಲ್ಲಿರುವ ಜನ ವಸತಿ ಪ್ರದೇಶದ ಒಳಚರಂಡಿ ನೀರು ಸೊರಿಕೆಯಾಗಿ ರಸ್ತೆಯಲ್ಲಿ ಹರಿಯುತ್ತಿದ್ದು, ಕಳೆದ ಎರಡು ತಿಂಗಳುಗಳಿಂದ ಸ್ಥಳೀಯರನ್ನು ಕಾಡು ತ್ತಿರುವ ಈ ಸಮಸ್ಯೆಗೆ ಪರಿಹಾರ ಒದಗಿಸುವಂತೆ ಆಗ್ರಹಿಸಿ ಇಂದು ಉಡುಪಿ ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಒಳಚರಂಡಿಯ ತ್ಯಾಜ್ಯ ನೀರು ರಸ್ತೆ ಮತ್ತು ಅಸುಪಾಸಿನ ಸ್ಥಳಗಳಲ್ಲಿ ತುಂಬಿ ಹರಿಯುತ್ತಿದ್ದು, ಇದರಿಂದ ಈ ಪ್ರದೇಶದಲ್ಲಿರುವ ಎರಡು ಅಪಾರ್ಟ್‌ಮೆಂಟ್ ಮತ್ತು ಸುಮಾರು 25 ಮನೆಗಳ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಅಲ್ಲದೆ ಮಕ್ಕಳ ಆರೋಗ್ಯದ ಮೇಲೆ ಇದು ಪರಿಣಾಮ ಬೀರುತ್ತಿದ್ದು, ಸೊಳ್ಳೆ ಸಮಸ್ಯೆ ಉಲ್ಭಣಗೊಂಡಿದೆ ಎಂದು ಮನವಿಯಲ್ಲಿ ದೂರಲಾಗಿದೆ.
ರಸ್ತೆಯಲ್ಲೇ ಕೊಳಚೆ ನೀರು ಹರಿಯುತ್ತಿರುವುದರಿಂದ ಸ್ಥಳೀಯ ಮಕ್ಕಳು ನಡೆದುಕೊಂಡು ಶಾಲೆಗೆ ಹೋಗಲು ತೊಂದರೆ ಯಾಗುತ್ತಿದೆ. ಇಲ್ಲಿ ವಾಹನ ಸಂಚರಿಸಲು ಹಾಗೂ ಸಾರ್ವಜನಿಕರು ನಡೆದಾಡಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಪರಿಸರದಲ್ಲಿ ಕೆಲವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಕೂಡಲೇ ಸ್ಥಳ ಪರಿಶೀಲಿಸಿ ಈ ಸಮಸ್ಯೆಯನ್ನು ಪರಿಹರಿಸ ಬೇಕು ಎಂದು ಸ್ಥಳೀಯರು ಮನವಿಯಲ್ಲಿ ನಗರಸಭೆಯನ್ನು ಒತ್ತಾಯಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪೌರಾಯುಕ್ತ ಆನಂದ ಕಲ್ಲೊಳ್ಕಿರ್, ನಗರದಲ್ಲಿ ಈ ರೀತಿಯ ಸಮಸ್ಯೆ ಹಲವು ಕಡೆ ಕಂಡುಬಂದಿದ್ದು, ಇದಕ್ಕೆ ತಾತ್ಕಾಲಿಕ ಪರಿಹಾರ ಸಾಧ್ಯವಿಲ್ಲ. ನಾಳೆಯಿಂದ ಒಳಚರಂಡಿ ಕಾಮಗಾರಿ ಆರಂಭಿಸಲಾಗು ವುದು. ಇದರಿಂದ ಈ ಸಮಸ್ಯೆಗೆ ಪರಿಹಾರ ದೊರೆಯಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳಾದ ಚಂದ್ರಶೇಖರ್, ಹೇಮಲತಾ, ದಿವಾಕರ ಉಪಾಧ್ಯ, ಪ್ರಿಯ, ಯು.ಗಂಗಾ ಮೊದಲಾದವರು ಉಪಸ್ಥಿತರಿದ್ದರು.